*ರೋವರ್ಸ್ ಕ್ಲಬ್ ಆಶ್ರಯದಲ್ಲಿ ಫೆ.8ರಿಂದ 4ದಿನಗಳ ರಾಜ್ಯಮಟ್ಟದ ಆಹ್ವಾನಿತ ಪಂದ್ಯಾವಳಿ*/
*ನಲ್ವತ್ತರ ಸಂಭ್ರಮದಲ್ಲಿ ವಿದ್ಯಾಕಾಶಿಯ ಹಿರಿಮೆಯ ಸಂಸ್ಥೆ*
ಧಾರವಾಡ : ವಿದ್ಯಾಕಾಶಿಯ ಹಿರಿಮೆಯ ರೋವರ್ಸ್ ಬಾಸ್ಕೆಟ್ಬಾಲ್ ಕ್ಲಬ್ ಕರ್ನಾಟಕ ಸ್ಟೇಟ್ ಬಾಸ್ಕೆಟ್ ಬಾಲ್ ಅಸೋಶಿಯೇಶನ್ ಸಹಯೋಗದಲ್ಲಿ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಆಹ್ವಾನಿತ ಬಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಫೆ. 8ರಿಂದ 11ರ ವರೆಗೆ ಆಯೋಜಿಸಿದೆ.
ಡಿ.ಸಿ. ಕಂಪೌಂಡ್ನಲ್ಲಿರುವ ರೋವರ್ಸ್ ಬಾಸ್ಕೆಟ್ ಬಾಲ್ ಮೈದಾನದಲ್ಲಿ ಲೀಗ್ ಕಂ ನಾಕೌಟ್ ಪಂದ್ಯಾವಳಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಪಂದ್ಯಾವಳಿಯಲ್ಲಿ ರಾಜ್ಯದ ಶ್ರೇಷ್ಠ 24 ಪುರುಷ ಮತ್ತು 8ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. ಪಂದ್ಯಾವಳಿಯಲ್ಲಿ ಪ್ರಶಸ್ತಿ ಮುಡಿಗೇರಿಸಕೊಳ್ಳುವ ಪುರುಷ ತಂಡಕ್ಕೆ 50 ಸಾವಿರ ರೂಪಾಯಿ, ರನ್ನರ್ ಅಪ್ ತಂಡಕ್ಕೆ 35 ಸಾವಿರ ರೂಪಾಯಿ, ಮಹಿಳಾ ವಿಜೇತ ತಂಡಕ್ಕೆ 40 ಸಾವಿರ ರೂಪಾಯಿ ಮತ್ತು ರನ್ನರ್ ಅಪ್ ಗೆ 25 ಸಾವಿರ ರೂಪಾಯಿ ನಗದು ಬಹುಮಾನ ಅಲ್ಲದೇ ಟ್ರೋಫಿ ದೊರೆಯಲಿದೆ.
ಬೆಂಗಳೂರಿನ ಪ್ರತಿಷ್ಠಿತ 15, ಕೋಲಾರ ಮುಂತಾದೆಡೆಯ ತಂಡಗಳು ಹಣಾಹಣಿಯಲ್ಲಿ ಪಾಲ್ಗೊಳ್ಳಲಿದ್ದು, ನಾಲ್ಕು ದಿನಗಳ ಬಾಸ್ಕೆಟ್ಬಾಲ್ ಹಬ್ಬದಲ್ಲಿ ಮೊದಲೆರಡು ದಿನ ಲೀಗ್ ಹಂತದಲ್ಲಿ ತಲಾ 12 ಪಂದ್ಯಗಳು ಎರಡು ಮೈದಾನಗಳಲ್ಲಿ ನಡೆಯಲಿವೆ.
ಕ್ಲಬ್ ಅಧ್ಯಕ್ಷ ರಾಮ ದಾಸಣ್ಣವರ, ಮಹಾಪೋಷಕ, ಉದ್ಯಮಿ ಮಹೇಶ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀಕಾಂತ ಕಂಚಿಬೈಲ, ವಿಜಯ ಬಳ್ಳಾರಿ ಸೇರಿದಂತೆ ಹಲವು ಪದಾಧಿಕಾರಿಗಳು ಹಗಲಿರುಳೆನ್ನದೇ ಪಂದ್ಯಾವಳಿಯ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ನಾಡಿದ್ದು ಬೆಳಿಗ್ಗೆ 10ಗಂಟೆಗೆ ಮಹಾನಗರದ ಪ್ರಥಮ ಪ್ರಜೆ ವೀಣಾ ಬರದ್ವಾಡ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಶಿವು ಹಿರೇಮಠ, ಅಪೊಲೊ ಡೆವಲಪರ್ಸನ ಮುಖ್ಯಸ್ಥ ಶ್ರೀಕಾಂತ ಭಟ್, ಹು-ಧಾ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಸೇರಿದಂತೆ ಅನೇಕರು ಪಾಲ್ಗೊಳ್ಳಿದ್ದು ಕಲಾಭವನದಿಂದ ಎಲ್ಲ ತಂಡಗಳ ಕ್ರೀಡಾಪಟುಗಳ ಮೆರವಣಿಗೆ ಕಣ್ಮನ ಸೆಳೆಯಲಿದೆ.
ಫೆ.9ರಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ದಿವ್ಯಪ್ರಭು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, ತಹಸೀಲ್ದಾರ ಡಾ. ಡಿ.ಎಚ್.ಹೂಗಾರ, ಹುಡಾ ಆಯುಕ್ತ ಡಾ.ಸಂತೋಷಕುಮಾರ ಬಿರಾದಾರ, ಜಿಲ್ಲಾ ಯುವಜನ ಮತ್ತು ಕ್ರೀಡಾಧಿಕಾರಿ ಸದಾನಂದ ಅಮರಾಪುರ ಪಾಲ್ಗೊಳ್ಳಲಿದ್ದು ಫೆ.10ರಂದು ಸಂಜೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಅತಿಥಿಗಳಾಗಿ ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಮೇಯರ ಈರೇಶ ಅಂಚಟಗೇರಿ, ಉದ್ಯಮಿಪ್ರಸಾದ ಶೆಟ್ಟಿ ಭಾಗವಹಿಸಲಿದ್ದಾರೆ.
11ರಂದು ಸಂಜೆ 6-30ಕ್ಕೆ ನಡೆಯುವ ಸಮಾರೋಪ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ, ಶಾಸಕ ಎನ್.ಎಚ್. ಕೋನರಡ್ಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ,ಶಿವಲೀಲಾ ವಿನಯ ಕುಲಕರ್ಣಿ ಭಾಗವಹಿಸುವರು.
40ರ ಸಂಭ್ರಮ : 1984ರಲ್ಲಿ ಬಾಸ್ಕೇಟ್ಬಾಲ್ ಉತ್ತೇಜನದ ಗುರಿಯೊಂದಿಗೆ ಕೇವಲ 15 ಜನರಿಂದ ಆರಂಭವಾದ ಕ್ಲಬ್ ಇಂದು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು,ರಾಜ್ಯದ ಹಳೆಯ ಕ್ಲಬ್ಗಳಲ್ಲಿ ಒಂದೆಂಬ ಹಿರಿಮೆ ತನ್ನದಾಗಿಸಿಕೊಂಡಿದೆ. ಕಳೆದ 20 ವರ್ಷಗಳಿಂದ ಶ್ರೀಮತಿ ರಾಜೇಶ್ವರಿ ಬಳ್ಳಾರಿಯವರ ಸ್ಮರಣಾರ್ಥ ರಾಜ್ಯ ಮಟ್ಟದ ಬಾಲಕ, ಬಾಲಕಿಯರ ಅಂತರ ಶಾಲೆ ಪಂದ್ಯಾವಳಿ ಆಯೋಜಿಸುತ್ತಿದೆ.ನೂರಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ಆಟಗಾರರನ್ನು ರೂಪಿಸಿದೆಯಲ್ಲದೇ ವಿಶ್ವವಿದ್ಯಾಲಯ, 14ವರ್ಷಕ್ಕಿಂತ ಕಿರಿಯರ ತಂಡದಲ್ಲಿ ಇಲ್ಲಿನ ಅನೇಕ ಪ್ರತಿಭೆಗಳು ಇದ್ದು ಕ್ಲಬ್ಗೆ ಕೀರ್ತಿ ತಂದಿವೆ ಎಂದು ಮಹಾ ಪೋಷಕ ಮಹೇಶ್ ಶೆಟ್ಟಿ,ಉಪಾಧ್ಯಕ್ಷ ಶ್ರೀಕಾಂತ ಕಂಚಿಬೈಲ ಕ್ಲಬ್ ಕ್ರಮಿಸಿದ ದಾರಿಯನ್ನು ಬಿಚ್ಚಿಡುತ್ತಾರೆ.ಅಲ್ಲದೇ ಕ್ಲಬ್ ಮೈದಾನವೂ ಫ್ಲಡ್ ಲೈಟ್ ಸೌಲಭ್ಯ ಹೊಂದಿದೆ.