*ಪಕ್ಷೇತರರಾಗಿ ಸ್ಪರ್ಧೆಗೆ ಒಕ್ಕೊರಲಿನ ನಿರ್ಣಯ/ ಜೋಶಿ ಜಾತಕ ಜಾಲಾಡಿದ ಸ್ವಾಮೀಜಿ/ ಧಾರವಾಡ ಕಣ ರಣ ರೋಚಕ ನಿರೀಕ್ಷೆ*
ಧಾರವಾಡ : ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಐದನೇ ಬಾರಿ ಕಣಕ್ಕಿಳಿದಿರುವ ಧಾರವಾಡ ಕ್ಷೇತ್ರ ಈ ಬಾರಿ ರಣ ರೋಚಕವಾಗುವ ಸಾಧ್ಯತೆಗಳು ದಟ್ಟವಾಗುತ್ತ ಸಾಗಿದ್ದು, ರಾಜ್ಯದಾದ್ಯಂತ ತಮ್ಮ ಪ್ರವಚನಗಳ ಮೂಲಕ ಕೋಟ್ಯಂತರ ಭಕ್ತ ವೃಂದ ಹೊಂದಿರುವ ಶಿರಹಟ್ಟಿಯ ಭಾವೈಕ್ಯತಾ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಇಂದು ಇಲ್ಲಿನ ಸೇವಾಲಯ ಹಾಲ್ನಲ್ಲಿ ನಡೆದ ಬೃಹತ್ ಸಭೆಯಲ್ಲಿ ಭಕ್ತರು ಅವರಿಗೆ ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಒತ್ತಾಯಿಸಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ.
ಇಂದಿನ ಸಭೆಯಲ್ಲಿ ತಮ್ಮನ್ನು ಚುನಾವಣಾ ಕಣಕ್ಕೆ ಇಳಿಯುವಂತೆ ಒಮ್ಮತದಿಂದ ಎಲ್ಲರೂ ಆಗ್ರಹಿಸಿದ್ದು, ಆದರೆ ತಮ್ಮ ಪೀಠದ ಹಿರಿಯ ಗುರುಗಳು ಅಲ್ಲದೇ ಮಠದ ಭಕ್ತರ ಅಭಿಪ್ರಾಯವನ್ನು ಆಲಿಸಿ ಶೀಘ್ರ ಬೆಂಗಳೂರಿನಲ್ಲಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಓರ್ವ ಅವರು ಕ್ಷೇತ್ರಕ್ಕಂಟಿದ ಕಳಂಕ ಅದನ್ನು ತೊಳೆಯುವ ನಿರ್ಧಾರದಲ್ಲಿ ಯಾವುದೇ ಬದಲಿಲ್ಲ ಎಂದು ಸಭೆಯ ಬಳಿಕ ಸ್ವಾಮೀಜಿ ಸ್ಪಷ್ಟ ನುಡಿಯಲ್ಲಿ ಹೇಳುವ ಮೂಲಕ ಬಿಜೆಪಿ ಅಶ್ವಮೇಧ ಕುದುರೆಗೆ ಅಂಕುಶ ಹಾಕಿದಂತಾಗಿದೆ.
ರೈತ ಸಂಘಟನೆ ಸಹಿತ ಅನೇಕ ಪ್ರತಿಷ್ಠಿತರು ಪಾಲ್ಗೊಂಡ ಸಭೆಯಲ್ಲಿ ಮಾತನಾಡಿದ ಶ್ರೀಗಳು ಜೋಶಿಯವರ ಜನ್ಮ ಕುಂಡಲಿಯನ್ನೆ ಬಿಚ್ಚಿಡುವ ಮೂಲಕ ಮತ್ತೊಮ್ಮೆ ಆಕ್ರೋಶ ಹೊರ ಹಾಕಿದ್ದಾರೆ.
ಜೋಶಿ ಲಿಂಗಾಯತರಿಗೆ ಅಷ್ಟೇ ಅಲ್ಲದೇ, ದಲಿತರಿಗೆ, ಹಿಂದುಳಿದವರಿಗೆ ಮೋಸ ಮಾಡಿದ್ದಾರೆ. ಅವರಿಂದ ಹಲವರು ರಾಜಕೀಯವಾಗಿ ಮೂಲೆಗುಂಪಾಗಿದ್ದಾರೆಂದರಲ್ಲದೇ ಡಾ.ಮಹೇಶ ನಾಲವಾಡ, ಈಶ್ವರಪ್ಪ ಪುತ್ರ ಕಾಂತೇಶ, ವೀರಭದ್ರಪ್ಪ ಹಾಲಹರವಿ, ಚಂದ್ರಶೇಖರ ಗೋಕಾಕ ಹಲವರಿಗೆ ಮೋಸ ಮಾಡಿದ್ದಾರೆಂದರು.
ತಾವು ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂದು ಹೋರಾಟ ಮಾಡುತ್ತಿದ್ದಾಗ, ಅವೆರಡೂ ಒಂದೇ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದನ್ನು, ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಬಿಜೆಪಿ ಹೈಕಮಾಂಡ್ ವಿರುದ್ಧ ಹೋರಾಟ ಮಾಡಿದ್ದನ್ನು ಭಕ್ತರ ಗಮನಕ್ಕೆ ತಂದ ಅವರು ನ್ಯಾಯ ಸಿಗುವವರೆಗೂ ಕೊರಳಲ್ಲಿ ಮಾಲೆ ಹಾಕುವುದಿಲ್ಲ ಎಂದು ಪ್ರತಿಜ್ಞೆ ಗೈದರಲ್ಲದೇ ಗುರಿ ಮುಟ್ಟುವವರೆಗೆ ಮಾಲೆ ಹಾಕಬೇಡಿ ಇದು ಯಾವುದೇ ಜಾತಿ ಮತ್ತು ಪಕ್ಷದ ಪರವಾದ ಹೋರಾಟವಲ್ಲ. ವ್ಯಕ್ತಿಯ ಹಿತಕ್ಕಾಗಿ ಹೋರಾಟ ನನ್ನ ಉದ್ದೇಶವಲ್ಲ ಎಂದರು.
ಜೋಶಿ ಅವರ ಬೆಂಬಲಿಗರು ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದ್ದಾರೆ. ಚುನಾವಣೆ ಮೊದಲು ನಾನು ಅವರನ್ನು ನೋಡಿಕೊಳ್ಳುತ್ತೇನೆ. ಎಲ್ಲವನ್ನೂ ನೋಡಿಕೊಳ್ಳುವೆ ಎಂದು ಸವಾಲು ಹಾಕಿದರಲ್ಲದೇ ನಾನು ಬಿಜೆಪಿ ಪಕ್ಷದ ಬಗ್ಗೆ ಚಕಾರವೆತ್ತಿಲ್ಲ. ಆದರೆ ಈ ಕೊಳೆ ತೊಳೆಯಲು ಹೋರಾಟ ಎಂದರು.
ಸದಾಕಾಲವೂ ಮೋದಿಯವರ ಪಕ್ಕದಲ್ಲೇ ಇರುವ ಜೋಶಿ ನಮ್ಮ ನಾಡಿಗೆ ಕೊಟ್ಟಿದ್ದು ಶೂನ್ಯ ಕೊಡುಗೆ ಎಂದರಲ್ಲದೇ ಮಠಾಧಿಪತಿಗಳು ಸ್ವಾಭಿಮಾನ ಬಿಟ್ಟು ಬದುಕಬಾರದು. ನೊಂದವರ ಬೆನ್ನಿಗೆ ಸ್ವಾಮೀಜಿಗೆ ನಿಲ್ಲಬೇಕೆಂದರು.
ಇನ್ನೊಂದೆಡೆ ಕೇಸರಿ ಪಡೆ ಮತ್ತು ಕೈಪಡೆ ಅಭ್ಯರ್ಥಿಗಳ ಪ್ರಚಾರ ಮುಂದುವರಿದಿದ್ದರೂ ದಿಂಗಾಲೇಶ್ವರರ ನಿರ್ಧಾರದ ಬಳಿಕವೇ ಕಣ ರಂಗೇರಲಿದೆ.