ಮೊದಲಿನ ಇಬ್ಬರೂ ಪತ್ನಿಯರೂ ಐಎಎಸ್ಗಳೆ – ಮ.ಪ್ರ. ಕೇಡರ್ ಅಧಿಕಾರಿಯ ವಿವಾಹ ಭಾರಿ ಚರ್ಚೆಯಲ್ಲಿ*
ಭೋಪಾಲ : ಸಾಮಾನ್ಯವಾಗಿ ನಾಗರಿಕ ಸೇವೆಯಲ್ಲಿರುವ ಐಎಎಸ್ ಅಧಿಕಾರಿಗಳು ಅದೇ ಕೇಡರ್ನ ಅಧಿಕಾರಿಗಳನ್ನು ಮದುವೆಯಾಗುವುದು ಹೊಸದಲ್ಲ. ಆದರೆ ಮಧ್ಯಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ಐಎಎಸ್ ಅಧಿಕಾರಿಯಾಗಿರುವವರನ್ನೇ ಮೂರನೇ ವಿವಾಹವಾಗುವ ಮೂಲಕ ಭರ್ಜರಿ ಸುದ್ದಿಯಲ್ಲಿದ್ದು ಅದಕ್ಕಿಂತ ಅಚ್ಚರಿಯ ಸಂಗತಿಯೆಂದರೆ ಅವರು ಈ ಹಿಂದೆ ಮದುವೆಯಾದವರಿಬ್ಬರೂ ಐಎಎಸ್ ಅಧಿಕಾರಿಗಳೇ ಆಗಿದ್ದಾರೆಂಬುದು ವಿಶೇಷವಾಗಿದೆ.

ಪ್ರಸ್ತುತ ಮಧ್ಯಪ್ರದೇಶದ ಉದ್ಯೋಗ ಖಾತ್ರಿ ಪರಿಷತ್ನ ಮುಖ್ಯ ಕಾರ್ಯ ನಿರ್ವಾಹಕರ ಅಧಿಕಾರಿಯಾಗಿರುವ ಅವಿ ಪ್ರಸಾದ್ ಎಂಬುವವರೆ ರಾಜ್ಯ ಸಚಿವಾಲಯದಲ್ಲಿ ಉಪ ಕಾರ್ಯದರ್ಶಿ ಹುದ್ದೆಯಲ್ಲಿರುವ ಅಂಕಿತಾ ಧಾಕ್ರೆ ಅವರನ್ನು ಮೂರನೇ ವಿವಾಹವಾಗುವ ಮೂಲಕ ಸುದ್ದಿಯಲ್ಲಿದ್ದು ಇವರ ಹಿಂದಿನ ಇಬ್ಬರೂ ಪತ್ನಿಯರೂ ಸಹ ಪ್ರಸ್ತುತ ಮಧ್ಯಪ್ರದೇಶದಲ್ಲೇ ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅವಿ ಪ್ರಸಾದ್ ಅಂಕಿತಾ ಧಾಕ್ರೆ ಅವರನ್ನು ಫೆ. 11ರಂದು ಕುನೋ ನ್ಯಾಷನಲ್ ಪಾರ್ಕನಲ್ಲಿ ಆಪ್ತೇಷ್ಟರ ಸಮ್ಮುಖದಲ್ಲಿ ಮತ್ತೆ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ. ಈ ವಿವಾಹ ಸಾರ್ವಜನಿಕ ಮತ್ತು ಮಾಧ್ಯಮದ ಗಮನ ಸೆಳೆದು ಜಾಲ ತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಅವಿ ಪ್ರಸಾದ ಉತ್ತರ ಪ್ರದೇಶದ ಸೀತಾಪುರ ಮೂಲದವರಾಗಿದ್ದು ನಾಗರಿಕ ಸೇವೆಗೆ ಸೇರುವ ಮೊದಲು ಭಾರತೀಯ ರಿಸರ್ವ ಬ್ಯಾಂಕ್ನಲ್ಲಿ ಸಹ ಸೇವೆ ಸಲ್ಲಿಸಿದ್ದು ಕಟ್ನಿ ಜಿಲ್ಲೆಯ ಮುಖ್ಯ ದಂಡಾಧಿಕಾರಿಯಾಗಿ ಅನೇಕ ಜನಾನುರಾಗಿ ಕೆಲಸ ಸಹ ಮಾಡಿದ್ದಾರೆ. ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಇವರ ಅಜ್ಜ ತಂಬೇಶ್ವರ ಪ್ರಸಾದ ಉರ್ಪ ಬಚ್ಚಾ ಬಾಬು ಚೌದರಿ ಚರಣಸಿಂಗ್ ಅವರ ಸಂಪುಟದಲ್ಲಿ ಸಚಿವರೂ ಆಗಿದ್ದವರು.
2014 ರ ಬ್ಯಾಚ್ನ ಅವಿ ಪ್ರಸಾದ್, ಮೊದಲು ಅದೇ ಬ್ಯಾಚಿನ ಮಧ್ಯಪ್ರದೇಶ ಕೇಡರ್ನ ಐಎಎಸ್ ಅಧಿಕಾರಿ ರಿಜು ಬಾಫ್ನಾ ಅವರನ್ನು ವಿವಾಹವಾದರು. ಇವರಿಬ್ಬರೂ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವಾಗಲೇ ಭೇಟಿಯಾಗಿ ಕಣ್ಣು ಕಣ್ಣುಗಳ ಸೆಳೆತಕ್ಕೆ ಒಳಗಾಗಿ ವಿವಾಹವಾದರು. ಆದರೆ ಇವರಿಬ್ಬರ ವೈವಾಹಿಕ ಸಂಬAಧ ಬಹುಕಾಲ ಉಳಿಯದ ಪರಿಣಾಮ ಬೇರ್ಪಟ್ಟರು. ಮೊದಲ ಪತ್ನಿ ರಿಜು ಬಾಫ್ನಾ ಪ್ರಸ್ತುತ ಶಾಜಾಪುರ ಜಿಲ್ಲೆಯ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಟ್ಟುನಿಟ್ಟಿನ ಆಡಳಿತಕ್ಕೆ ಹೆಸರುವಾಸಿಯಾಗಿದ್ದಾರೆ.
ತದನಂತರ ಅವಿ ಪ್ರಸಾದ್ ಅವರ ಎರಡನೇ ಮದುವೆ ಉತ್ತರ ಪ್ರದೇಶದ ಮಿಶಾ ಸಿಂಗ್ ಅವರೊಂದಿಗೆ. ಎಲ್ ಎಲ್ ಬಿ ಪದವೀಧರೆಯಾದ ಈಕೆ 2016ರ ಯುಪಿಎಸ್ಸಿ ಪರೀಕ್ಷೆಯಲ್ಲಿ 64 ನೇ ರ್ಯಾಂಕ್ಗಳಿಸಿ ಐಎಎಸ್ಗೆ ಸೇರುತ್ತಾರೆ. ಇವರಿಬ್ಬರ ದಾಂಪತ್ಯ ಕೂಡ ಕೇವಲ ನಾಲ್ಕು ವರ್ಷಗಳಿಗೆ ಸೀಮಿತವಾಯಿತು. ಮಧುರ ಬಂಧನ ವಿಚ್ಛೇದನದಲ್ಲಿ ಕೊನೆಗೊಂಡಿತು. ಪ್ರಸ್ತುತ, ಅವರು ರತ್ಲಂ ಜಿಲ್ಲೆಯ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಿಶಾ ಸಿಂಗ್ ಅವರಿಂದ ವಿಚ್ಛೇದನದ ನಂತರ, ಅವಿ ಪ್ರಸಾದ್ ಉಪ ಕಾರ್ಯದರ್ಶಿ ಅಂಕಿತಾ ಧಾಕ್ರೆ ಅವರನ್ನು ವಿವಾಹವಾಗಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾದರೂ ಇನ್ನೂ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.




