ಹಾವೇರಿ: ಶಿಗ್ಗಾವಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಶಿವಾನಂದ ಕುನ್ನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಇಂದು (ಜೂ.26) ವಶಕ್ಕೆ ಪಡೆದಿದ್ದಾರೆ.
ಆರೋಪಗಳನ್ನು ಬಂಧಿಸಿ ಕರೆತರುವಾಗ ಹಾನಗಲ್ಲ ತಾಲೂಕು ಕೊಂಡಚ್ಚಿ ಬಳಿ ಪೊಲೀಸರು ಮತ್ತು ಆರೋಪಿಗಳ ನಡುವೆ ಗಲಾಟೆ ನಡೆದಿದ್ದು, ಆರೋಪಿಗಳೇ ಖಾಕಿ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ
ಶಿಗ್ಗಾವಿ ಸಿಪಿಐ ಸತ್ಯಪ್ಪ ಹಾಗೂ ಹಾನಗಲ್ ಪಿಎಸ್ ಐ ಸಂಪತ್ ಆನಿಕಿವಿ ಅವರು ಪ್ರಮುಖ ಆರೋಪಿಗಳಾದ ನಾಗರಾಜ ಸವದತ್ತಿ ಹಾಗೂ ಅಶ್ರಫ್ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ಆರೋಪಿಗಳ ಕಾಲಿಗೆ ತಗಲಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಉಳಿದ ಆರೋಪಿಗಳಾದ ಹನುಮಂತ, ಸುದೀಪ ಹಾಗೂ ಸುರೇಶ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಫೈರಿಂಗ್ ವೇಳೆ ಗಾಯಗೊಂಡಿರುವ ಪೊಲೀಸರಾದ ರವಿ ಹಾಗೂ ಹರೀಶ ಅವರನ್ನು ಸಹ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆʼ ಎಂದು ಎಎಸ್ಪಿ ಲಕ್ಷ್ಮಣ. ವೈ. ಶಿರಕೋಳ ತಿಳಿಸಿದ್ದಾರೆ.