*ಯುಗಾದಿಯಂದೆ ಅಪ್ಪ,ಮಗನ ವಿರುದ್ಧ ಮತ್ತೆ ತೊಡೆ ತಟ್ಟಿದ ಯತ್ನಾಳ್/ ಕಾರ್ಯಕರ್ತರ ಅಭಿಪ್ರಾಯ ಆಲಿಸಿ ಹೊಸ ಪಕ್ಷ ಸ್ಥಾಪನೆ ಘೋಷಣೆ
ವಿಜಯಪುರ : ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಯುಗಾದಿ ಹಬ್ಬವಾದ ಇಂದು ಮನಯಲ್ಲಿ ಪೂಜೆ ಸಲ್ಲಿಸಿ, ಸಿದ್ದೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಮ್ಮ ಬೆಂಬಲಿಗರಿಗೆ ಸಿಹಿ ಸುದ್ದಿ ನೀಡಿದ್ದು, ಹಿಂದುತ್ವದ ಅಡಿ ಹೊಸ ಪಕ್ಷ ಸ್ಥಾಪಿಸುವ ಮುನ್ಸೂಚನೆ ನೀಡಿದ್ದು, ಕರ್ನಾಟಕದ ಬಿಜೆಪಿಗೆ ಮುಳ್ಳಾಗುವ ಸಾಧ್ಯತೆ ದಟ್ಟವಾಗಿದೆ.
ಬಹುತೇಕ ಕಾರ್ಯಕರ್ತರು ಹಿಂದುತ್ವದ ಆಧಾರದ ಮೇಲೆ ಹೊಸಪಕ್ಷ ಕಟ್ಟಬೇಕೆಂದು ಒತ್ತಾಯ ಮಾಡುತ್ತಿದ್ದು ಎಲ್ಲರ ಅಭಿಪ್ರಾಯ ಸಂಗ್ರಹ ಶೀಘ್ರದಲ್ಲಿ ಆರಂಭಿಸಿ, ಅವರೆಲ್ಲರ ಅಭಿಮತದಂತೆ. ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಹೊಸ ಪಕ್ಷ ಕಟ್ಟಬೇಕೆಂದು ತೀರ್ಪು ನೀಡಿದರೆ ಹೊಸಪಕ್ಷ ನಿಶ್ಚಿತ ಎಂದು ಹೇಳಿದರು.
ಉಚ್ಛಾಟನೆ ಕುರಿತು ಹೇಳಿದ ಅವರು ನಾನು ಬಿಜೆಪಿ ಪಕ್ಷದ ವಿರುದ್ಧ ಯಾವುದೇ ಅಶಿಸ್ತು ತೋರಿಲ್ಲ. ಅದಕ್ಕೆ ಸಾಕ್ಷಿ ಇದ್ದರೆ ನೀಡಲಿ. ಯಡಿಯೂರಪ್ಪ, ವಿಜಯೇಂದ್ರ ಕುಟುಂಬ ರಾಜಕಾರಣ ಅವರ ಭ್ರಷ್ಟಾಚಾರ ಕುರಿತು ಮಾತನಾಡಿದ್ದೇನೆ. ಅವರ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಮತ್ತೆ ತೊಡೆ ತಟ್ಟಿದರು.
ಲೋಕಸಭಾ ಚುನಾವಣೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಕಮಲ ಅಭ್ಯರ್ಥಿಗಳ ಪರಾಭವಗೊಳ್ಳಲು ಅಪ್ಪ, ಮಗ ಕಾರಣ ಎಂಬ ತಮ್ಮ ಹಳೆಯ ಮಾತನ್ನು ಪುನಃ ಉಚ್ಚರಿಸಿ
ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳನ್ನ ಸೋಲಿಸಲು ಯತ್ನ ನಡೆದಿತ್ತು. ಅವರ ವಿರುದ್ಧವಾಗಿ ಪ್ರಚಾರ ಮಾಡಿದವರನ್ನೇ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದಾರೆಂದು ಹೇಳಿದರು.
ತಮ್ಮ ಹೋರಾಟ ಬಿಜೆಪಿಯ ವಿರುದ್ಧ ಅಲ್ಲ, ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ವಿರುದ್ಧ ಇನ್ನು ಮುಂದೆ ಕೇವಲ ಸಿಕ್ಸರ್ ಹೊಡೆಯುವೆ. ಫೋರ್, ಡಬಲ್, ಸಿಂಗಲ್ ರನ್ ಇಲ್ಲ ಎಂದರು.
ಇತರೆ ಪ್ರಮುಖ ಸುದ್ದಿ
1) ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಾಗ್ಪುರದ ಡಾ.ಹೆಡಗೆವಾರ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ ಮತ್ತು ಗೋಳ್ವಾಲ್ಕರ್ ಅವರ ಸ್ಮಾರಕಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಆರ್ಎಸ್ಎಸ್ ಸರಸಂಘಚಾಲಕ ಮೋಹನ ಭಾಗವತ, ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್, ನಿತಿನ್ ಗಡ್ಕರಿ ಮೊದಲಾದವರು ಈ ವೇಳೆ ಇದ್ದರು.
2) ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಯುಗಾದಿ ಹಬ್ಬದ ಶುಭಾಶಯ ಕೋರಿದರು.
3) ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ಜನರಿಗೆ ಯುಗಾದಿ ಕೊಡುಗೆಯಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ ಎರಡು ಟಿಎಂಸಿ ನೀರು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಎಪ್ರಿಲ್ 1ರಿಂದ 5ರ ಅವಧಿಯಲ್ಲಿ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇದು ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಮತ್ತು ಇಲ್ಲಿನ ಜನರಿಗೆ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಲಿದೆ.
*‘ಕನ್ನಡ ಧ್ವನಿ’ಯ ಎಲ್ಲಾ ಓದುಗರಿಗೆ, ಹಿತೈಷಿಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು*