*ದಾಖಲೆಯಿಲ್ಲದ ಒಂದು ಕೆಜಿ ಚಿನ್ನ, 1.4ಕೆಜಿ ಬೆಳ್ಳಿ ಜಪ್ತಿ*
ಹುಬ್ಬಳ್ಳಿ: ಮುಂಬೈನಿಂದ ಹುಬ್ಬಳ್ಳಿಗೆ ಬಂಗಾರದ ಬಣ್ಣದ ಬಸ್ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಒಂದು ಕೆಜಿ ಬಂಗಾರ ಮತ್ತು 1.4ಕೆಜಿ ಬೆಳ್ಳಿಯನ್ನು ಕಮೀಷನರೇಟ್ ವ್ಯಾಪ್ತಿಯ ಸಿಸಿಬಿ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತಿಷ್ಠಿತ ಖಾಸಗಿ ಬಸ್ನಲ್ಲಿ ಬಂದ ಬಂಗಾರವನ್ನು ಸತ್ತೂರ ಎಸ್.ಡಿ.ಎಂ ಮೆಡಿಕಲ್ ಕಾಲೇಜ್ ಬಳಿ ಸಿಸಿಬಿ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ಮತ್ತು ತಂಡ ವಶಪಡಿಸಿಕೊಂಡಿದ್ದು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಲಿದೆ ಎನ್ನಲಾಗುತ್ತಿದೆ.
ಮಹಾವೀರ ಪಾರ್ಸಲ್ ಸರ್ವಿಸ್ ಹೆಸರಲ್ಲಿ ಚಿನ್ನಾಭರಣ ಸಾಗಾಟ ಮಾಡುತ್ತಿದ್ದು, ಸೋಹನ್ಲಾಲ್ ಎಂಬ ವ್ಯಾಪಾರಿ ಹೆಸರಿಗೆ ಪಾರ್ಸಲ್ ಕಳುಹಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಆದರೆ ವ್ಯಕ್ತಿಯೊಬ್ಬ ಆ ಬಸ್ನಿಂದ ಪಾರ್ಸಲ್ ಪಡೆದದ್ದನ್ನು ನೋಡಿ ಆತನನ್ನು ವಶಕ್ಕೆ ಪಡೆದಾಗ ಯಾವುದೇ ದಾಖಲೆಯಿಲ್ಲದ ಬಂಗಾರ ಮತ್ತು ಬೆಳ್ಳಿಯಿರುವ ಪಾರ್ಸಲ್ ಸಿಕ್ಕಿದೆ.
ಖಚಿತ ಮಾಹಿತಿ ಮೇರೆಗೆ ಧಾರವಾಡ ಬಳಿಯೂ ಧಾರವಾಡ ಗ್ರಾಮೀಣ ಪೊಲೀಸರು ಈ ಖಾಸಗಿ ಬಸ್ ತಪಾಸಣೆ ನಡೆಸಿದರೂ ಪತ್ತೆಯಾಗದ ಬಂಗಾರ ಕೊನೆಗೂ ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪಡೆ ಯಶಸ್ವಿಯಾಗಿದೆ.
ನಗರದ ಪ್ರತಿಷ್ಠಿತ ಕಂಪನಿಯ ಬಸ್ಗಳಲ್ಲಿ ಅಕ್ರಮ ಬಂಗಾರ ಮತ್ತಿತರ ವಸ್ತುಗಳ ಸಾಗಾಟ ನಿರಂತರವಾಗಿ ನಡೆದಿದೆ ಎನ್ನಲಾಗುತ್ತಿದೆ. ಸಾಗಾಟ ಮಾಡುವ ವಾಹನ ಚಾಲಕರು ಮತ್ತು ಅಕ್ರಮ ಸಾಗಾಟಗಾರರ ನೇರ ಲಿಂಕ್ ಇದೆಯೆನ್ನಲಾಗುತ್ತಿದೆ. ವಾಹನ ಚಾಲಕರು ತಮ್ಮ ಬಳಿ ಇಲ್ಲವೇ ಪ್ರಯಾಣಿಕರ ಲಗೇಜ್ ಬಾಕ್ಸನಲ್ಲಿ ಅಕ್ರಮ ವಸ್ತುಗಳ ಬಾಕ್ಸ ಇಟ್ಟು ತರುವರೆಂಬ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚೆಗೆ ನರೇಂದ್ರ ಬಳಿ ಸಹಿತ ಕಳೆದ ದಿ.3ರಂದು 97 ಲಕ್ಷ ರೂ ದಾಖಲೆಗಳಿಲ್ಲದ ಚಿನ್ನಾಭರಣ ಸಹ ಜಪ್ತಿ ಮಾಡಲಾಗಿತ್ತು.