ಹುಬ್ಬಳ್ಳಿ: ಕಳೆದ ಹನ್ನೊಂದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಹುಬ್ಬಳ್ಳಿ ಗ್ರಾಮೀಣ ಇನ್ಸಪೆಕ್ಟರ್ ಮುರುಗೇಶ ಚನ್ನಣ್ಣವರ ಹಾಗೂ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ತಾಲೂಕಿನ ಬುಡರಸಿಂಗಿ ಗ್ರಾಮದ ಪ್ರಕಾಶ ಸಾತಪ್ಪ ಹಂಚಿನಮನಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ಇರುವಿಕೆಯ ಸುಳಿವನ್ನು ತನ್ನ ಕುಟುಂಬದವರಿಗೂ ನೀಡದೇ ತನ್ನ ಹೆಸರಿನಲ್ಲಿ ಯಾವುದೇ ಸಿಮ್ ಸಹ ಪಡೆದುಕೊಳ್ಳದೆ ಬೇರೆಯವರ ಮೊಬೈಲ್ ನಂಬರ್ ಪಡೆದು ಯಾಮಾರಿಸಿದ್ದ ಈತನನ್ನು ಬೆಂಗಳೂರಿನ ಸಾತಗುಡಿ ಎಂಬಲ್ಲಿ ವಶಕ್ಕೆ ಪಡೆದಿದ್ದಾರೆ. ರಾಜ್ಯದ ಬೇರೆ ಬೇರೆ ನಗರಗಳಲ್ಲಿ ವಾಸವಾಗಿದ್ದ ಈತನನ್ನು ಕಳೆದ ಮೂರು ದಿನಗಳಿಂದ ಹೊಸಪೇಟೆ, ಮದ್ದೂರು, ಬೆಂಗಳೂರು ಮುಂತಾದೆಡೆ ಚಲನವಲನದ ಮೇಲೆ ಕಣ್ಣಿಟ್ಟು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
2014ನೇ ಸಾಲಿನಲ್ಲಿ ಗ್ರಾಮದಲ್ಲಿ ಪಕ್ಕದ ಮನೆಯ ಸೋಮರಾಜ ಸಣ್ಣದುರ್ಗಪ್ಪ ದೇವಲಾಪುರ ಈತನ ಮೇಲೆ ಕುಡಗೋಲಿನಿಂದ ಹಲ್ಲೆ ಮತ್ತು ನೂಲ್ವಿ ಗ್ರಾಮದ ಭೀಮಾಬಾಯಿ ಘೋರ್ಷಡೆ ಎಂಬುವವರ ಮನೆಗೆ ನೀರು ಕೇಳುವ ನೆಪದಲ್ಲಿ ನುಗ್ಗಿ ಮಾಂಗಲ್ಯ ದೋಚಿದ ಪ್ರಕರಣದಲ್ಲಿ ಪ್ರಕಾಶ ಆರೋಪಿಯಾಗಿದ್ದ. ಎರಡೂ ಪ್ರಕರಣಗಳಲ್ಲಿ ಜಾಮೀನು ಪಡೆದು ನಂತರ ನ್ಯಾಯಾಲಯದ ಮುದ್ದತ್ತಿಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಈತನ ಮೇಲೆ ಓಪನ್ ವಾರಂಟ್ ನ್ಯಾಯಾಲಯ ಹೊರಡಿಸಿತ್ತು.
ಈತನ ಪತ್ತೆಗೆ ಪಿಐ ಚನ್ನಣ್ಣವರ ಅಪರಾದ ವಿಭಾಗದ ಸಿಬ್ಬಂದಿಗಳಾದ ಚನ್ನಪ್ಪ ಬಳ್ಳೊಳ್ಳಿ, ತಿಪ್ಪಣ್ಣ ಆಲೂರ ತಂಡ ಕಾರ್ಯಾಚರಣೆ ಕೈಗೊಂಡಿದ್ದು ತಂಡದ ಸಾಧನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ.
*ಹಲ್ಲೆ :ಏಳು ದರೋಡೆಕೋರರು ಅಂದರ್*
ಅಳ್ನಾವರ ಟೋಲ್ ಬಳಿ ಕಾರಿನಲ್ಲಿದ್ದ ಹೊರಟವರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೇ ಮಾಡಿ ಒಂದು ಲಕ್ಷ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಪೊಲೀಸರು ಏಳು ಜನ ದರೋಡೆಕೋರರನ್ನು ಬಂಧಿಸಿದ್ದಾರೆ.
ಸಿ.ಸಿ.ಟಿ.ವಿ ಪುಟೇಜ ಮತ್ತು ದ್ವಿಚಕ್ರ ವಾಹನದ ನಂಬರಿನ ಆಧಾರದ ಮೇಲೆ 7 ಜನ ಆರೋಪಿತರನ್ನು ಬಂಧಿಸಿ ದರೋಡೆ ಮಾಡಲಾದ 1 ಲಕ್ಷ ನಗದು, 6 ಮೊಬೈಲ್ ಎರಡು ಮೋಟಾರ ಸೈಕಲ್ನ್ನು ಎಸ್ಪಿ ಗುಂಜನ ಆರ್ಯ ಸಹಿತ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಧಾರವಾಡ ಗ್ರಾಮೀಣ ಪಿಐ ಎಸ್.ಎಸ್. ಕಮತಗಿ ತಂಡ 24 ಗಂಟೆಯಲ್ಲಿ ಬಂಧಿಸಿದೆ. ದಿ. 16ರಂದು ರಾತ್ರಿ 9-30ರ ಸುಮಾರಿಗೆ ಈ ಘಟನೆ ನಡೆದಿತ್ತು. ಕಾರಿನಲ್ಲಿ ಹೊರಟವರು ಮೂತ್ರ ವಿಸರ್ಜನೆಗೆ ನಿಂತಾಗ ಡಿಯೋ ಗಾಡಿಯಲ್ಲಿ ಬಂದು ಆರೋಪಿಗಳು ಈ ಕೃತ್ಯ ನಡೆಸಿದ್ದರು.