*ಅರುಣಕುಮಾರ, ಹೊಸಮನಿ, ಎಸ್ಎಫ್ಕೆ ಹೆಸರು ಮುಂಚೂಣಿಯಲ್ಲಿ*
ಹುಬ್ಬಳ್ಳಿ : ಉತ್ತರ ಕರ್ನಾಟಕದ ಬಡ ರೋಗಿಗಳ ಪಾಲಿನ ಆಶಾಕಿರಣ ಆಸ್ಪತ್ರೆ ಹಿರಿಮೆಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಪ್ರಸಕ್ತ ನಿರ್ದೇಶಕರಾಗಿರುವ ಡಾ.ರಾಮಲಿಂಗಪ್ಪ ಅಂತರತಾನಿಯವರ ಅಧಿಕಾರ ಪೂರ್ಣಗೊಳ್ಳಲು ದಿನಗಣನೆ ಆರಂಭವಾಗಿದ್ದು ಈ ಗಾದಿಗಾಗಿ ಹಲವರ ಪೈಪೋಟಿ ಆರಂಭವಾಗಿದೆ.
ಕಳೆದ 6 ತಿಂಗಳಿನಿಂದಲೇ ನಿರ್ದೇಶಕ ಹುದ್ದೆಗಾಗಿ ಲಾಬಿ ಆರಂಭವಾಗಿದ್ದು ಪ್ರಸಕ್ತ ಕಿಮ್ಸ್ ನ ವೈದ್ಯಕೀಯ ಅಧೀಕ್ಷಕರಾಗಿರುವ ಡಾ.ಅರುಣಕುಮಾರ, ಪ್ರಾಂಶುಪಾಲರಾದ ಡಾ.ಈಶ್ವರ ಹೊಸಮನಿ, ರೆಡಿಯಾಲಜಿ ವಿಭಾಗದ ಡಾ.ಜಿ.ಸಿ.ಪಾಟೀಲ, ಫಿಜಿಯಾಲಜಿ ವಿಭಾಗದ ಡಾ.ಕೆ.ಎಫ್.ಕಮ್ಮಾರ ಹಾಗೂ ಇವರ ಸಹೋದರ ಎಲುಬು ಮತ್ತು ಕೀಲು ವಿಭಾಗದ ಡಾ.ಎಸ್.ಎಫ್.ಕಮ್ಮಾರ, ಅಲ್ಲದೇ ಶಸ್ತ್ರಚಿಕಿತ್ಸಾ ವಿಭಾಗದ ಡಾ.ಗುರುಶಾಂತಪ್ಪ ಯಲಗಚ್ಚಿನ ಇವರುಗಳ ಹೆಸರು ವ್ಯಾಪಕವಾಗಿ ಕೇಳಿ ಬರುತ್ತಿವೆ.
ಪಡೆದ ಪದವಿ, ಜ್ಯೇಷ್ಠತಾ ಪಟ್ಟಿ, ಅಲ್ಲದೇ ಸಹ ಪ್ರಾಧ್ಯಾಪಕರಾಗಿ ಮತ್ತು ಪ್ರಾದ್ಯಾಪಕರಾಗಿ ತಲಾ ಐದು ವರ್ಷಗಳ ಸೇವೆ ಸಲ್ಲಿಸಿರಬೇಕು ಇಲ್ಲವೇ 5ವರ್ಷ ವಿಭಾಗದ ಮುಖ್ಯಸ್ಥರು ಅಥವಾ ೫ ವೈದ್ಯಕೀಯ ಅಧೀಕ್ಷಕರಾಗಿರಬೇಕು ಎಂಬ ಹಲವು ನಿಯಮಾವಳಿ ಇದ್ದರು ರಾಜಕೀಯ ಪ್ರಭಾವ ಅಲ್ಲದೇ ’ಸಂಪನ್ಮೂಲ’ ನೀಡುವ ತಾಕತ್ತು ಮಹತ್ವದ್ದಾಗಿರುತ್ತದೆ.
ಈಗಾಗಲೇ ಆಕಾಂಕ್ಷಿಗಳು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ ಪಾಟೀಲ , ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕಾನೂನು ಸಚಿವ ಎಚ್.ಕೆ.ಪಾಟೀಲ ಮುಂತಾದವರ ಮೇಲೆ ಒತ್ತಡ ಹೇರಿ ಕಿಮ್ಸ್ಗೆ ಬಲಗಾಲಿಡುವ ಯತ್ನ ನಡೆಸಿದ್ದು, ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ ಮತ್ತು ಕೋನರೆಡ್ಡಿಯವರು ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದವರಾಗಿದ್ದಾರೆ.
ಡಾ.ಅರುಣಕುಮಾರ ಅವರಿಗೆ ಸ್ವಲ್ಪ ಅಡೆ ತಡೆ ಇದ್ದರೂ ಪ್ರಭಾವಳಿಯ ಮೂಲಕ ಹಾಲಿ ನಿರ್ದೇಶಕರಂತೆ ಪ್ರಭಾರಿಯಾಗಿ ಎಂಟ್ರಿಕೊಟ್ಟು ನಂತರ ಪೂರ್ಣಾವಧಿಯಾಗುವ ಹುನ್ನಾರದಲ್ಲಿದ್ದು ಈಶ್ವರ ಹೊಸಮನಿ, ಮತ್ತು ಎಸ್.ಎಫ್ ಕಮ್ಮಾರ ಹೆಸರು ಚಾಲ್ತಿಯಲ್ಲಿದೆ.
ನಿರ್ದೇಶಕರ ಹುದ್ದೆ ಮುಗಿಯುತ್ತಿರುವ ಬಗ್ಗೆ ಸಿಎಒ ಸರ್ಕಾರಕ್ಕೆ ತಿಳಿಸಿದ್ದು ಸುಮಾರು 22 ಜನ ನಿರ್ದೇಶಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆನ್ನಲಾಗುತ್ತಿದ್ದು ಯಾರಿಗೆ ಲಕ್ ಕುದುರುತ್ತದೆ ಕಾದು ನೋಡಬೇಕಾಗಿದೆ.
ಕೋವಿಡ್ ಸಂದರ್ಭದಲ್ಲಿ ಸ್ಮರಣೀಯ ಸೇವೆ ಸಲ್ಲಿಸಿರುವ ರಾಮಲಿಂಗಪ್ಪ ಪೂರ್ಣಾವಧಿ ಮುಗಿಸುತ್ತಿರುವ ರಾಮಲಿಂಗಪ್ಪ ಈಗಾಗಲೇ ತಾವು ಸ್ಪರ್ಧಿಯಲ್ಲ ಎಂದು ಹೇಳಿದ್ದರೂ ಕೆಲ ಲೆಕ್ಕಾಚಾರ ತಿರುವು ಮುರುವಾದರೂ ಅಚ್ಚರಿಯಿಲ್ಲ.