*ದಿ.11ರಿಂದ 16ರವರೆಗೆ ಹೋಮ ಹವನ, ಧಾರ್ಮಿಕ, ಸಾಂಸ್ಕೃತಿಕ ಕಲರವ
ಹುಬ್ಬಳ್ಳಿ: ಏ. 11 ರಿಂದ 16 ರವರೆಗೆ ಪೂಜ್ಯ ವಲ್ಲಭ ಚೈತನ್ಯರಿಂದ ಪ್ರತಿಷ್ಠಾಪನೆಗೊಂಡ ತಡಸ ಶ್ರೀ ಗಾಯತ್ರಿ ತಪೋಭೂಮಿಯಲ್ಲಿ
ಶ್ರೀ ಗಾಯತ್ರಿ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ
ಪ್ರತಿಷ್ಠಾಪನೆಯ ರಜತ ಮಹೋತ್ಸವ, ಹೋಮ ಹವನ, ಸಂತ ಮಹಂತರ ಸಮಾಗಮ ನಡೆಯಲಿದೆ.
ತಪೋಭೂಮಿಯ ಅಧ್ಯಕ್ಷರಾದ ವಿನಾಯಕ ಆಕಳವಾಡಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ, ರಜತ ಮಹೋತ್ಸವದ ಹಿನ್ನಲೆ ಏ.9 ರಿಂದ ಶ್ರೀ ಗುರುಚರಿತ್ರೆ 108 ಪಾರಾಯಣ ನಡೆಯಲಿದ್ದು, 11 ರಂದು ಸಿಂದಗಿಯ ದತ್ತಪ್ಪಯ್ಯ ಸ್ವಾಮಿಗಳು. ಯರಗಲ್ಲ ಸಿದ್ಧರಾಜ ಮಹಾಸ್ವಾಮಿಗಳು, ಕೆಂಗೇರಿಮುರಗೋಡದ ದಿವಾಕರ ಶಂಕರ ದೀಕ್ಷಿತರು, ಸವದತ್ತಿಯ ಪ್ರಸನ್ನ ದೀಕ್ಷಿತರು, ಆನಂದವನ ಅಗಡಿಯ ಗುರುದತ್ತಮೂರ್ತಿ ಚಕ್ರವರ್ತಿಗಳ ಸಾನ್ನಿಧ್ಯದಲ್ಲಿ ಸಂತ ಸಮಾಗಮ ನಡೆಯಲಿದೆ ಎಂದರು.
12 ರಂದು ಬೆ.11 ರಿಂದ 12 ರವರೆಗೆ ಮತ್ತು ಸಂಜೆ 5 ರಿಂದ 6 ರವರೆಗೆ ಸಿದ್ದಾಪುರದ ಬ್ರಹ್ಮಾನಂದ ಭಾರತಿ ಸ್ವಾಮಿಗಳಿಂದ ಆಶೀರ್ವಚನ, ಸಂಜೆ 6 ರಿಂದ ಮಾಯಾ ಮಂಥರೆ ಎಂಬ ಯಕ್ಷಗಾನ ಪ್ರದರ್ಶನ, 13 ರಂದು ಸೂಲಿಬೆಲೆ ಚಕ್ರವರ್ತಿಯವರಿಂದ ಉಪನ್ಯಾಸ ಸಂಜೆ 6 ಕ್ಕೆ ದಾಸವಾಣಿ ಕಾರ್ಯಕ್ರಮ, 14 ರಂದು ಶಿರಹಟ್ಟಿ ಫಕ್ಕೀರ ಸಿದ್ಧರಾಮ ಮಹಾಸ್ವಾಮಿಗಳ ಸಾನಿಧ್ಯ ಮತ್ತು ಆಶೀರ್ವಚನ ನಡೆಯಲಿದೆ. 16 ರಂದು ಶ್ರೀಗಳಿಂದ ಸಾಗಿ ಬಂದ ಎಲ್ಲ ಹೋಮಗಳ ಪೂರ್ಣಹುತಿ ನಡೆಯಲಿವೆ. ದೇಶದ ಎಲ್ಲ ಪವಿತ್ರನದಿಗಳಿಂದ ತರಲಾದ ಪವಿತ್ರ ಜಲದಿಂದ ಗಾಯತ್ರಿಮಾತೆಗೆ ಕುಂಭಾಭಿಷೇಕ ತದನಂತರ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳಿಂದ ಆಶೀರ್ವಚನ ನಡೆಯಲಿದೆ ಎಂದರು.
ರಜತಮಹೋತ್ಸವದ ನಿಮಿತ್ತವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಅಂಗವಾಗಿ ದೇಗುಲದಲ್ಲಿ ನಿತ್ಯ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.ಈಗಾಗಲೇ ಬಹುತೇಕ ಸಿದ್ದತೆ ಪೂರ್ಣಗೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾರವಾರ ಪದ್ಮಪುಷ್ಪ ಗುರುಕುಲ ಕುಲಪತಿಗಳಾದ ಶಿವಮೂರ್ತಿ ಆರ್. ಜೋಯ್ಸ್, ತಡಸ ಗಾಯತ್ರಿ ತಪೋಭೂಮಿಯ ಉಪಾಧ್ಯಕ್ಷರಾದ ಅಶೋಕ ಹರಪನಹಳ್ಳಿ, ನೀಲಕಂಠಸಾ ಆಕಳವಾಡಿ, ಬಾಬುರಾವ್ ಶ್ರೀನಿವಾಸ ಘಂಟಸಾಲಾ ಉಪಸ್ಥಿತರಿದ್ದರು.