*ಸಭೆಗೆ ಅಗೌರವ ತೋರಿದ ಮೂವರು ಕಾಂಗ್ರೆಸ್ ಸದಸ್ಯರು ಅಮಾನತು*
ಹುಬ್ಬಳ್ಳಿ: ಬುಧವಾರ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಸಿಕ ಸಾಮಾನ್ಯ ಸಭೆಯಲ್ಲಿ ಗಲಾಟೆ ನಡೆದು , ಕಾಂಗ್ರೆಸ್ ಸದಸ್ಯೆಯೊಬ್ಬರು ಅಸ್ವಸ್ಥಗೊಂಡಿದ್ದು ಇನ್ನೊಂದೆಡೆ ಸಭೆಗೆ ಅಗೌರವ ತೋರಿದ ಮೂವರು ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಿ ಮೇಯರ್ ಜ್ಯೋತಿ ಪಾಟೀಲ ಆದೇಶ ಹೊರಡಿಸಿದ್ದಾರೆ.
ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನೆ, ವಾಕ್ಸಮರ ತಾರಕಕ್ಕೆ ಏರಿ ಅಲ್ಲಿದ್ದ ಮಾರ್ಷಲ್ಗಳು ಸದಸ್ಯರನ್ನು ಹೊರಹಾಕಲು ಮುಂದಾದರು. ಪಾಲಿಕೆ ಸದಸ್ಯೆ, ಮಾಜಿ ವಿಪಕ್ಷ ನಾಯಕಿ ಸುವರ್ಣ ಕಲಕುಂಟ್ಲ ಅವರನ್ನು ಮಾರ್ಷಲ್ಗಳು ಹೊತ್ತುಕೊಂಡು ಬರುತ್ತಿದ್ದಾಗ ಕೆಳಗೆ ಬಿದ್ದು ಅಸ್ವಸ್ಥಗೊಂಡಿದ್ದು, ಘಟನೆ ವಿರುದ್ಧ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಪಾಲಿಕೆ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿತು. ಅಲ್ಲದೇ ಅಸ್ವಸ್ಥಗೊಂಡಿದ್ದ ಸದ್ಯಸ್ಯೆಯನ್ನು ಸದನದಲ್ಲೇ ಆರೈಕೆ ಮಾಡಿ ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು.ತದನಂತರ ಅವರು ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಿದರು.
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೇಯರ್ ಜ್ಯೋತಿ ಪಾಟೀಲ್, ಇದು ಮುಂದುವರೆದ ಸಾಮಾನ್ಯ ಸಭೆ. ಕಳೆದ ಬಾರಿ ಮೇಯರ್ ಚುನಾವಣೆ ಇದ್ದರಿಂದ ಹಳೆಯ ವಿಷಯಗಳನ್ನು ಮುಂದುವರೆಸಿಕೊಂಡು ಬಂದಿದ್ದೇವೆ. ಆದ್ರೆ ವಿರೋಧ ಪಕ್ಷದವರು ಸಭೆಯನ್ನು ನಡೆಸಲು ಬಿಡದೆ ಗಲಾಟೆ ನಡೆಸಿದ್ದಾರೆ. ಅಭಿವೃದ್ಧಿಯಲ್ಲಿ ತಾರತಮ್ಯವಿಲ್ಲ. ಸಭೆಗೆ ಘನತೆ ಗೌರವವಿದೆ. ಸಭೆಗೆ ಅಗೌರವ ತೋರಿದ ಮೂರು ಜನ ಕಾಂಗ್ರೆಸ್ ಸದಸ್ಯರನ್ನು ಅಮಾನತು ಮಾಡಲಾಗಿದೆ. ರಾಜು ಕಮತಿ, ಸುವರ್ಣ ಕಲ್ಲಕುಂಟ್ಲ, ದೊರೆರಾಜ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.