*ನಾಳೆ ಬಿಜೆಪಿ ಚುನಾವಣೆ ಸಮಿತಿ ಸಭೆಯಲ್ಲಿ ಭದ್ರಕೋಟೆಗೆ ಹುರಿಯಾಳು ಘೋಷಣೆ ಸಾಧ್ಯತೆ*
ಹುಬ್ಬಳ್ಳಿ : ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಧಾರವಾಡದ ಏಳು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪಕ್ಕದ ಹಾವೇರಿ-ಗದಗ ಕ್ಷೇತ್ರಕ್ಕೆ ಆನಂದಸ್ವಾಮಿ ಗಡ್ಡದೇವರಮಠ ಟಿಕೆಟ್ ನೀಡುವ ಮೂಲಕ ಬಹು ಸಂಖ್ಯಾತ ಲಿಂಗಾಯತರಿಗೆ ಮಣೆ ಹಾಕಿದ್ದು ಧಾರವಾಡದಲ್ಲಿ ಹಿಂದುಳಿದ ಸಮುದಾಯಕ್ಕೆ ಅವಕಾಶ ಕಲ್ಪಿಸುವುದೋ ಅಥವಾ ಬೆಳಗಾವಿ, ಕೊಪ್ಪಳ ಲೆಕ್ಕಾಚಾರದ ಮೇಲೆ ಬಹುಸಂಖ್ಯಾತರಿಗೆ ಧಕ್ಕಲಿದೆಯೋ ಎಂಬುದು ಮಹತ್ವ ಪಡೆದಿದೆ.
ದಿ. 8ರಂದು ಮೊದಲ ಪಟ್ಟಿ ಬಿಡುಗಡೆವರೆಗೆ ಇದ್ದ ಲೆಕ್ಕಾಚಾರ ಬದಲಾಗಿದ್ದು ಅಂತಿಮವಾಗಿ ಇತರ ಸಾಮಾಜಿಕ ನ್ಯಾಯದ ಲೆಕ್ಕಾಚಾರದ ಮೇಲೆ ಇಲ್ಲಿನ ಭವಿಷ್ಯ ನಿಂತಿದೆ. ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಪತ್ನಿ ಶಿವಲೀಲಾ ಕುಲಕರ್ಣಿ, ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಮಾಜಿ ಸಂಸದ ದಿ.ಡಿ.ಕೆ.ನಾಯ್ಕರ ಪುತ್ರ ಲೋಹಿತ ನಾಯ್ಕರ, ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ರಜತ ಉಳ್ಳಾಗಡ್ಡಿಮಠ ಮುಂತಾದವರ ಹೆಸರುಗಳು ಚಾಲ್ತಿಯಲ್ಲಿತ್ತಾದರೂ 3-4ದಿನಗಳ ಹಿಂದೆಯಷ್ಟೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ವಿನೋದ ಅಸೂಟಿಯವ ಹೆಸರು ದಿಢೀರ ಆಗಿ ಚಾಲ್ತಿಗೆ ಬಂದಿದ್ದು ಡಿಸಿಎಂ ಡಿ.ಕೆ.ಶಿವಕುಮಾರ, ರಾಜ್ಯ ಕೈ ಉಸ್ತುವಾರಿ ರಣದೀಪ ಸುರ್ಜೇವಾಲೆ ಅವರು ಚರ್ಚಿಸಿರುವುದು ಹಲವು ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿದೆ.
ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅಸೂಟಿ ಇಡಿ ಕ್ಷೇತ್ರದಾದ್ಯಂತ ತನ್ನದೇ ಯುವಕರ ಪಡೆ ಹೊಂದಿದ್ದಾರಲ್ಲದೇ 2018ರಲ್ಲಿ ಯುವ ಕಾಂಗ್ರೆಸ್ ಕೋಟಾದಲ್ಲಿ ತ್ರಿಕೋನ ಸ್ಪರ್ಧೆಯಲ್ಲಿ ಸೆಡ್ಡು ಹೊಡೆದು ಗಮನಾರ್ಹ ಮತ ಪಡೆದಿದ್ದರು. ಕಳೆದ ಚುನಾವಣೆಯಲ್ಲಿ ಎನ್.ಎಚ್. ಕೋನರೆಡ್ಡಿ ಗೆಲುವಿಗೂ ಶ್ರಮಿಸಿದ್ದಾರಲ್ಲದೇ ಯುವ ಕಾಂಗ್ರೆಸ್ ಕೋಟಾ ಕೂಡ ಇವರ ಅನುಕೂಲಕ್ಕೆ ಒದಗುವ ಸಾಧ್ಯತೆ ಇದೆ.
ಈ ಕ್ಷೇತ್ರ ಬಾರಿ ಬಿಜೆಪಿ ಭದ್ರಕೋಟೆಯೆಂಬ ಬೋರ್ಡ ಹೇಗಾದರೂ ಮಾಡಿ ಇಳಿಸಲೇ ಬೇಕೆಂದಿರುವ ಜಿಲ್ಲೆಯ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಮರ್ಥ ಉಮೇದುವಾರಿಕೆಗೆ ಚಿಂತನೆ ನಡೆಸಿದ್ದಾರೆ.
ಬಹುಸಂಖ್ಯಾತರ ಕೋಟಾದಡಿ ಹಂಚಿಕೆಯಾದರೆ ಮೋಹನ ಲಿಂಬಿಕಾಯಿ, ಅಥವಾ ಶಿವಲೀಲಾ ಕುಲಕರ್ಣಿ, ಒಬಿಸಿ ಕೋಟಾದಡಿ ಬಂದಲ್ಲಿ ವಿನೋದ ಅಸೂಟಿ, ಲೋಹಿತ ನಾಯ್ಕರ ಇವರಿಬ್ಬರಲ್ಲೊಬ್ಬರಿಗೆ ಧಕ್ಕುವ ಸಾಧ್ಯತೆಗಳು ದಟ್ಟವಾಗಿವೆ. ವಿನಯ ಕುಲಕರ್ಣಿಯವರಿಗೆ ಜಿಲ್ಲಾ ಪ್ರವೇಶ ಮರೀಚಿಕೆಯಾಗಿದ್ದು ಶಿವಲೀಲಾರ ಉಮೇದುವಾರಿಕೆಗೆ ಹಿನ್ನಡೆಯಾಗುತ್ತಿದ್ದು ಲೋಹಿತ ನಾಯ್ಕರ ಹಿಂದೊಮ್ಮೆ ಧಾರವಾಡ ಗ್ರಾಮೀಣಕ್ಕೆ ಹುರಿಯಾಳಾಗಿದ್ದು ಬಿಟ್ಟರೆ ತಳಮಟ್ಟದ ಸಂಪರ್ಕ ಕಡಿಮೆ ಎನ್ನಲಾಗಿದೆ.
ಕಮಲ ಕುತೂಹಲ : ಬಿಜೆಪಿ ಚುನಾವಣೆ ಸಮಿತಿ ಸಭೆ ನಾಳೆ ಹೊಸದಿಲ್ಲಿಯಲ್ಲಿ ನಾಳೆ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಯಲಿದ್ದು ರಾಜ್ಯದ 20 ಸ್ಥಾನಗಳ ಪಟ್ಟಿ ಅಂತಿಮಗೊಳ್ಳಲಿದ್ದು ಪೇಡೆ ಸವಿಯವ ಭಾಗ್ಯ ಯಾರಿಗೆ ಎಂಬುದು ಪಕ್ಕಾ ಆಗಲಿದೆ. ಸೋಮವಾರದೊಳಗೆ ಎರಡನೇ ಬಿಜೆಪಿ ಪಟ್ಟಿ ಬಿಡುಗಡೆಯಾಗಲಿದ್ದು ಧಾರವಾಡದ ಘೋಷಣೆಯಾಗಲಿದೆ ಎನ್ನಲಾಗುತ್ತಿದೆ.
ಹಾಲಿ ಸಂಸದರಾಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಬಿ.ವೈ.ರಾಘವೇಂದ್ರ ,ಉಮೇಶ ಜಾಧವ ಹೆಸರು ಪಕ್ಕಾ ಎನ್ನಲಾಗುತ್ತಿದೆಯಾದರೂ ಪಟ್ಟಿ ಹೊರಬೀಳುವ ವರೆಗೂ ಯಾವುದೇ ಲೆಕ್ಕಾಚಾರ ತಲೆ ಕೆಳಗಾಗುವ ಸಾಧ್ಯತೆ ಇಲ್ಲದಿಲ್ಲ. ಮಾಜಿ ಸಿಎಂ ಜಗದೀಶ ಶೆಟ್ಟರ್ ಹೆಸರು ಪಟ್ಟಿಯಲ್ಲಿದ್ದು ಏನಾಗಲಿದೆ ಎಂಬುದು ಕಾದು ನೋಡಬೇಕಾಗಿದೆ. ಹಾವೇರಿಯ ಲೀಸ್ಟನಲ್ಲಿ ಮಾಜಿ ಸಿಎಂ ಬೊಮ್ಮಾಯಿ ನಿಶ್ಚಿತ ಎನ್ನಲಾಗುತ್ತಿದ್ದರೂ ಡಾ. ಮಹೇಶ ನಾಲವಾಡ, ಕೆ.ಇ ಕಾಂತೇಶ ಸಹ ತಮಗೆ ಖಚಿತ ಎಂಬ ಭರವಸೆಯಲ್ಲಿದ್ದಾರೆ.
ಈಗಾಗಲೇ ಕಳೆದ 15 ದಿನಗಳಿಂದ ಚುನಾವಣಾ ಪ್ರಚಾರ ಆರಂಭಿಸಿರುವ ಜೋಶಿಯವರು ಇಂದು ಸಿದ್ಧಾರೂಢರ ಜಾತ್ರೆಗೂ ತೆರಳಿ ಶ್ರೀಗಳ ಗದ್ದುಗೆ ದರ್ಶನ ಪಡೆದರು.