*ನಾಳೆಯಿಂದ ಯಥಾಸ್ಥಿತಿ ಬಸ್ ಸಂಚಾರ/ ಇಂದು ರಾಜ್ಯಾದ್ಯಂತ ಪ್ರಯಾಣಿಕರ ಪರದಾಟ*
ಬೆಂಗಳೂರು: ಕೂಡಲೇ ಸಾರಿಗೆ ನೌಕರರು ಮುಷ್ಕರವನ್ನು ನಿಲ್ಲಿಸಿ ಇಲ್ಲವೇ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ ಎಂದು ಹೈಕೋರ್ಟ್ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರಿಗೆ ಮುಷ್ಕರ ಹಿಂದಕ್ಕೆ ಪಡೆಯಲಾಗಿದ್ದು, ಈ ಕ್ಷಣದಿಂದಲೇ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್ ವಿನಂತಿ ಮಾಡಿದ್ದಾರೆ.
ಹೈಕೋರ್ಟ್ನಲ್ಲಿ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ವಿಭು ಬಕ್ರು, ನ್ಯಾ.ಸಿ.ಎಂ. ಜೋಷಿ ಅವರಿದ್ದ ಪೀಠ, ನಾಳೆಯಿಂದ ಎಂದಿನಂತೆ ಬಸ್ ಸಂಚಾರ ನಡೆಸುವಂತೆ ಸೂಚಿಸಿ, 2 ದಿನಗಳ ಕಾಲ ಮಧ್ಯಂತರ ಆದೇಶ ವಿಸ್ತರಿಸಿ ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದರು.
ಜನಸಾಮಾನ್ಯರಿಗೆ ತೊಂದರೆ ನೀಡುವುದನ್ನು ಸಹಿಸಲ್ಲ, ಎಸ್ಮಾ ಜಾರಿಯಾಗಿದ್ದರೂ ಮುಷ್ಕರ ಮಾಡುತ್ತೀರಿ ಎಂದು ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಗರಂ ಆಗಿದ್ದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತಲ್ಲದೇ ಮುಷ್ಕರ ಕೈ ಬಿಡದಿದ್ದರೆ ಸಮಿತಿ ಪದಾಧಿಕಾರಿಗಳ ಬಂಧನಕ್ಕೆ ಆದೇಶಿಸಲಾಗುವುದು ಎಂದು ಕೋರ್ಟ್ ಹೇಳಿದೆ.
ಮುಷ್ಕರ ನಿಂತಿರುವ ಬಗ್ಗೆ ಮಾಹಿತಿ ನೀಡದೇ ಇದ್ದರೇ, ನಾಳೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು ಎಂದು ಹೈಕೋರ್ಟ್ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಗೆ ಖಡಕ್ ಎಚ್ಚರಿಕೆ ನೀಡಿದ್ದು, ನಾಳೆ ಸಾರಿಗೆ ನೌಕರರು ಮುಷ್ಕರ ನಡೆಸುವುದಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಪ್ರಯಾಣಿಕರ ಪರದಾಟ
ಹುಬ್ಬಳ್ಳಿ , ಧಾರವಾಡ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅನಿರ್ಧಿಷ್ಟಾವಧಿ ಮುಷ್ಕರ ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿದೆ.
ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಸರ್ಕಾರಿ ಬಸ್ಗಳು ರಸ್ತೆಗೆ ಇಳಿದಿಲ್ಲ. ಜನರು ಸಂಚಾರಕ್ಕೆ ಖಾಸಗಿ ಬಸ್, ಆಟೋ ಸೇರಿದಂತೆ ಖಾಸಗಿ ವಾಹನ ಅವಲಂಬಿಸಿದ್ದಾರೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಪರದಾಡುತ್ತಾಗಿದ ಬೆಳಗ್ಗೆ 6 ಗಂಟೆಯಿಂದಲೇ ಮುಷ್ಕರ ಪ್ರಾರಂಭಿಸಿದೆ. ಜಿಲ್ಲೆಯಲ್ಲಿ ಮುಷ್ಕರ ಬಿಸಿ ಜನರಿಗೆ ತಟ್ಟಿತ್ತು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಜನರು ಬರುತ್ತಿದ್ದಾರೆ. ಆದರೆ ಸರ್ಕಾರಿ ಬಸ್ಗಳಿಲ್ಲ, ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಿಸುತ್ತಿದ್ದು ಖಾಸಗಿ ಬಸ್ ವ್ಯವಸ್ಥೆಗೆ ಮಾರುಹೋಗುತ್ತಿದ್ದಾರೆ . ಆದರೆ ಗ್ರಾಮೀಣ ಭಾಗದ ಜನರು ನಗರಕ್ಕೆ ಬರಲು ಬಸ್ಗಳಿಲ್ಲದೇ ಪರದಾಡುತ್ತಿದ್ದಾರೆ.
ಹುಬ್ಬಳ್ಳಿ -ಧಾರವಾಡ ಅವಳಿ ನಗರದಲ್ಲಿ ಸರ್ಕಾರಿ ಬಸ್ಗಳ ಸಂಚಾರ ಸ್ಥಗಿತವಾಗಿದೆ. ಹು – ಧಾ ಮಹಾನಗರದ ಮದ್ಯ ಸುಮಾರು 558 ಸರ್ಕಾರಿ ಬಸ್ ಗಳು ಪ್ರತಿದಿನ ಸಂಚರಿಸುತ್ತಿದ್ದವು. ಆದರೆ ಇಂದು ಬೇಂದ್ರೆ ಖಾಸಗಿ ಬಸ್ಗಳಿಗೆ ಪ್ರಯಾಣಿಕರು ಮುಗಿಬಿದ್ದಿದ್ದಾರೆ. ದೂರ ಮಾರ್ಗ, ನಗರ ಸಾರಿಗೆ, ಬಿಆರ್ಟಿಎಸ್ ಬಸ್ ಸೇರಿದಂತೆ ಯಾವ ಬಸ್ಗಳ ಸಂಚಾರವೂ ಇಲ್ಲ. ಡ್ರೈವರ್ ಮತ್ತು ಕಂಡಕ್ಟರ್ ಡಿಪೋದಿಂದ ನಗರ ಬಸ್ ನಿಲ್ದಾಣ, ಸಿ.ಬಿ.ಟಿ ಬಸ್ ನಿಲ್ದಾಣಕ್ಕೆ ಬಸ್ಗಳನ್ನು ತಂದು ನಿಲ್ಲಿಸಿದ್ದಾರೆ. ಆದರೆ ನಿಲ್ದಾಣದಿಂದ ಮಾತ್ರ ಯಾವುದೇ ಬಸ್ ಹೊರಗೆ ಬರುತ್ತಿಲ್ಲ.
ಜಿಲ್ಲೆಯ ತಾಲೂಕಿನಾದ್ಯಂತ ಎಲ್ಲ ಬಸ್ ನಿಲ್ದಾಣಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಬಸ್ ಇಲ್ಲದಿರುವುದನ್ನು ಆಟೋ ಚಾಲಕರು ಟಂಟಂದವರು ಬಂಡವಾಳ ಮಾಡಿಕೊಂಡು ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಜಿಲ್ಲೆಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಬಾಯಿಗೆ ಬಂದಷ್ಟು ದರವನ್ನು ಆಟೋ ಚಾಲಕರು ಹೇಳುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೋಗಿಗಳ ಪರದಾಟ ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಜನರು ಪರದಾಡಿದರು. ಹಳ್ಳಿಯಿಂದ ರಾತ್ರಿ ಬಸ್ನಲ್ಲಿ ಬೆಳಗ್ಗೆ ನಗರಕ್ಕೆ ಆಗಮಿಸಿದರು. ಆದರೆ ಬಸ್ ನಿಲ್ದಾಣದಿಂದ ಆಸ್ಪತ್ರೆಗೆ ಹೋಗಲು ನಗರ ಸಾರಿಗೆ ಬಸ್ಗಳಿಲ್ಲ. ಆದ್ದರಿಂದ ಆಟೋಗಳಿಗೆ ದುಪ್ಪಟ್ಟು ಬೆಲೆ ತೆರಬೇಕಾಯಿತು.