*ಕಾರ್ಯಾಧ್ಯಕ್ಷ ವಿನಯ್ ನೇತೃತ್ವದಲ್ಲಿ ಸಿಎಂ, ಡಿಸಿಎಂ ಸಮ್ಮುಖದಲ್ಲಿ ಸೇರ್ಪಡೆ*
ಧಾರವಾಡ : ಬೆಂಗಳೂರಿನ ಕೆಪಿಸಿಸಿ ಕಛೇರಿಯ ಭಾರತ ಜೋಡೋ ಸಭಾಭವನದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಹಿಂದುಳಿದ ಸಮುದಾಯದ ಪ್ರಭಾವಿ ಮುಖಂಡ ಬಸವರಾಜ ಮಲಕಾರಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಶಾಸಕರಾದ
ವಿನಯ ಕುಲಕರ್ಣಿ ಅವರು ಅಧಿಕಾರ ಸ್ವೀಕರಿಸುವ ದಿನದಂದೇ ಮರಳಿ ಪಕ್ಷಕ್ಕೆ ಸೇರ್ಪಡೆಯಾದರು.
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಹಿಂದುಳಿದ ವರ್ಗಗಳ ಮುಖಂಡರ ಒಗ್ಗೂಡಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದ್ದು ಕಂಡು ಬರುತ್ತಿದ್ದು ಮಲಕಾರಿ ಅವರನ್ನು ಕೂಡ ವಿನಯ ಕುಲಕರ್ಣಿ ಅವರ ವಿಶೇಷ ಮುತುವರ್ಜಿ ಹಾಗೂ ಶಿಫಾರಸಿನಿಂದ
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ಅವರ ನೇತೃತ್ವದಲ್ಲಿ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ನೂತನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಣೀಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜ ಗೌರಿ,ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೇಮಂತ ಗುರ್ಲಹೊಸೂರ, ನವನಗರ ಬ್ಲಾಕ್ ಅಧ್ಯಕ್ಷರಾದ ಹನಮಂತ ಕೊರವರ ಸೇರಿದಂತೆ ಧಾರವಾಡ ಜಿಲ್ಲೆಯ ನೂರಾರು ಮುಖಂಡರು ಉಪಸ್ಥಿತರಿದ್ದರು.
ಪಶ್ಚಿಮ ವಿಧಾನಸಭಾ ವ್ಯಾಪ್ತಿಯ ರಾಣಿ ಚೆನ್ನಮ್ಮ ಬ್ಲಾಕ್ ಮಾಜಿ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಪಕ್ಷದ ಸಂಘಟನೆ ಮಾಡಿದ್ದರಲ್ಲದೆ,ಶಾಸಕ ಬೆಲ್ಲದಗೆ ಸೆಡ್ಡು ಹೊಡೆದಿದ್ದರು. ಕೋವಿಡ್ ವೇಳೆಯೂ ಅನೇಕ ಜನೋಪಯೋಗಿ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದ್ದರು.ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಹಿಂದುಳಿದ ಕೋಟಾದಡಿ ಇವರ ಹೆಸರು ಪರಿಗಣನೆಗೆ ಸಹ ಬಂದಿತ್ತು. ಟಿಕೆಟ್ ಸಿಗದ ಹಿನ್ನಲೆಯಲ್ಲಿ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದರು.
ತತ್ವ, ಸಿದ್ದಾಂತದ ರಾಜಕಾರಣ ಮಾಡುತ್ತಲೇ ಬಂದಿರುವ ಇವರು ಈ ಹಿಂದೆ ಮೈಸೂರು ದಸರಾ ವಸ್ತು ಪ್ರಾಧಿಕಾರದ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದಾರೆ . ಪಕ್ಷ ಸಂಘಟನೆಗೆ ಸಹ ಇಂತಹ ಸಮರ್ಪಣಾ ಮನೋಭಾವದ ಮುಖಂಡರ ಅಗತ್ಯವಿದೆ.