ಪೂರ್ವ ಅಥವಾ ಧಾರವಾಡ ಕ್ಷೇತ್ರದ ಪಾಲಾಗುವ ಸಾಧ್ಯತೆ*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಇಪ್ಪತ್ತನಾಲ್ಕನೇ ಮೇಯರ್ ಆಗಿ ಜ್ಯೋತಿ ಪಾಟೀಲ್ ಹಾಗೂ ಉಪ ಮೇಯರ್ ಆಗಿ ಸಂತೋಷ್ ಚವ್ಹಾಣ ಆಯ್ಕೆಯಾಗುವುದರೊಂದಿಗೆ ಆದರ ಬೆನ್ನ ಹಿಂದೆಯೇ ಸಭಾನಾಯಕರಾಗಿ ಯಾರು ನೇಮಕಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಈಗಾಗಲೇ ಬಿಜೆಪಿ ಕೋರ್ ಕಮಿಟಿ ಮುಂದೆ ಈ ಸ್ಥಾನಕ್ಕೆ ನಾಲ್ವರ ಹೆಸರು ಪ್ರಸ್ತಾಪವಾಗಿದ್ದು, ಇಷ್ಟರಲ್ಲೇ ಘೋಷಣೆಯಾಗುವ ಸಾಧ್ಯತೆಗಳಿವೆ.
ಸಾಮಾನ್ಯವಾಗಿ ಸಭಾನಾಯಕರಾಗಿ ಪಾಲಿಕೆ ಕಲಾಪದ ಬಗ್ಗೆ ಅರಿವಿರುವ ಹಿರಿಯ ಸದಸ್ಯರನ್ನೆ ಪರಿಗಣಿಸುವ ಪರಂಪರೆ ಇದ್ದು, ಪ್ರಸ್ತುತ ಬಿಜೆಪಿ ಅವಧಿಯಲ್ಲಿ ಈಗಾಗಲೇ ತಿಪ್ಪಣ್ಣ ಮಜ್ಜಗಿ, ವೀರಣ್ಣ ಸವಡಿ (ಸೆಂಟ್ರಲ್ ಕ್ಷೇತ್ರ), ಶಿವು ಹಿರೇಮಠ (ಪಶ್ಚಿಮ ಕ್ಷೇತ್ರ) ಸಭಾನಾಯಕ ಸ್ಥಾನ ಸಮರ್ಥವಾಗಿ ನಿಭಾಯಿಸಿದ್ದಾರೆ.
ಈ ಬಾರಿ ಹಿರಿಯ ಸದಸ್ಯರಾದ ರಾಜಣ್ಣ ಕೊರವಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ ಹಾಗೂ ಶಿವು ಮೆಣಸಿನಕಾಯಿ ಇವರ ಹೆಸರುಗಳು ಕೋರ್ ಕಮಿಟಿ ಮುಂದೆ ಬಂದಿದೆ ಎನ್ನಲಾಗಿದೆ.
ಈ ಅವಧಿಯಲ್ಲಿ ಸೆಂಟ್ರಲ್ ಗೆ ಎರಡು ಬಾರಿ, ಪಶ್ಚಿಮಕ್ಕೆ ಒಂದು ಬಾರಿ ದೊರೆತಿರುವ ಹಿನ್ನೆಲೆಯಲ್ಲಿ ಸಭಾನಾಯಕ ಸ್ಥಾನ ಪೂರ್ವ ಕ್ಷೇತ್ರದ ಅಥವಾ ಧಾರವಾಡ ಕ್ಷೇತ್ರದ ಪಾಲಾಗುವ ಸಾಧ್ಯತೆ ಇದೆ.
ಪ್ರಸಕ್ತ ಮಹಿಳಾ ಮೇಯರ್ ಇರುವ ಕಾರಣ ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಎಲ್ಲಾ ಸಂದರ್ಭದಲ್ಲೂ ಸಮರ್ಥವಾಗಿ ನಿಭಾಯಿಸಬೇಕಾದ ಹಿನ್ನೆಲೆಯಲ್ಲಿ ಹಿರಿಯ ಸದಸ್ಯರೊಬ್ಬರಿಗೆ ಈ ಬಾರಿ ಈ ಪಟ್ಟ ನಿಶ್ಚಿತವಾಗಿದೆ.