*ಕಾಂಗ್ರೆಸ್ ಪಾಳೆಯದಲ್ಲಿ ಪೈಪೋಟಿ ’ಹೊಯ್ ಕೈ’ ಹಂತಕ್ಕೆ* / *ಸಮ್ಮತ ಅಭ್ಯರ್ಥಿಗೆ ಹುಡುಕಾಟ*/ *ಅಲ್ಪಸಂಖ್ಯಾತರಿಗೊ- ಬಹುಸಂಖ್ಯಾತರಿಗೊ ಕುತೂಹಲ*/ *ಬೊಮ್ಮಾಯಿ ಪುತ್ರನ ಪ್ರವೇಶಕ್ಕೆ ಸಜ್ಜಾಗುತ್ತಿರುವ ಅಖಾಡಾ*
ಶಿಗ್ಗಾಂವಿ : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಸತ್ತಿಗೆ ಆಯ್ಕೆಯಾಗಿದ್ದು ತೆರವಾದ ಶಿಗ್ಗಾವಿ ವಿಧಾನ ಸಭಾ ಕ್ಷೇತ್ರಕ್ಕೆ ಉಪಚುನಾವಣೆ ಚುನಾವಣೆ ಘೋಷಣೆಯಾಗಲಿದ್ದು ಆಡಳಿತಾರೂಡ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಏರುತ್ತಿದ್ದು ಕೈ ಪಾಳೆಯದಲ್ಲಂತೂ ಪೈಪೋಟಿ ಹೊಯ್ ಕೈ ಹಂತ ತಲುಪಿದೆ.
ಕಳೆದ ಅನೇಕ ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾದ ಶಿಗ್ಗಾವಿಯನ್ನೂ ಈ ಬಾರಿ ಶತಾಯ ಗತಾಯ ಗೆಲ್ಲಲೇಬೇಕೆಂದು ಹಠ ತೊಟ್ಟಿದ್ದರೆ, ಕೇಸರಿ ಪಡೆಗೂ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.
ಬಸವರಾಜ ಬೊಮ್ಮಾಯಿಯವರು ಲೋಕಸಭೆ ಕಣಕ್ಕಿಳಿದಾಗಿನಿಂದ ಬಹುತೇಕ ಉಸ್ತುವಾರಿ ವಹಿಸಿಕೊಂಡಿರುವ ಅವರ ಮಗ ಭರತ ಬೊಮ್ಮಾಯಿ ಅವರೇ ಕಣಕ್ಕಿಳಿಯಬಹುದೆಂಬ ಗುಸು ಗುಸು ದಟ್ಟವಾಗಿದ್ದರೂ ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಡಿ.ಎಸ್.ಮಾಳಗಿ, ಅಲ್ಲದೇ ಸಿದ್ಧಾರ್ಥಗೌಡ ಪಾಟಿಲ ಮುಂತಾದವರ ಹೆಸರುಗಳೂ ಸಹ ರೇಸನಲ್ಲಿವೆ. ಪಂಚಮಸಾಲಿ ಮತಗಳೇ ಇಲ್ಲಿ ಬಹುಸಂಖ್ಯೆಯಲ್ಲಿದ್ದು ಮಾಜಿ ಸಚಿವ ಮುರುಗೇಶ ನಿರಾಣಿ ಕರೆ ತರುವ ಚಿಂತನೆ ಸಹ ನಡೆದಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಲೆ ಇದ್ದು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಂತಿಮ ಕ್ಷಣದಲ್ಲಿ ಟಿಕೆಟ್ ತಂದ ಯಾಸೀರ ಖಾನ ಪಠಾಣ ಅಲ್ಲದೇ ಹಳಬ, ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಹೊಂದಿರುವ ಅಜ್ಜಂ ಫೀರ್ ಖಾದ್ರಿ ಮಧ್ಯೆ ನಡುವೆ ದೊಡ್ಡ ಸಮರವೇ ನಡೆದಿದೆ. ಕ್ಷೇತ್ರದಲ್ಲಿ ನಿರ್ಣಾಯಕ ಮುಸ್ಲಿಂ ಮತಗಳಿದ್ದು ಆ ಹಿನ್ನೆಲೆಯಲ್ಲಿ ಈ ಕ್ಷೇತ್ರ ಅಲ್ಪಸಂಖ್ಯಾತರಿಗೆ ನೀಡಬೇಕೆಂಬ ಬಲವಾದ ಹಕ್ಕೊತ್ತಾಯ ಈಗಾಗಲೇ ಕೇಳಿ ಬಂದಿದ್ದು ಆದರೆ ಯಾಸೀರ ಪಠಾಣ ಮತ್ತು ಖಾದ್ರಿ ಗುದ್ದಾಟ ಪರಿಶೀಲನೆಗೆ ಬಂದ ವೀಕ್ಷಕರಿಗಲ್ಲದೇ ವರಿಷ್ಠರಿಗೂ ತಲೆ ನೋವಾಗಿ ಪರಿಣಮಿಸಿದೆ.
ಮುಸ್ಲಿಂ ಸಂಘಟನೆಗಳು, ಹುಬ್ಬಳ್ಳಿ,ಧಾರವಾಡ ಅಂಜುಮನ್ ಸಂಘಟನೆಗಳೂ ಸ್ಥಳೀಯ ಮುಸ್ಲಿಂ ಅಭ್ಯರ್ಥಿಗೆ ಮಣೆ ಹಾಕಬೇಕೆಂದಿವೆ. ಪಠಾಣ ಮತ್ತು ಖಾದ್ರಿ ಯಾರಿಗೆ ಕೊಟ್ಟರೂ ಒಬ್ಬರ ಕಾಲು ಇನ್ನೊಬ್ಬರು ಎಳೆಯುವುದು ನಿಶ್ಚಿತವಾದ ಹಿನ್ನೆಲೆಯಲ್ಲಿ ಹಿರಿತನ ಅಲ್ಲದೇ ಸರ್ವ ಸಮ್ಮತ ಅಭ್ಯರ್ಥಿಯಾಗಿ ಹುಬ್ಬಳ್ಳಿ ಅಂಜುಮನ್ ಅಧ್ಯಕ್ಷ , ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಕಣಕ್ಕಿಳಿದರೆ ಒಳಿತು ಎಂಬ ಮಾತೂಗಳು ಕೇಳಿ ಬರತೊಡಗಿವೆ. ಇದಲ್ಲದೇ ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದ ಹ್ಯಾರಿಸ್ ನಲಪಾಡ, ಸಿ.ಎಂ.ಇಬ್ರಾಹಿಂ ಪುತ್ರ ಫೈಜ್ ಇಬ್ರಾಹಿಂ ಪ್ರಸ್ತಾಪವೂ ಆಗಿದೆ.
ಮುಸ್ಲಿಂ ಹೊರತುಪಡಿಸಿ ಬಹುಸಂಖ್ಯಾತ ಸಮುದಾಯಕ್ಕೆ ನೀಡಬೇಕೆಂಬ ವಾದವೂ ಮುನ್ನಲೆಗೆ ಬಂದಿದ್ದು ಮಾಜಿ ಸಂಸದ ಮಂಜುನಾಥ ಕುನ್ನೂರ ಪುತ್ರ ಅಲ್ಲದೇ ಕೆಪಿಸಿಸಿ ಪದಾಧಿಕಾರಿಯಾಗಿರುವ ರಾಜು ಕುನ್ನೂರ, ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಸಚಿವ ಆರ್.ಶಂಕರ, ರಾಜೇಶ್ವರಿ ಪಾಟೀಲ, ಪ್ರೇಮಾ ಪಾಟೀಲ, ಜಿಲ್ಲಾ ಅಧ್ಯಕ್ಷ ಸಂಜೀವ ಕುಮಾರ ನೀರಲಗಿ,ಹನುಮಂತ ಬಂಡಿವಡ್ಡರ ಮುಂತಾದವರ ಹೆಸರುಗಳು ಚಾಲ್ತಿಯಲ್ಲಿ ಬಂದಿವೆ. ಪಂಚಮಸಾಲಿ ಮತಗಳ ಮೇಲೆ ಕಣ್ಣಿಟ್ಟು ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಹೆಸರು ಸಹ ತೇಲಿ ಬಿಡಲಾಗಿದೆ.
ಬೊಮ್ಮಾಯಿಯವರು ಕೃತಜ್ಞತೆ ಹೆಸರಲ್ಲಿ ಹಳ್ಳಿ ಹಳ್ಳಿಗೂ ಭೇಟಿ ನೀಡುತ್ತಿದ್ದು ಅವರ ಪುತ್ರನಿಗೆ ಕಣಕ್ಕಿಳಿಸುವ ತಯಾರಿ ಎನ್ನಲಾಗುತ್ತಿದ್ದು ಆದರೆ ಅವರು ಶಿಗ್ಗಾಂವಿ ಅಭ್ಯರ್ಥಿ ಬಗೆಗೆ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುತ್ತಾರೆ.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಮತಗಳು ಬಂದಿರುವುದು ಕೈ ಪಾಳೆಯದಲ್ಲಿ ಹೊಸ ಹುಮ್ಮಸ್ಸು ಬಂದಿದ್ದು ಆದರೆ ಪ್ರತಿ ಸಲವೂ ಬಣ ರಾಜಕೀಯವೇ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಈ ಬಾರಿಯೂ ಇಲ್ಲಿ ಅಲ್ಪ ಸಂಖ್ಯಾತರಿಗೆ ಕಾಂಗ್ರೆಸ್ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.