*ಘಟನೆಯಲ್ಲಿ ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ : ಸಿಎಂ / ಕಾಶ್ಮೀರದಲ್ಲಿ ಕನ್ನಡಿಗರ ರಕ್ಷಣೆಯಲ್ಲಿ ಸಚಿವ ಲಾಡ್ /ಪಾರ್ಥಿವ ಶರೀರ ಕಳುಹಿಸಲು ಸಕಲ ವ್ಯವಸ್ಥೆ : ಜೋಶಿ*
ಬೆಂಗಳೂರು : ಜಮ್ಮುಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದವರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ಹತ್ತು ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡಿದ್ದಾರೆ.
ಉಗ್ರರ ದಾಳಿಯ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಸಿಎಂ ಮಾಧ್ಯಮಗಳಿಗೆ ತಿಳಿಸಿದರು.
ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ ಮುಖ್ಯಮಂತ್ರಿಗಳು, ಕರ್ನಾಟಕದ ಪ್ರವಾಸಿಗು ಮೃತರಾಗಿರುವ ಬಗ್ಗೆ ಮಾಹಿತಿ ನೀಡಿದರು.ಕನ್ನಡಿಗರ ರಕ್ಷಣೆ ಹಾಗೂ ಇನ್ನಿತರ ವ್ಯವಸ್ಥೆಗಳಿಗಾಗಿ ಅಧಿಕಾರಿಗಳ ತಂಡವನ್ನು ಅಲ್ಲದೆ ಸಚಿವ ಸಂತೋಷ್ ಲಾಡ್ ಸಹ ಕಾಶ್ಮೀರಕ್ಕೆ ತೆರಳಿದ್ದಾರೆಂದು ಹೇಳಿದರು.
ಕಾಶ್ಮೀರದ ಪಹಲ್ಗಾಮ್ ನಡೆದಿರುವ ಉಗ್ರರ ದಾಳಿ ಪೂರ್ವಯೋಜಿತ ಸಂಚು. ಪ್ರಾಣಹತ್ಯೆ ಮಾಡಿರುವ ಈ ಘಟನೆ ಅತ್ಯಂತ ಖಂಡನೀಯ. ಘಟನೆಯಲ್ಲಿ ಸುಮಾರು 28 ಜನ ಮೃತಪಟ್ಟಿರುವ ಭೀಕರವಾದ ಉಗ್ರರ ದಾಳಿ ನಡೆಯುವ ಮಾಹಿತಿ ಮೊದಲೇ ತಿಳಿಯದಿರುವುದು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ. ಈ ಹಿಂದೆ ನಡೆದ ಪುಲ್ವಾಮಾ ಘಟನೆಯಲ್ಲಿ ಗುಪ್ತಚರ ಮಾಹಿತಿಯ ವೈಫಲ್ಯವಿದೆ ಎಂದರು.
ಕಾಶ್ಮೀರದಲ್ಲಿಯೆ ಇರುವ ಸಚಿವ ಲಾಡ್ ಕನ್ನಡಿಗರ ರಕ್ಷಣೆಗಾಗಿ ನಿಂತಿದ್ದು ವಿಶೇಷ ವಿಮಾನದಲ್ಲಿ ಕರೆತರಲಾಗುವುದು ಎಂದಿದ್ದಾರೆ.
ಫಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂಬ ಮಾಹಿತಿಯಿದೆ. ಮೃತರ ಪಾರ್ಥೀವ ಶರೀರ, ಗಾಯಾಳುಗಳು-ಕುಟುಂಬಸ್ಥರನ್ನು ಹಾಗೂ ಪ್ರವಾಸಿಗರನ್ನು ಸ್ವಂತ ಊರು-ಮನೆಗಳಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚಿನ ವಿಮಾನ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಕರ್ನಾಟಕದ ಅನೇಕರು ಫಹಲ್ಗಾಮ್ ಪ್ರವಾಸಿ ತಾಣದಲ್ಲಿದ್ದು, ರಾಜ್ಯಕ್ಕೆ ಮರಳಲು ಬಯಸಿದ್ದರಿಂದ ಅವರೆಲ್ಲರನ್ನು ಕರೆತರಲು ವಿಶೇ಼ಷ ವಿಮಾನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಗ್ರಾಹಕ ವ್ಯವಹಾರಗಳ ಸಚಿವನಾಗಿ ವಿಮಾನಯಾನ ಕಂಪನಿಗಳು ಹೆಚ್ಚಿನ ಟಿಕೆಟ್ ದರ ಕಲ್ಪಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಜೋಶಿ ತಿಳಿಸಿದರು.
ಉಗ್ರರ ಗುಂಡಿನ ದಾಳಿಯಲ್ಲಿ ಬಲಿಯಾದ ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಅವರ ಮೃತದೇಹವನ್ನು ನಾಳೆ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಲಿದ್ದು. ಬಳಿಕ ರಸ್ತೆಯ ಮೂಲಕ ಶಿವಮೊಗ್ಗಕ್ಕೆ ತರಳಾಗುತ್ತೆ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಶಾಸಕ ಚನ್ನಬಸಪ್ಪ ಹೇಳಿದ್ದಾರೆ.
*ಪ್ರತಿಭಟನೆ* : ಕಾಶ್ಮೀರದಲ್ಲಿ ನಡೆದ ಘಟನೆ ಖಂಡಿಸಿ ಹುಬ್ಬಳ್ಳಿಯಲ್ಲಿ ಎಬಿವಿಪಿ ಬುಧವಾರ ಪ್ರತಿಭಟನೆ ನಡೆಸಿದ್ದು, ಬಿಜೆಪಿ, ಯುವ ಕಾಂಗ್ರೇಸ್ ವತಿಯಿಂದಲೂ ಮೌನ ಮೆರವಣಿಗೆ, ಮೇಣದಬತ್ತಿ ಮೆರವಣಿಗೆ ನಡೆದಿದೆ.