*ಕರಾಳ ಶನಿವಾರ : ಕಲಬುರ್ಗಿ, ದಾವಣಗೆರೆ ಬಳಿ ಪ್ರತ್ಯೇಕ ಅಪಘಾತ* – *ಮೃತರು ಬಾಗಲಕೋಟೆ, ಕಾಗವಾಡದವರು*
ಹುಬ್ಬಳ್ಳಿ : ಕಲಬುರ್ಗಿ ಹಾಗೂ ದಾವಣಗೆರೆ ಬಳಿ ಬೆಳಗಿನ ಜಾವ ಯಮ ದರ್ಶನವಾಗಿದ್ದು ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ನಡೆದಿದೆ.ಇಂದು ನಸುಕಿನಲ್ಲಿ ನಡೆ ಅವಘಡದಲ್ಲಿ ವಾಜೀದ್, ಮೆಹಬೂಬಿ, ಪ್ರಿಯಾಂಕಾ, ಮೆಹಬೂಬ್ ಸೇರಿ ಐವರು ಮೃತಪಟ್ಟಿದ್ದಾರೆ.
ಮೃತಪಟ್ಟವರು ಬಾಗಲಕೋಟೆಯ ನವನಗರ ನಿವಾಸಿಗಳಾಗಿದ್ದು
ಖಾಜಾ ಬಂದೇನವಾಜ್ ದರ್ಗಾಕ್ಕೆ ತೆರಳುವಾಗ ದುರಂತ ಸಂಭವಿಸಿದ್ದು, ಮಿನಿ ಬಸ್ಸಿನಲ್ಲಿದ್ದ ಒಟ್ಟು 31 ಜನರ ಪೈಕಿ ಐವರು ಮೃತಪಟ್ಟಿದ್ದು ಉಳಿದ11 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾವಣಗೆರೆ ತಾಲ್ಲೂಕು ಅತ್ತಿಗೇರಿ ಗ್ರಾಮದ ಹತ್ತಿರ ಮಾರುತಿ ವ್ಯಾನ್ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಾರುತಿ ವ್ಯಾನ್ ನಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಈ ಘಟನೆ ರಾಜ್ಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ದಾವಣಗೆರೆ ಕಡೆಯಿಂದ ಸಂತೇಬೆನ್ನೂರು ಕಡೆ ಹೋಗುತ್ತಿದ್ದ ಮಾರುತಿ ಇಕೋ ಹಾಗೂ ಸಂತೇಬೆನ್ನೂರಿನಿಂದ ದಾವಣಗೆರೆ ಕಡೆ ಬರುತ್ತಿದ್ದ ಖಾಸಗಿ ಬಸ್ ವಾಹನಗಳ ಮಧ್ಯೆ ಅಪಘಾತ ಸಂಭವಿಸಿದ್ದು, ಮೃತರು ಬೆಳಗಾವಿ ಜಿಲ್ಲೆಯ ಕಾಗವಾಡ ದವರು ಎಂಬುದಾಗಿ ತಿಳಿದುಬಂದಿದೆ.
ಮೃತ ದೇಹಗಳನ್ನು ದಾವಣಗೆರೆ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿರಿಸಿದ್ದ ಮೃತರ ವಿವರ ಇನ್ನೂ ತಿಳಿದುಬಂದಿಲ್ಲ.