- *15ರಂದು ಉಮೇದುವಾರಿಕೆ ಸಲ್ಲಿಕೆ / ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನೆ ಸಾಧ್ಯತೆ*
ಹುಬ್ಬಳ್ಳಿ : ಧಾರವಾಡ ಕ್ಷೇತ್ರದಿಂದ ಸತತ ಐದನೇ ಬಾ DCರಿ ಕಣಕ್ಕಿಳಿದಿರುವ ಪ್ರಹ್ಲಾದ ಜೋಶಿ ದಿ. 15ರಂದು ನಾಮಪತ್ರ ಸಲ್ಲಿಸಲಿದ್ದು ಸುಮಾರು 40ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಸಾಗರವೇ ಧಾರವಾಡಕ್ಕೆ ಹರಿದು ಬರಲಿದ್ದು ಎದುರಾಳಿಗಳಿಗೆ ಈ ಅಶ್ವಮೇಧಕ್ಕೆ ಯಾವುದೇ ಅಡ್ಡಿ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಲಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ನೇತೃತ್ವದಲ್ಲಿ ಮೆರವಣಿಗೆ ನಡೆಯಲಿದ್ದು, ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಕೆ.ಎಲ್ ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಸಹಿತ ನೂರಾರು ಗಣ್ಯರು ಸಾಥ್ ನೀಡಲಿದ್ದಾರೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ ೫ ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವುದು ಖಚಿತವಾಗಿದ್ದು ಹುಬ್ಬಳ್ಳಿ ಧಾರವಾಡದ ಮಹಿಳಾ ಕಾರ್ಯಕರ್ತರು, ಯುವ ಪಡೆ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಗೆಲುವಿನ ಫಲಿತಾಂಶಕ್ಕೆ ಮುನ್ನುಡಿ ಬರೆಯುವ ಸಾಧ್ಯತೆಗಳಿವೆ.
ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನಮಠದ ದಿಂಗಾಲೇಶ್ವರ ಸ್ವಾಮೀಜಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದು ಬಿಜೆಪಿ ಪಾಳೆಯದಲ್ಲಿ ಸ್ವಲ್ಪ ಆತಂಕಕ್ಕೆ ಕಾರಣವಾಗಿತ್ತಾದರೂ ಅದು ಕ್ರಮೇಣ ಕರಗಲಾರಂಬಿಸಿದೆ. ಗೆಲುವಿನ ಅಂತರ ಕಡಿಮೆ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದೆಡೆ ಕಾಂಗ್ರೆಸ್ ಅಹಿಂದ ಅಸ್ತ್ರ ಬಿಟ್ಟಿದ್ದರೂ ಪಕ್ಷದಲ್ಲಿ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದ್ದು ಎಲ್ಲ ನಾಯಕರಿಗೆ ಸಾಮೂಹಿಕ ಜವಾಬ್ದಾರಿ ಬದಲು ಕೆಲವರಿಗೆ ಹಿರಿತನ ನೀಡಿರುವುದು ಸ್ವಲ್ಪ ಅಸಮಾಧಾನಕ್ಕೆ ಕಾರಣವಾಗಿದೆ. ಆದರೂ ಉಸ್ತುವಾರಿ ಸಚಿವ ಸಂತೋಷ ಲಾಡ್ ಮತ ಬೇಟೆ ಮುಂದುವರಿಸಿದ್ದಾರೆ.
ಈಗಾಗಲೇ ಜೋಶಿ ಎಲ್ಲ ಕ್ಷೇತ್ರಗಳಲ್ಲೂ ಒಂದು ಸುತ್ತಿನ ಪ್ರಚಾರ ಮುಗಿಸಿದ್ದು ಬಹುತೇಕ ಎಲ್ಲ ಮಠ, ಮಂದಿರಗಳಿಗೂ ಭೆಟ್ಟಿ ನೀಡಿ ಆಶೀರ್ವಾದ ಪಡೆದಿದ್ದಾರಲ್ಲದೇ ಪ್ರತಿ ಸಮುದಾಯದ ಸಮಾವೇಶ ಮಾಡುವ ಮೂಲಕ ಮತ ಬ್ಯಾಂಕ್ ಭದ್ರ ಗೊಳಿಸಿದ್ದಾರೆ. ಎಸ್ ಎಸ್ ಕೆ ಸಮಾಜದ ಸಮಾವೇಶ, ಇಂದಿನ ಎಸ್ ಟಿ ಸಮಾವೇಶಗಳೂ ಭರ್ಜರಿ ಯಶ ಕಂಡಿದ್ದು ಜೋಶಿ ಬೆಂಬಲಿಗರಲ್ಲಿ ದೊಡ್ಡ ಹುರುಪು ತಂದುಕೊಟ್ಟಿದೆ.
ಮೊದಲು ನಾಲ್ಕು ಲಕ್ಷದ ದಾಖಲೆ ಗೆಲುವಿನ ಅಂದಾಜಿನಲ್ಲಿದ್ದರೂ ಆಂತರಿಕ ಲೆಕ್ಕಾಚಾರದ ಪ್ರಕಾರ ಲಕ್ಷಕ್ಕೂ ಅಧಿಕ ಮತಗಳಿಂದ ಕಮಲ ಗೆಲುವು ನಿಶ್ಚಿತ ಎಂಬ ಅಂಕಿ ಅಂಶ ಹೊರ ಬಂದಿದೆ ಎನ್ನಲಾಗುತ್ತಿದೆ.
ಮಹಾನಗರ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಸಹಿತ ಪದಾಧಿಕಾರಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಜೋಶಿ ಪರ ಪ್ರಚಾರ ಕೈಗೊಂಡಿದ್ದು ಪ್ರತಿ ಬೂತ್ ಪ್ರಮುಖರ ಬಾಗಿಲು ತಟ್ಟುತ್ತಿದ್ದಾರೆ.