ಹುಬ್ಬಳ್ಳಿ: ಕಳೆದ ರವಿವಾರ ದಿ. 22ರಂದು ವಾಣಿಜ್ಯ ರಾಜಧಾನಿಯಲ್ಲಿ ಸಂಭವಿಸಿದ್ದ ಭೀಕರ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಆರಕ್ಕೇರಿದೆ.
ಮೃತರನ್ನು ಹುಬ್ಬಳ್ಳಿಯ ಉಣಕಲ್ ನಿವಾಸಿ ಶಂಕರ ಚವ್ಹಾಣ್ (30) ಬೆಳಗಿನ ಜಾವ 1-30ರ ಸುಮಾರಿಗೆ ಮೃತಪಟ್ಟಿದ್ದರೆ, 10-15ರ ಸುಮಾರಿಗೆ ಮಂಜುನಾಥ ವಾಘ್ಮೋಡೆ ಸಹ ಅಸು ನೀಗಿದ್ದಾರೆ. ಶಂಕರ ಕಿಮ್ಸ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ವಾರ್ಡ ಬಾಯ್ ಆಗಿ ಕೆಲಸ ಮಾಡುತ್ತಿದ್ದ.
ಸಾಯಿನಗರದ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ನಡೆದ ಸಿಲಿಂಡರ್ ಸಿಲಿಂಡರ್ ಘಟನೆಯಲ್ಲಿ 9ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24) ಈ ಮೊದಲು ಮೃತಪಟ್ಟಿದ್ದರು. ಘಟನೆಯಲ್ಲಿ ಪ್ರಕಾಶ್ ಬಾರಕೇರ್, ವಿನಾಯಕ ಬಾರಕೇರ್, ತೇಜಸ್ವರ್ ಸಾತರೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದ್ದು, ಒರ್ವನ ಸ್ಥಿತಿ ಹೊರತು ಪಡಿಸಿ ಇನ್ನಿಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಕಿಮ್ಸ್ ಮೂಲಗಳು ಹೇಳಿವೆ.