*ಹೂಬಳ್ಳಿ ಹುಡುಗಿ ಪ್ರಿಯಾಂಕಾ ಸಾಧನೆಗೆ ಮತ್ತೊಂದು ಗರಿ*
ಹುಬ್ಬಳ್ಳಿ : ಹುಬ್ಬಳ್ಳಿಯ ಪ್ರಾಣಿ ಹಕ್ಕುಗಳ ಕಾರ್ಯಕರ್ತೆಯೊಬ್ಬಳು ಜಾಗತಿಕ ಮಟ್ಟದ ಸೌಂಧರ್ಯ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿ ’ಮಿಸ್ ಕ್ವೀನ್ ಆಪ್ ಯುನಿವರ್ಸ್’ ಕಿರೀಟ ತಮ್ಮ ಮುಡಿಗೇರಿಸಿಕೊಳ್ಳುವ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ರಾಜ್ಯದ ಮೊದಲಿಗರೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಮಿಸ್ಟರ್ ಯುನಿವರ್ಸ್ ಹಾಗೂ ಟ್ರಾನ್ಸಫಾರ್ಮೇಶನ್ ನೈಟ್ಸ್ ವತಿಯಿಂದ ಕಳೆದ 23ರಿಂದ 26ರವರೆಗೆ ನಡೆದ ಸ್ಪರ್ಧೆಯಲ್ಲಿ ಪ್ರಿಯಾಂಕಾ ಕೊಲ್ವೇಕರ ಅವರೇ ಈ ಪುರಸ್ಕಾರಕ್ಕೆ ಭಾಜನರಾದವರಾಗಿದ್ದಾರೆ.
ಆಸ್ಟ್ರೇಲಿಯಾ, ಸಿಂಗಪುರ, ಹಾಂಗಕಾಂಗ್, ಥೈಲ್ಯಾಂಡ್, ಇಂಡೋನೇಶಿಯಾ ಸೇರಿದಂತೆ ಸುಮಾರು 40ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ಇವರು ವಿಜೇತರಾಗಿದ್ದಾರೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ ಪ್ರಿಯಾಂಕಾ ಹಿಂದೆಯೂ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು 2019ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್ ಆಫ್, 2018ರ ಮಿಸ್ ಭಾರತ ಅರ್ಥ್ನಲ್ಲಿ ತೃತೀಯ ಸ್ಥಾನ ಪಡೆದಿದ್ದರು. 2012ರಲ್ಲಿ ಆಯೋಜಿಸಿದ್ದ ಮಿಸ್ ಬೆಂಗಳೂರು ಸ್ಪರ್ಧೆಯಲ್ಲಿ ಮಿಸ್ ಬ್ಯೂಟಿಪುಲ್ ಸ್ಮೈಲ್ ಸೌತ್ ಟೈಟಲ್ ಜಯಿಸಿದ್ದರು. ಈ ವರ್ಷ ದಾದಾಸಾಹೇಬ್ ಫಾಲ್ಕೆ ರಾಷ್ಟ್ರೀಯ ಟೆಲಿವಿಷನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಗ್ರೀನ್ ಗ್ಲ್ಯಾಮರ್ ದಿವಾ ಹಾಗೂ ಮಿಸ್ ಸಸ್ಟೆನೇಬಲ್ ದಿವಾ ಪ್ರಶಸ್ತಿ ಪಡೆದಿದ್ದರು.
ಅಮೇರಿಕಾದ ಪ್ಲೋರಿಡಾದಲ್ಲಿ ನಡೆದ ಮಿಸ್ ಯುನಿವರ್ಸಲ್ ಪೆಟೈಟ್-24 ಸೌಂದರ್ಯ ಸ್ಪರ್ಧೆಯಲ್ಲಿ ಭುವನಸುಂದರಿ ಕಿರೀಟವನ್ನು ಇತ್ತೀಚೆಗೆ ಹುಬ್ಬಳ್ಳಿಯ ವೈದ್ಯೆ ಡಾ.ಶೃತಿ ಹೆಗಡೆ ತನ್ನದಾಗಿಸಿಕೊಂಡ ಬೆನ್ನ ಹಿಂದೆಯೇ ಪ್ರಿಯಾಂಕಾ ಕೂಡ ತನ್ನ ಸಾಧನೆ ಹಾದಿಯಲ್ಲಿ ಮತ್ತೊಂದು ಪ್ರಶಸ್ತಿ ತನ್ನದಾಗಿಸಿಕೊಂಡು ವಾಣಿಜ್ಯ ರಾಜಧಾನಿಗೆ ಕೀರ್ತಿ ತಂದಿದ್ದಾಳೆ.