ಧಾರವಾಡ: ಧಾರವಾಡದಲ್ಲಿನ ಕೆಐಎಡಿಬಿ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಗೊಳಿಸುವ ಯತ್ನದಿಂದ ಸರಕಾರ ಇದೀಗ ಹಿಂದೆ ಸರಿದಿದ.
ಈ ಕುರಿತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಸಿಇಓ ಇಂದು ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸಲು ಸರ್ಕಾರ ಹೊರಡಿಸಿರುವ ಆದೇಶವನ್ನು ಖಂಡಿಸಿ ಜಿಲ್ಲೆಯ ರೈತರು ಕಳೆದ ಐದು ದಿನಗಳಿಂದ ನಡೆಸಿದ ಅಹೋರಾತ್ರಿ ಧರಣಿಗೆ ಯಶ ದೊರಕಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಭೂಸ್ವಾಧೀನ ಪ್ರಕ್ರಿಯೆ ನಡೆಯುವ ಜಿಲ್ಲೆಗಳಲ್ಲಿ ಧಾರವಾಡ ಪ್ರಮುಖವಾಗಿದೆ. ದಶಕಗಳಿಂದ ಇಲ್ಲಿಯೇ ಕಚೇರಿ ಇರುವುದರಿಂದ ಸುತ್ತಮುತ್ತಲಿನ ಸಾವಿರಾರು ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ, ಈಗ ಏಕಾಏಕಿ ಈ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸಿರುವುದು ಉತ್ತರ ಕರ್ನಾಟಕದ ರೈತರಿಗೆ ಮಾಡಿದ ಘೋರ ಅನ್ಯಾಯ. ಈ ನಿರ್ಧಾರವು ಕೇವಲ ಕಚೇರಿ ವರ್ಗಾವಣೆಯಲ್ಲ, ಬದಲಾಗಿ ಉತ್ತರ ಕರ್ನಾಟಕದ ಸಮಗ್ರ ರೈತ ಕುಲದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸ್ಥಳಾಂತರ ಆದೇಶ ರದ್ದಾಗುವವರೆಗೂ ತಮ್ಮ ಅಹೋರಾತ್ರಿ ಧರಣಿಯನ್ನು ಕೈಬಿಡುವುದಿಲ್ಲ ಎಂದು ಕಳೆದ ಶುಕ್ರವಾರದಿಂದ ಅಹೋರಾತ್ರಿ ಧರಣಿ ಕೈಕೊಳ್ಳುವ ಮೂಲಕ ಸರಕಾರವನ್ನು ಎಚ್ಚರಿಸಿದ್ದರು.
ಜನಜಾಗೃತಿ ಸಂಘದ ಬಸವರಾಜ ಕೊರವರ ಕೂಡ ಹೋರಾಟ ಬೆಂಬಲಿಸಿ, ಧರಣಿಯಲ್ಲಿ ಭಾಗವಹಿಸಿದ್ದರು.
ಹಿರಿಯ ರೈತ ಹೋರಾಟಗಾರ ವೀರಯ್ಯ ಚಿಕ್ಕಮಠ, ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಶ್ರೀಶೈಲಗೌಡ ಕಮತರ, ಕುಮಾರಗೌಡ ಪಾಟೀಲ, ಶ್ರೀಕಾಂತ ಕ್ಯಾತಪ್ಪನವರ, ಶಿವು ಬೆಳಾರದ, ನೇತಾಜಿ ಪಾಟೀಲ, ಗಂಗಪ್ಪ ಗಾಯಕವಾಡ, ಮಡಿವಾಳಪ್ಪ ಏಣಗಿ, ಬಸವರಾಜ ಚಳಗೇರಿ, ವಿಜಯ ಮಾದರ, ಪುಂಡಲೀಕಪ್ಪ ದೊಡ್ಡಮನಿ, , ಹನುಮಂತಪ್ಪ ಬೋಗೂರ ಸೇರಿದಂತೆ ನೂರಾರು ರೈತ ಮುಖಂಡರು ಹಾಗೂ ಹಿರಿಯರು ಪಾಲ್ಗೊಂಡಿದ್ದರು.




