*ಕಣ್ತುಂಬಿಕೊಳ್ಳಲು ಹೋದ ಮತ್ತೊಬ್ಬ ಯುವಕನೂ ಇನ್ನಿಲ್ಲ*
ಹುಬ್ಬಳ್ಳಿ : ಅಭಿಮಾನಿಗಳ ವಲಯದಲ್ಲಿ ’ಅಣ್ತಮಾ’ ಎಂದೇ ಕರೆಸಿಕೊಳ್ಳುವ ರಾಕಿಂಗ್ ಸ್ಟಾರ್ ಯಶ್ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ತನ್ನ ಮೂವರು ಅಭಿಮಾನಿಗಳು ಬಾರದ ಲೋಕಕ್ಕೆ ಹೋದ ಹಿನ್ನೆಲೆಯಲ್ಲಿ ಸೋಮವಾರ ಬಂದು ಮೂರೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ತೆರಳುವ ವೇಳೆ ಸಂಭವಿಸಿದ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಅಭಿಮಾನಿ ಯುವಕ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಹೋಗಿದ್ದ ಲಕ್ಷ್ಮೇಶ್ವರದ ಅಗಡಿ ಇಂಜನೀಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ ಬಿಂಕದಕಟ್ಟಿ ನಿವಾಸಿ ನಿಖಿಲಗೌಡ ಭೀಮನಗೌಡ್ರ ಗೌಡರ(22) ಅಸು ನೀಗಿದವನಾಗಿದ್ದಾನೆ.
ಮುಳಗುಂದ ರಸ್ತೆಯ ಪಿರಾಮಿಡ್ಗೆ ಹೋಗುವ ಕ್ರಾಸ್ನಲ್ಲಿ ಪೊಲೀಸ್ ವಾಹನ ಕಚೇರಿಗೆ ತೆರಳುವಾಗ ಸ್ಕೂಟಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿತ್ತು. ತಕ್ಷಣವೇ ಪೊಲೀಸರೇ ತಮ್ಮ ವಾಹನದಲ್ಲಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು.ಮಧ್ಯರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರೂ ಫಲಕಾರಿಯಾಗಲಿಲ್ಲ.
ಯಶ್ ನೋಡಲು ಸೂರಣಗಿ ಗ್ರಾಮಕ್ಕೂ ಈತ ತೆರಳಿದ್ದ ಎನ್ನಲಾಗಿದೆ. ಸಂತ್ರಸ್ಥ ಕುಟುಂಬಕ್ಕೆ ಸಾಂತ್ವನ ಹೇಳುವಾಗಲೇ ಕಣ್ಣಿರಿಟ್ಟಿದ್ದ ಯಶ್ಗೆ ಇನ್ನೊಬ್ಬ ಅಭಿಮಾನಿಯೂ ಮೃತ ಪಟ್ಟಿದ್ದು ಮತ್ತಷ್ಟು ಆಘಾತ ಉಂಟು ಮಾಡಿದ್ದು, ನನಗೆ ನನ್ನ ಜನ್ಮದಿನ ಎಂದರೇ ಭಯ ಆರಂಭವಾಗಿದೆ.ಅಭಿಮಾನಿಗಳು ಇನ್ನು ಮುಂದೆ ದಯವಿಟ್ಟು ಬ್ಯಾನರ್ ಕಟ್ಟಬೇಡಿ ಅಲ್ಲದೇ ನನ್ನ ಕಾರನ್ನು ಬೈಕನಲ್ಲಿ ಚೇಸ್ ಮಾಡಿಕೊಂಡು ಬರಬೇಡಿ ಎಂದು ಮನವಿ ಮಾಡಿದ್ದಾರೆ.
ಹಿನ್ನೆಲೆ : ರವಿವಾರ ರಾತ್ರಿ ಬೃಹತ್ ಗಾತ್ರದ ಫ್ಲೆಕ್ಸ್ ಅಳವಡಿಸುವುದಕ್ಕೆ ಸೂರಣಗಿಯ 8-10 ಜನ ಮುಂದಾಗಿದ್ದರು.
ಈ ಸಂದರ್ಭದಲ್ಲಿ ಕಟೌಟ್ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಬ್ಬ ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹನುಮಂತ ಹರಿಜನ((21), ಮುರಳಿ ನಡುವಿನಮನಿ(2೦) ಮತ್ತು ನವೀನ ಗಾಜಿ(18) ಮೃತ ಯುವಕರು. ಈ ವೇಳೆ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬ ಮೂವರು ಗಂಭಿರವಾಗಿ ಗಾಯಗೊಂಡಿದ್ದು ಚೇತರಿಕೆಯ ಹಾದಿಯಲ್ಲಿದ್ದಾರೆ.
ಸೋಮವಾರ ಘಟನೆ ಗೊತ್ತಾಗುತ್ತಿದ್ದಂತೆಯೇ ಹೈದ್ರಾಬಾದ್ನಲ್ಲಿದ್ದ ಯಶ್ ಗೋವಾಕ್ಕೆ ಬಂದು ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದು ಸೂರಣಗಿಗೆ ತೆರಳಿ ತನ್ನ ಮಾನವೀಯತೆ ಮೆರೆದು ಉಳಿದವರಿಗೆ ಮಾದರಿಯಾದರು. ಹುಬ್ಬಳ್ಳಿಗೆ ಆಗಮಿಸಿದ ಯಶ್ ಅವರನ್ನು ಹುಬ್ಬಳ್ಳಿಯ ಉದ್ಯಮಿ ಮನೀಶ ನಾಯಕ , ಡಿಸಿಪಿ ಸಿ.ಆರ್.ರವೀಶ ಇನ್ನಿತರ ಅಧಿಕಾರಿಗಳು ಸ್ವಾಗತಿಸಿದರು.ಯಶ ಹಾಗೂ ಅವರೊಂದಿಗಿದ್ದ 6 ಜನರ ತಂಡ ಸೂರಣಗಿಗೆ ಹೋಗುವ ಎಲ್ಲ ಉಸ್ತುವಾರಿಯನ್ನೂ ಉದ್ಯಮಿ ಮನೀಶ ವಹಿಸಿಕೊಂಡಿದ್ದರು.