ದಾಜೀಬಾನಪೇಟೆ ಪುರಾತನ ದುರ್ಗಾದೇವಿ ದೇವಸ್ಥಾನದಲ್ಲಿ*ಲೋಕ ಕಲ್ಯಾಣಕ್ಕಾಗಿ ಮೇ.9ಕ್ಕೆ ಆಯೋಜನೆ*/ *ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭ / ವೇದಬ್ರಹ್ಮ ಚಂದ್ರೇಶ ಶರ್ಮಾ ನೇತೃತ್ವ*
ಹುಬ್ಬಳ್ಳಿ: ನಗರದ ದಾಜಿಬಾನ ಪೇಟೆಯ ಶ್ರೀ ದುರ್ಗಾದೇವಿ ದೇವಾಲಯದಲ್ಲಿ ವಿರಾಜಮಾನರಾದ ಶ್ರೀ ದುರ್ಗಾದೇವಿ ಮತ್ತು ಶ್ರೀ ದ್ಯಾಮವ್ವ ದೇವಿಯರು ಹುಬ್ಬಳ್ಳಿಯ ಗ್ರಾಮದೇವತೆಯರೆಂದೇ ಪ್ರತೀತಿ ಇದೆ.ಭಕ್ತರ ಸಕಲಾಭೀಷ್ಟವನ್ನು ದೇವಿ ಈಡೇರಿಸುತ್ತಾ ಬಂದಿದ್ದು, ಜಾಗೃತ ಸ್ಥಾನವೆಂದು ಪ್ರಸಿದ್ಧಿಯನ್ನು ಪಡೆದಿದೆ.
ಪ್ರಸ್ತುತ ಈ ದೇವಿಯರ ಸನ್ನಿಧಾನದಲ್ಲಿ ಶ್ರದ್ಧೆ, ಭಕ್ತಿ, ವೈಭವದ ಶ್ರೀ ಸಹಸ್ರಚಂಡಿಕಾಯಾಗ ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಮೇ 9ರಂದು ಜರುಗಿಸಲು ನಿರ್ಧರಿಸಲಾಗಿದ್ದು ವಿವಿಧ ಚಟುವಟಿಕೆಗಳು ಆರಂಭಗೊಂಡಿವೆ.
ಮೇ 4ರಂದು ಶ್ರೀ ದುರ್ಗಾದೇವಿ ಕಲ್ಯಾಣ ಮಂಟಪವು ಉದ್ಘಾಟನೆಗೊಳ್ಳಲಿದ್ದು ನೂತನ ಕಟ್ಟಡದಲ್ಲಿಯೇ 150ಜನ ಪುರೋಹಿತರು, ಸಹಸ್ರ ಶ್ರೀ ದುರ್ಗಾಸಪ್ತಶತಿ ಸ್ತೋತ್ರಗಳ ಪಾರಾಯಣಗೈಯಲಿದ್ದಾರೆ.
ವಿಶ್ವಾವಸು ನಾಮ ಸಂವತ್ಸರದ, ವೈಶಾಖಮಾಸದ ಶುಕ್ಲಪಕ್ಷದ ದ್ವಾದಶೀ, ಶುಕ್ರವಾರ ಮೇ 9ರಂದು ಶ್ರೀದುರ್ಗಾಪರಮೇಶ್ವರೀ ಮಾತೆಯ ಪ್ರೀತ್ಯರ್ಥವಾಗಿ ಹಿಂದೂ ಧರ್ಮ ಹಾಗೂ ದೇಶದ ಸಬಲತೆಗಾಗಿ ಸಹಸ್ರಚಂಡಿಕಾಯಾಗವು ನೆರವೇರಲಿದೆ.ಮೇ.3ರಿಂದಲೇ ಮಹತ್ವದ ಹೋಮ, ಹವನ ನಡೆಯಲಿದೆ ಕಾರ್ಯಕ್ರಮಗಳು, ಪೂಜೆ, ಹೋಮ-ಹವನಾದಿಗಳು ಜರುಗುವವು. ಕಳೆದ ಫೆಬ್ರುವರಿ 7 ರಿಂದ ಹದಿನೇಳು ಸೇವೆಗಳನ್ನು ಈಗಾಗಲೇ ಲೋಕಾರ್ಪಣೆ ಮಾಡಲಾಗಿದೆ.
ಅಪಾರ ವೆಚ್ಚವುಳ್ಳ ಶ್ರೀ ಸಹಸ್ರಚಂಡಿಕಾಯಾಗಕ್ಕೆ, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್.ಎಸ್.ಕೆ.) ಸಮಾಜ ಬಾಂಧವರಷ್ಟೇ ಅಲ್ಲದೇ ವಿವಿಧ ಸಮಾಜಗಳ ಬಾಂಧವರು ಸಹಕಾರ ನೀಡುತ್ತಿರುವುದು ವಿಶೇಷವಾಗಿದೆ.
ಸಹಸ್ರಚಂಡಿಕಾಯಾಗದ ನೇತೃತ್ವವನ್ನು ಬೆಂಗಳೂರಿನವರಾದ ದಿ. ವೇದಬ್ರಹ್ಮಶ್ರೀ ಕೃಷ್ಣ ಭಟ್ಟ ಘನಪಾಠಿಗಳ ಇವರ ಶಿಷ್ಯರಾದ, ನೂರಾರು ಚಂಡಿಕಾಯಾಗಗಳನ್ನು, ನವಚಂಡಿಕಾಯಾಗ ಮತ್ತು ಶತಚಂಡಿಕಾಯಾಗಗಳನ್ನು ಮಾಡಿದ, ವೈದಿಕ ವಿದ್ಯಾವಿಶಾರದ ವಿದ್ಯಾ ವಾಚಸ್ಪತಿ ವಿದ್ವಾನ್ ವೇದಬ್ರಹ್ಮ ಚಂದ್ರೇಶ ಶರ್ಮಾ ಹಾಗೂ ಹುಬ್ಬಳ್ಳಿಯ ದಿ. ವೇದಬ್ರಹ್ಮಶ್ರೀ ತಿಪ್ಪಣ್ಣಾಚಾರ್ಯ ಬಾಳಾಚಾರ್ಯ ಪ್ರಭಾಕರ ಇವರ ಶಿಷ್ಯರಾದ ಸುಪ್ರಸಿದ್ಧ ಜ್ಯೋತಿಷಿಗಳು, ಪ್ರಶ್ನೆ ಶಾಸ್ತ್ರ ಪ್ರವೀಣರಾದ ರವೀಂದ್ರಾಚಾರ್ಯರು ವಹಿಸಿದ್ದಾರೆ.
ಸಹಸ್ರ ಚಂಡಿಕಾ ಯಾಗದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಲು ದುರ್ಗಾದೇವಿ ದೇವಸ್ಥಾನದ ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.
ದೇವಸ್ಥಾನದ ಇತಿಹಾಸ : ಸುಮಾರು 600 ರಿಂದ 700 ವರ್ಷಗಳ ಹಿಂದೆ ಊರಿನ ಹೊರ ಭಾಗದಲ್ಲಿ ಉದ್ಭವವಾದ ಕಲ್ಲಿನ ರೂಪದ ಶಿಲೆಗಳನ್ನು ಗ್ರಾಮದ ಜನರು ಶ್ರೀ ದ್ಯಾಮವ್ವ ಶ್ರೀ ದುರ್ಗವ್ವ ದೇವಿಯರೆಂದು ಪೂಜಿಸುತ್ತ ಬಂದಿದ್ದರು. ಅಂದಾಜು 200 ವರ್ಷಗಳ ಹಿಂದೆ ಬೇರೆ ಊರಿನ ಜನರು ಶ್ರೀ ದ್ಯಾಮವ್ವ ಶ್ರೀ ದುರ್ಗವ್ವರ ಸಣ್ಣ ಮೂರ್ತಿಗಳನ್ನು ಈ ಮಾರ್ಗದ ಮೂಲಕ ತಮ್ಮ ಊರಿಗೆ ಒಯ್ಯುತ್ತಿದ್ದರು. ಆದರೆ ಸರಿಯಾಗಿ ಈ ಉದ್ಭವ ಕಲ್ಲಿನ ಶ್ರೀ ದ್ಯಾಮವ್ವ ಶ್ರೀ ದುರ್ಗವ್ವ ದೇವಿಯರ ಪುರಾತನ ದೇವಸ್ಥಾನ ಮುಂದೆ ಬಂದಾಗ, ಅವರ ಚಕ್ಕಡಿಯು ಮುಂದೆ ಹೋಗದೇ ಅಲ್ಲಿಯೇ ನಿಂತಿತು. ಎಷ್ಟೇ ಪ್ರಯತ್ನಿಸಿದರೂ ಮುಂದೆ ಚಲಿಸದಾದಾಗ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತ್ತಿದ್ದ ಭಕ್ತ ಜನರು ಇಲ್ಲಿನ ಸ್ಥಳಿಯ ಜನರನ್ನು ವಿಚಾರಿಸಲಾಗಿ, ಇಲ್ಲಿ ಉದ್ಭವ ಶಿಲೆಯ ದ್ಯಾಮವ್ವ ದುರ್ಗವ್ವ ಇರುವ ಬಗ್ಗೆ ಅವರಿಗೆ ತಿಳಿಯಿತು. ನಂತರ ಹಿರಿಯರ ಸಭೆಯಲ್ಲಿ ಈ ದೇವಸ್ಥಾನಕ್ಕೆ ಮೂರ್ತಿಗಳು ಬೇಕಾಗಿರಬಹುದು ಆದ್ದರಿಂದಲೇ ಚಕ್ಕಡಿಯು ಮುಂದೆ ಸಾಗುತ್ತಿಲ್ಲ. ಅವುಗಳನ್ನು ಇಲ್ಲಿಯೇ ಸ್ಥಾಪಿಸಿದರೆ ಒಳ್ಳೆಯದು ಎಂಬ ತೀರ್ಮಾನದಿಂದ ಆ ಮೂರ್ತಿಗಳು ಪುರಾತನ ದೇವಸ್ಥಾನದ ಹಿಂದೇಯೆ ಗರ್ಭ ಗುಡಿ ನಿರ್ಮಿಸಿ ಪ್ರತಿಷ್ಠಾಪಿಸಲ್ಪಟ್ಟವು ಹಾಗೂ ನಿತ್ಯಪೂಜೆಗೊಳ್ಳುತ್ತಾ ಬಂದವು. ಇದೊಂದು ನೈಜವಾದ, ವಿಶೇಷವಾದ ಇತಿಹಾಸವೇ ಆಗಿದೆ.
ಹುಬ್ಬಳ್ಳಿಯ ಎಸ್. ಎಸ್. ಕೆ. ಸಮಾಜದ ಪಂಚ ಟ್ರಸ್ಟ್ ಕಮೀಟಿಯವರು ಈ ದೇವಾಲಯದ ಉಸ್ತುವಾರಿಯನ್ನು ನಿರ್ವಹಿಸುತ್ತ ಬಂದಿದ್ದು , 1996-97ರಲ್ಲಿ ನಗರದ ಗೋಪನಕೊಪ್ಪದ, ಶಾಂಡಿಲ್ಯಾಶ್ರಮದ ಗುರುಗಳಾದ ಚಂದ್ರಶೇಖರ ಸ್ವಾಮಿಜಿಯವರು ಪ್ರವಚನದ ನಿಮಿತ್ಯ ದೇವಸ್ಥಾನಕ್ಕೆ ಬಂದಾಗ, “ ಶ್ರೀ ದೇವಿಯು ಬಹಳ ಜಾಗೃತಳಾಗಿದ್ದಾಳೆ. ಈ ಕ್ಷೇತ್ರವು ಅತ್ಯಂತ ಪವಿತ್ರವಾಗಿದ್ದು, ಈ ದೇವಿಯರನ್ನು ದೈವಿರೂಪ ಸ್ವರೂಪದಲ್ಲಿ ಶಿಲೆಯಲ್ಲಿ ಸ್ಥಿರವಾಗಿ ಪ್ರತಿಷ್ಠಾಪಿಸಿದರೆ, ಸಾತ್ವಿಕವಾದ ದೈವೀ ಸ್ವರೂಪವನ್ನು ಹೊಂದಿ ಎಲ್ಲೆಡೆಯೂ ಕೀರ್ತಿಯು ಪಸರಿಸುತ್ತದೆ ಹಾಗೂ ಭಕ್ತರಿಗೂ ಒಳ್ಳೆಯದಾಗುತ್ತದೆ ” ಎಂದು ನುಡಿದರು. ಅವರ ಆಜ್ಞೆಯಂತೆ ಅಂದಿನ ಟ್ರಸ್ಟಿಗಳು, ಹಿರಿಯರು ಮತ್ತು ಪೂಜಾರಿ ಮನೆತನದವರೆಲ್ಲರೂ ಒಪ್ಪಿದರು. ನೂತನವಾಗಿ ಮೂರ್ತಿಗಳನ್ನು ಶಿಲೆಯಲ್ಲಿ ಕೆತ್ತಿಸಿದರು ಮತ್ತು ಸನ್-2003 ರಲ್ಲಿ ಶ್ರೀ ದ್ಯಾಮವ್ವದೇವಿ ಹಾಗೂ ಶ್ರೀ ದುರ್ಗಾದೇವಿ ಮಾತೆಯರ ಭವ್ಯ ವ ಅತ್ಯಾಕರ್ಷಕ ಮೂರ್ತಿಗಳನ್ನು, ಸಕಲ ಧಾರ್ಮಿಕ ವಿಧಿ-ವಿಧಾನ ಪೂಜೆ-ಪುನಸ್ಕಾರ ಹೋಮ- ಹವನಾದಿಗಳನ್ನು ಅರ್ಪಿಸುವದರೊಂದಿಗೆ ಪ್ರತಿಷ್ಠಾಪಿಸಿದರು. ಇದರ ಜೊತೆಯಲ್ಲೆ ನೂತನವಾಗಿ ಗರ್ಭಗುಡಿಯು ನಿರ್ಮಿಸಲ್ಪಟ್ಟಿತು
2012- 13ರಲ್ಲಿಯೇ ಸಹಸ್ರಚಂಡಿಕಾಯಾಗ ಮಾಡುವ ಪ್ರಸ್ತಾಪ ಇತ್ತಾದರೂ ಈಗ ಮಂಡಳಿ ಈ ಕಾರ್ಯಕ್ಕೆ ಮುಂದಾಗಿದೆ.
ವಿಶೇಷತೆ : ಪ್ರತಿ ಮಂಗಳವಾರವು ಶ್ರೀ ದೇವಿಯರಿಗೆ ಪಲ್ಲಕ್ಕಿ (ಈಗ ಬೆಳ್ಳಿಯ ಪಲ್ಲಕ್ಕಿ) ಸೇವೆಯು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಆಷಾಢ ಮಾಸದಲ್ಲಿ ನಗರದ ಸಾವಿರಾರು ಭಕ್ತರು ಶ್ರೀ ದೇವಿಯರ ದರ್ಶನವನ್ನು ಪಡೆದು, ಅಂಬಿಲು ವ ಬುತ್ತಿಯ ಸೇವೆಯನ್ನು ಸಲ್ಲಿಸುವದು ಕೂಡ ಪ್ರತಿ ವರ್ಷವೂ ನಿರಂತರವಾಗಿ ನಡೆದುಕೊಂಡು ಬರುತ್ತಲಿದೆ.