*ಬಿಲ್ಕಿಶ್ ಬಾನು, ಯಲಿಗಾರ ಹೆಸರು ಮುಂಚೂಣಿಯಲ್ಲಿ*
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಜ್ಯೋತಿ ಪಾಟೀಲ್ ಹಾಗೂ ಉಪ ಮೇಯರ್ ಪಟ್ಟಕ್ಕೆ ಸಂತೋಷ್ ಚವ್ಹಾಣ ಏರಿದ್ದು, ಕಾಂಗ್ರೆಸ್ ಪಕ್ಷದಿಂದ ಯಾರು ವಿಪಕ್ಷ ನಾಯಕರಾಗಿ ನೇಮಕಗೊಳ್ಳಲಿದ್ದಾರೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.
ಈಗಾಗಲೇ ಪ್ರಸಕ್ತ ಅವಧಿಯಲ್ಲಿ ಮೂರು ವರ್ಷಗಳಲ್ಲಿ ವಿಪಕ್ಷ ನಾಯಕ ಸ್ಥಾನ ದೊರೆರಾಜ ಮಣಿಕುಂಟಲ(ಪೂರ್ವ ಕ್ಷೇತ್ರ), ಸುವರ್ಣ ಕಲಕುಂಟಲಾ ( ಸೆಂಟ್ರಲ್) ಹಾಗೂ ರಾಜಶೇಖರ ಕಮತಿ ( ಧಾರವಾಡ ) ಅವರಿಗೆ ದೊರೆತಿದೆ. ಈ ಬಾರಿ ಮೇಯರ್ ಪಟ್ಟ ಸಹ ಪಶ್ಚಿಮ ಕ್ಷೇತ್ರದ ಪಾಲಾಗಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಹುದ್ದೆಯೂ ಆ ಕ್ಷೇತ್ರದವರಿಗೆ ದಕ್ಕುವ ಸಾಧ್ಯತೆ ಹೆಚ್ಚಿದೆ.
ಇಪ್ಪತ್ತೆರಡನೇ ವಾರ್ಡ್ ಕಾರ್ಪೊರೇಟರ್ ಬಿಲ್ಕಿಶ್ ಬಾನು ಮುಲ್ಲಾ, 33ನೇ ವಾರ್ಡ ಸದಸ್ಯ ಇಮ್ರಾನ್ ಯಲಿಗಾರ ಇವರ ಹೆಸರುಗಳು ಮುನ್ನೆಲೆಗೆ ಬಂದಿವೆ. ಈ ಬಾರಿ ಗದ್ದುಗೆ ಅಲ್ಪಸಂಖ್ಯಾತರಿಗೆ ನಿಶ್ಚಿತವಾಗಿದ್ದು, ಹದಿನಾರನೆಯ ವಾರ್ಡ್ ಕಾರ್ಪೊರೇಟರ್ ಪರ್ವೀನ್ ದೇಸಾಯಿ, ಐವತ್ಮೂರರ ಸದಸ್ಯ ಆರೀಫ್ ಭದ್ರಾಪುರ ಅವರು ಹೆಸರೂಗಳೂ ಚರ್ಚೆಗೆ ಬರಬಹುದಾಗಿದ್ದರೂ ಪಶ್ಚಿಮಕ್ಕೆ ವಾಲುವುದು ಬಹುತೇಕ ಖಚಿತವಾಗಿದೆ. ಆದಷ್ಟು ಶೀಘ್ರ ಪ್ರಕಟವಾಗುವ ನಿರೀಕ್ಷೆ ಇದೆ.
ಬಿಜೆಪಿಯಲ್ಲಿ ಸಹ ಮಹತ್ವದ ಸಭಾನಾಯಕ ಸ್ಥಾನಕ್ಕೆ
ಹಿರಿಯ ಸದಸ್ಯರಾದ ರಾಜಣ್ಣ ಕೊರವಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ ಹಾಗೂ ಶಿವು ಮೆಣಸಿನಕಾಯಿ ಇವರ ಹೆಸರುಗಳು ಕೇಳಿಬಂದಿವೆ. ಇಷ್ಟರಲ್ಲೇ ಘೋಷಣೆಯಾಗುವ ಸಾಧ್ಯತೆಗಳಿವೆ.
ಎಲ್ಲ ಸದಸ್ಯರ ಅಭಿಪ್ರಾಯ ಆಲಿಸಿ , ಶಾಸಕರ , ಕಳೆದ ಬಾರಿ ಸ್ಪರ್ಧೆ ಮಾಡಿದವರೊಂದಿಗೆ ಚರ್ಚೆ ನಡೆಸಿ ಯಾವುದೇ ಅಸಮಾಧಾನಕ್ಕೆ ಆಸ್ಪದವಿಲ್ಲದಂತೆ ವಾರದೊಳಗೆ ವಿರೋಧಿ ಧುರೀಣರ ಆಯ್ಕೆ ಮಾಡಲಾಗುವುದು.
*ಅಲ್ತಾಫ್ ಹುಸೇನ್ ಹಳ್ಳೂರ*
ಮಹಾನಗರ ಕಾಂಗ್ರೆಸ್ ಅಧ್ಯಕ್ಷ