*ಬಡೂರಿಯಾ, ಭಟ್ ತಂಡದಲ್ಲಿ ಏಳು ತಿಂಗಳು ಕೆಲಸ*
ಹುಬ್ಬಳ್ಳಿ : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು ಇಡಿ ವಿಶ್ವವೇ ಈ ಸಂಭ್ರಮ ಕಣ್ತುಂಬಿಕೊಳ್ಳಲು ಉತ್ಸುಕವಾಗಿದ್ದು ರಾಮಜನ್ಮಭೂಮಿ ದೇಗುಲದ ಮೂರ್ತಿ ಕೆತ್ತನೆ ತಂಡದಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಶಿಲ್ಪಿಯೊಬ್ಬ ಕೆಲಸ ನಿರ್ವಹಿಸಿ ಹಿರಿಮೆ ಮೆರೆದಿದ್ದಾನೆ.
ಕಲಘಟಗಿ ತಾಲೂಕಿನ ಜುಂಜನಬೈಲ ಗ್ರಾಮದ ಶಿಲ್ಪಿ ಪ್ರಸ್ತುತ ಸಾಗರದ ಕಲಾಲೋಕ ಸ್ಟುಡಿಯೋ ತೆರೆದು ಅಲ್ಲಿಯೇ ಕಲಾ ಸೇವೆಯಲ್ಲಿ ತೊಡಗಿಕೊಂಡಿರುವ ಪ್ರಕಾಶ ಅಶೋಕ ಹರಮಣ್ಣವರ ಎಂಬವರೆ ಸುಮಾರು 7 ತಿಂಗಳ ಕಾಲ ಅಯೋಧ್ಯೆಯಲ್ಲಿ ಕಾರ್ಯ ನಿರ್ವಹಿಸಿದವರಾಗಿದ್ದಾರೆ.
ಅಯೋಧ್ಯೆಯಲ್ಲಿನ ಮೂರ್ತಿ ಕೆತ್ತನೆ ಜವಾಬ್ದಾರಿಯನ್ನು ರಾಜಸ್ತಾನದ ಸತ್ಯನಾರಾಯಣ ಪಾಂಡೆ, ಬೆಂಗಳೂರಿನ ವಿಪಿನ್ ಬಡೂರಿಯಾ,ಜಿ.ಎಲ್.ಭಟ್ ಹಾಗೂ ಮೈಸೂರಿನ ಅರುಣಕುಮಾರ ನೇತೃತ್ವದ ತಂಡಕ್ಕೆ ನೀಡಲಾಗಿದ್ದು ಬಡೂರಿಯಾ ಮತ್ತು ಭಟ್ ತಂಡದಲ್ಲಿ ಇವರು ಕಾರ್ಯ ನಿರ್ವಹಿಸಿದ್ದಾರೆ.
ಈಗಾಗಲೇ ಕೆತ್ತಲ್ಪಟ್ಟಿರುವ ಮೂರು ಮೂರ್ತಿಗಳಲ್ಲಿ ಒಂದನ್ನು ದಿ. 17ರಂದು ರಾಮಜನ್ಮಭೂಮಿ ಟ್ರಸ್ಟ್ನವರು ಆಯ್ಕೆ ಮಾಡಲಿದ್ದು, ಒಂದು ಮೂರ್ತಿ ಕೆತ್ತನೆಗೆ ತಮ್ಮ ಗುರುಕುಲದಲ್ಲಿ ಅಧ್ಯಯನ ಮಾಡಿದ ಐವರು ಹಳೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು ಅದರಲ್ಲಿ ತಾವೂ ಒಬ್ಬರಾಗಿದ್ದು ನಿಜಕ್ಕೂ ತಮಗೆ ಸಂತಸದ ವಿಷಯ.ತಾವು ಕೆತ್ತಿದ ಮೂರ್ತಿ ಏಳೂವರೆ ಅಡಿ ಎತ್ತರ,24 ಇಂಚು ದಪ್ಪ ಮತ್ತು 41 ಇಂಚು ಅಗಲವಿದೆ ಎಂದು ಪ್ರಕಾಶ ಹೇಳುತ್ತಾರೆ.
ಕಲಘಟಗಿಯ ಗುಡ್ ನ್ಯೂಸ್ ಕಾಲೇಜಿನಲ್ಲಿ ಪಿಯುಸಿವರೆಗೆ ಅಧ್ಯಯನ ಮಾಡಿರುವ ಪ್ರಕಾಶ ಸಾಗರದ ಶಿಲ್ಪ ಗುರುಕುಲದಲ್ಲಿ ಎರಡು ವರ್ಷದ ಡಿಪ್ಲೋಮಾ ಪೂರೈಸಿ,ನಂತರ ಮೈಸೂರಿನ ರವಿವರ್ಮ ಕಲಾ ಶಾಲೆಯಲ್ಲಿ ವಿಜ್ಯುವಲ್ ಆರ್ಟ್ಸ್ನಲ್ಲಿ ಪದವಿ ತಮ್ಮದಾಗಿಸಿಕೊಂಡು ತದನಂತರ ಸಾಗರದಲ್ಲೇ ವೃತ್ತಿ ಮುಂದುವರಿಸಿ ಬದುಕಿನ ದಾರಿ ಕಂಡುಕೊಂಡಿದ್ದಾರೆ.
ಅಯೋಧ್ಯೆ ರಾಮಮಂದಿರ ಶಿಲ್ಪ ಕೆತ್ತನೆ ಕಾರ್ಯದಲ್ಲಿ ರಾಜ್ಯದ ಹತ್ತಾರು ಶಿಲ್ಪಿಗಳು ಪಾಲ್ಗೊಂಡಿದ್ದು ಇಂತಹ ಮಹತ್ತರ ಕಾರ್ಯದಲ್ಲಿ ಕಲಘಟಗಿ ಅತ್ಯಂತ ಹಿಂದುಳಿದ ಗ್ರಾಮದ ಕಲಾವಿದನೊಬ್ಬ ಭಾಗಿಯಾಗಿರುವುದು ಇಡೀ ತಾಲೂಕಿಗಷ್ಟೇ ಅಲ್ಲ ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ತಾಲೂಕಾ ಪಂಚಾಯತ ಮಾಜಿ ಅಧ್ಯಕ್ಷ ಫಕ್ಕಿರೇಶ ನೇಸರೇಕರ ಸಹಿತ ಅನೇಕರು ತಮ್ಮೂರಿನ ಕಲಾವಿದನ ಬಗ್ಗೆ ಗೌರವ ಪಡುತ್ತಾರೆ.