*ರೈತರಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಿ/ ದಾಖಲೆಗಳನ್ನು ಕರಾರುವಾಕ್ಕಾಗಿ ಇಡುವುದು ಅವಶ್ಯಕ/ ಭೂಮಿ ಬೀಟ್ ಜಾರಿ*
ಬೆಂಗಳೂರು, : ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಯನ್ನು ಒಂದು ರೂಪಾಯಿ ಲಂಚವಿಲ್ಲದೇ, ಮಧ್ಯವರ್ತಿಗಳ ಹಾವಳಿಯಿಲ್ಲದೇ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕಂದಾಯ ಇಲಾಖೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ 1000 ಗ್ರಾಮ ಆಡಳಿತಾಧಿಕಾರಿಗಳಿಗೆ ನೇಮಕಾತಿ ಆದೇಶ ವಿತರಣೆ, ಅಭಿಶಿಕ್ಷಣ ತರಬೇತಿ ಮತ್ತು 4000 ಕ್ರೋಮ್ ಬುಕ್ ವಿತರಣೆ ಹಾಗೂ ಸಾಧನೆಯ ಹಾದಿಯಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಹಿಂದೆ 94-95 ರಲ್ಲಿ ಗೋವಿಂದೇಗೌಡರು ಇದ್ದ ಸಂದರ್ಭದಲ್ಲಿ ಒಂದು ಲಕ್ಷ ಉಪಾಧ್ಯಾಯರನ್ನು ಲಂಚವಿಲ್ಲದೇ, ಮಧ್ಯವರ್ತಿಗಳಿಲ್ಲದೇ ನೇಮಕಾತಿ ಮಾಡಲಾಗಿತ್ತು. ಪ್ರಸ್ತುತ ಆರು ಲಕ್ಷ ಅರ್ಜಿಗಳಲ್ಲಿ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿಗಳು ಆಯ್ಕೆಯಾಗಿದ್ದು, ಆಯ್ಕೆಯಾಗಿರುವವರು ಪುಣ್ಯವಂತರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿದ್ದೀರಿ. 9834 ಒಟ್ಟು ಗ್ರಾಮ ಆಡಳಿತಾಧಿಕಾಗಳಿದ್ದು, ಅದರಲ್ಲಿ 8003 ಜನ ಕಾರ್ಯನಿರ್ವಹಿಸುತ್ತಿದ್ದಾರೆ.ಈಗ 1000 ಜನ ಸೇರ್ಪಡೆಯಾಗುತ್ತಿದ್ದಾರೆ. ಯಾವುದೇ ಗ್ರಾಮ ಆಡಳಿತಾಧಿಕಾರಿಯ ಹುದ್ದೆ ಖಾಲಿ ಇಲ್ಲದಂತೆ ಭರ್ತಿ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.
ಜಮೀನುಗಳ ಲೆಕ್ಕ ಇಡುವುದು ಗ್ರಾಮ ಆಡಳಿತಾಧಿಕಾರಿಗಳ ಜವಾಬ್ದಾರಿ. ಹಳ್ಳಿಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಲು ದಾಖಲಾತಿಗಳು ಸರಿಯಾಗಿರಬೇಕು. ದಾಖಲೆಗಳನ್ನು ಬಹಳ ಕರಾರುವಾಕ್ಕಾಗಿ ಇಡುವುದು ಅವಶ್ಯಕ. ಆಧುನಿಕ ನಾಡಿನಲ್ಲಿ ತಂತ್ರಜ್ಞಾನ, ವಿಜ್ಞಾನ ಬೆಳೆದಿದೆ. ಈಗ ಪ್ರತಿಯೊಂದೂ ಡಿಜಿಟಲೀಕರಣವಾಗಿದೆ. ಆನ್ ಲೈನ್ ನಲ್ಲಿ ದಾಖಲಾತಿಗಳನ್ನು ಪಡೆಯುವ ವ್ಯವಸ್ಥೆ ಬಂದ ನಂತರ ನಾವು ಯಾವುದೇ ಕಾರಣಕ್ಕೂ ತಪ್ಪುಗಳಿಗೆ ಅವಕಾಶ ನೀಡಬಾರದು. ಗ್ರಾಮ ಆಡಳಿತಾಧಿಕಾರಿಗಳ ಜವಾಬ್ದಾರಿ ಬಹಳ ಮಹತ್ವದ್ದು. ರೈತರಿಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಹತ್ತಿರದ ಸಂಬಂಧವಿದ್ದು, ಪ್ರತಿಯೊಬ್ಬ ರೈತರ ಪರಿಚಯ ಅವರಿಗಿರುತ್ತದೆ. ಅವರ ಭೂಮಿಯ ಕುರಿತು ಮಾಹಿತಿ ಗೊತ್ತಿರುತ್ತದೆ. ಅವರ ಪರಿಚಯವಿಟ್ಟುಕೊಂಡು ಅಗತ್ಯ ದಾಖಲಾತಿಗಳನ್ನು ಒದಗಿಸುವುದು ನಿಮ್ಮ ಕೆಲಸ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.
ಗ್ರಾಮ ಆಡಳಿತಾಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ರೈತರಿಗೆ ಅನ್ಯಾಯವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಜಮೀನಿನ ದಾಖಲಾತಿಗಳ ಹಾಗೂ ಸರ್ವೇಗಳು ಸಮರ್ಪಕವಾಗಿ ನಡೆದರೆ ಗ್ರಾಮಗಳಲ್ಲಿ ಭೂಮಿ ಕಲಹವಿಲ್ಲದೇ ಬಹುಮಟ್ಟಿಗೆ ನೆಮ್ಮದಿ ನೆಲಸಲು ಸಾಧ್ಯವಿದೆ. ಇಂದು ನೇಮಕಗೊಂಡಿರುವ ಗ್ರಾಮ ಆಡಳಿತಾಧಿಕಾರಿಗಳು ಉದಾಸೀನತೆಯ ಭಾವನೆಯನ್ನು ತಳೆಯದೇ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ತಿಳಿಸಿ ಶುಭಹಾರೈಸಿದರು.
ಹಿಂದೆ ಗ್ರಾಮಗಳಲ್ಲಿ ಶಾನುಭೋಗರು ಎಂದರೆ ರೈತರಿಗೆ ಗುರುಗಳಿದ್ದಂತೆ. ಶಾನುಭೋಗರು ಹೇಳಿದ್ದೇ ಅಂತಿಮ ಎಂಬಂತಿತ್ತು. ಕೆಲವರು ಉತ್ತಮ ಕೆಲಸ ಮಾಡುತ್ತಿದ್ದರೆ, ಕೆಲವರು ಕಿತಾಪತಿಯನ್ನೂ ಮಾಡುತ್ತಿದ್ದರು ಎಂದು ತಮ್ಮ ಜೀವನದ ಘಟನೆಗಳನ್ನು ಮೆಲುಕು ಹಾಕಿದರು.
ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ, ಶಾಸಕ ಶ್ರೀನಿವಾಸ್, ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಎಲ್.ಕೆ.ಅತೀಕ್ , ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಉಪಸ್ಥಿತರಿದ್ದರು.