*ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಆಟಗಾರ ರೋಹಿತಕುಮಾರಗೆ ಅಪೂರ್ವ ಅವಕಾಶ*
ಹುಬ್ಬಳ್ಳಿ : ಪಂಜಾಬ ಮತ್ತು ಗುಜರಾತ್ ತಂಡಗಳ ವಿರುದ್ದದ ರಣಜಿ ಪಂದ್ಯಗಳಿಗಾಗಿ ಮಯಾಂಕ್ ಅಗ್ರವಾಲ್ ನಾಯಕತ್ವದ 16 ಸದಸ್ಯರ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇಂದು ಪ್ರಕಟಿಸಿದ್ದು ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ನ ಎಡಗೈ ಸ್ಪಿನ್ನಿಗ ರೋಹಿತಕುಮಾರ ಎಸಿ ಸ್ಥಾನ ಪಡೆದಿದ್ದಾರೆ.
ಜನವರಿ 5ರಿಂದ 8ರವರೆಗೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪಂಜಾಬ್ ವಿರುದ್ಧದ ಹಾಗೂ ಗುಜರಾತ್ನಲ್ಲಿ ಗುಜರಾತ್ ವಿರುದ್ಧ ಜ.12ರಿಂದ 15ರವರೆಗೆ ನಡೆಯಲಿರುವ ಎರಡು ಪಂದ್ಯಗಳಿಗೆ ಈ ತಂಡವನ್ನು ಕೆಎಸ್ ಸಿಎ ಪ್ರಕಟಿಸಿದ್ದು, ಪಿ.ವಿ.ಶಶಿಕಾಂತ ತಂಡದ ಕೋಚ್ ಆಗಿದ್ದಾರೆ.
ಅನೇಕ ವರ್ಷಗಳ ನಂತರ ಹುಬ್ಬಳ್ಳಿಯ ಆಟಗಾರನಿಗೆ ಅವಕಾಶ ದೊರೆತಿದ್ದು ಮನೀಷ ಪಾಂಡೆ, ಸಮರ್ಥ ಆರ್, ದೇವದತ್ತ ಪಡಿಕ್ಕಲ್ , ಶುಭಾಂಗ ಹೆಗಡೆ ಮುಂತಾದ ಘಟಾನುಘಟಿಗಳಿರುವ ತಂಡದಲ್ಲಿ ಹುಬ್ಬಳ್ಳಿಯ ರೋಹಿತ ಕುಮಾರ ತನ್ನ ಸಾಧನೆಯ ಮೂಲಕ ರಣಜಿ ತಂಡಕ್ಕೆ ಬಲಗಾಲಿಟ್ಟಿದ್ದಾರೆ.
19 ,23 ಮತ್ತು 25 ವರ್ಷದೊಳಗಿನ ವಿಭಾಗದಲ್ಲಿ ರಾಜ್ಯ ತಂಡದ ಪರ ಆಡಿರುವ ರೋಹಿತ ಸುಮಾರು 13 ಪಂದ್ಯಗಳಿಂದ 70 ವಿಕೆಟ್ಗಳನ್ನು ಕಿತ್ತು ತಮ್ಮ ಸಾಮರ್ಥ್ಯ ಪಡಿಸಿದ್ದರು. ಕೊನೆಗೂ ಅವರ ಪ್ರತಿಭೆಯನ್ನು ರಾಜ್ಯ ಆಯ್ಕೆ ಸಮಿತಿ ಗುರುತಿಸಿದೆ.
ಹುಬ್ಬಳ್ಳಿ ಸ್ಪೋರ್ಟ್ಸ ಕ್ಲಬ್ನಲ್ಲೇ ಕ್ರಿಕೆಟ್ ಜೀವನ ಆರಂಭಿಸಿದ ರೋಹಿತ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಬಿ.ಕಾಂ. ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದು ಮೂಲತಃ ರಾಣೆಬೆನ್ನೂರದವರಾಗಿದ್ದಾರೆ.
ತಂಡ ಇಂತಿದೆ: ಮಯಾಂಕ ಅಗರವಾಲ್(ನಾಯಕ), ಸಮರ್ಥ ಆರ್, ದೇವದತ್ತ ಪಡಿಕ್ಕಲ್,ನಿಕಿನ್ ಜೋಶ್( ಉಪನಾಯಕ), ಮನೀಷ ಪಾಂಡೆ,ಶುಭಾಂಗ ಹೆಗಡೆ,ಶರತ್ ಶ್ರೀನಿವಾಸ, ವೈಶಾಖ ವಿ, ಕೌಶಿಕ್ ವಿ, ವಿದ್ವತ್ ಕಾವೇರಪ್ಪ, ಶಶಿಕುಮಾರ ಕೆ.,ಸುಜಯ ಸಾತೇರಿ,ನಿಶ್ಚಲ್ ಡಿ.,ವೆಂಕಟೇಶ ಎಂ, ಕಿಶನ್ ಬೇದರೆ ಮತ್ತು ರೋಹಿತ್ಕುಮಾರ ಎಸಿ.
ರಣಜಿ ತಂಡಕ್ಕೆ ಆಯ್ಕೆಯಾಗಿದ್ದು ತುಂಬ ಖುಷಿ ತಂದಿದೆ. ವಿವಿಧ ಪಂದ್ಯಗಳಲ್ಲಿ ತೋರಿದ ನನ್ನ ಸಾಧನೆಯನ್ನು ಆಯ್ಕೆಗಾರರು ಪರಿಗಣಿಸಿದ್ದು ನನ್ನ ಕ್ರಿಕೆಟ್ ಜೀವನದ ಯಶಸ್ಸಿಗೆ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ವೀರಣ್ಣ ಸವಡಿ ಹಾಗೂ ಎಲ್ಲರ ಸಹಕಾರ ಕಾರಣವಾಗಿದೆ.
*ರೋಹಿತಕುಮಾರ ಎಸಿ*
ರಣಜಿ ತಂಡಕ್ಕೆ ಆಯ್ಕೆಯಾದ ಸ್ಪಿನ್ನರ್
ತನ್ನದೇ ಆದ ಹಿರಿಮೆ ಹೊಂದಿರುವ ಹುಬ್ಬಳ್ಳಿ ಸ್ಪೋರ್ಟ್ಸ ಕ್ಲಬ್ನ ಆಟಗಾರರೊಬ್ಬರು ರಣಜಿ ತಂಡ ಪ್ರತಿನಿಧಿಸುತ್ತಿರುವುದು ನಮ್ಮ ಕ್ಲಬ್ಗೆ ಹಿರಿಮೆಯ ವಿಷಯ. ಆಲ್ಲದೇ ರೋಹಿತ್ ಆರಂಭದಿಂದಲೂ ಸತತ ಪರಿಶ್ರಮದ ಮೂಲಕ ದೇಶಿಯ ಕ್ರಿಕೆಟ್ನಲ್ಲಿ ತನ್ನದೇ ಆದ ಮಹತ್ವ ಹೊಂದಿರುವ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾನೆ. ಉತ್ತಮ ಪ್ರದರ್ಶನ ತೋರಲಿ ಎಂದು ಆಶಿಸುವೆ.
*ವೀರಣ್ಣ ಸವಡಿ*
ಅಧ್ಯಕ್ಷರು, ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್