*ಶಿವಯೋಗಿ ಗದ್ಗಿಮಠ ಸಂಕಲ್ಪಕ್ಕೆ ಸಾಥ್ ನೀಡಿದ ಮಿತ್ರವೃಂದ,ಲಯನ್ಸ್ ಪರಿವಾರ* /*ವಿವಿಧ ವೃತ್ತಿಯ 123 ಜನರ ತಂಡದ ಅಭೂತಪೂರ್ವ ಧಾರ್ಮಿಕ ಯಾತ್ರೆ*
ಹುಬ್ಬಳ್ಳಿ : *’ಕುಚ್ಚಿಕೂ … ಕುಚ್ಚಿಕೂ .. ಕುಚ್ಚಿಕೂ ನೀನು ಚಡ್ಡಿ ದೋಸ್ತಿ ಕಣೋ ಕುಚ್ಚಿಕೂ, ಜೀವಕ್ಕಿಂತ ಜಾಸ್ತಿ ಕಣೋ ಕುಚ್ಚಿಕೂ’*ಎಂಬ ಮೇರು ನಟ ಡಾ.ವಿಷ್ಣುವರ್ಧನ ಹಾಗೂ ರೆಬೆಲ್ ಸ್ಟಾರ್ ಅಂಬರೀಷ ನಟನೆಯ ದಿಗ್ಗಜರು ಚಿತ್ರದ ಸೂಪರ್ ಹಿಟ್ ಹಾಡು ಕನ್ನಡ ನಾಡಿನಲ್ಲಿ ಕೇಳದವರೆ ಇಲ್ಲ. ಅದೇ ರೀತಿ ಶೋಲೆ ಚಿತ್ರದದಲ್ಲಿ ಸೂಪರ್ ಸ್ಟಾರ್ ಅಮಿತಾಬ್ಬಚ್ಚನ್ ಮತ್ತು ಧರ್ಮೇಂದ್ರ ಅವರ *’ಯೇ ದೋಸ್ತಿ ಹಮ್ ನಹಿ ತೋಡೆಂಗೆ, ತೋಡೆಂಗೆ ಧಮ್ ಅಗರ ತೇರಾ ಸಾಥ್ ನ ಛೋಡೆಂಗೆ’* ಎಂಬ ಹಾಡನ್ನು ಗುನು ಗುನಿಸದವರೇ ಇಲ್ಲ.
ಹೌದು, ಕಷ್ಟವಿರಲಿ, ಸುಖವಿರಲಿ ಸದಾ ಒಬ್ಬರಿಗೊಬ್ಬರು ಸಾಥ್ ನೀಡುವ ಅಂತಹುದೇ ಕುಚ್ಛಿಕೂ ಗೆಳೆಯರ ಗ್ಯಾಂಗ್ನ ಪ್ರಯತ್ನದ ಫಲ ವಾಣಿಜ್ಯ ರಾಜಧಾನಿಯ ಸುಮಾರು 123 ಭಕ್ತರ ತಂಡ ಒಡಿಸ್ಸಾ ರಾಜ್ಯದ ಪುರಿಯ ಜಗನ್ನಾಥನ ದರ್ಶನ ಮಾಡುವಲ್ಲಿ ಯಶಸ್ವಿಯಾಯಿತು.
ಇಂತಹದ್ದೊಂದು ಧಾರ್ಮಿಕ ಯಾತ್ರೆಯ ಕನಸು ಹೊತ್ತವರು ನಗರದ ನವೀನ್ ಪಾರ್ಕ್ ನಿವಾಸಿ ಶಿವಯೋಗಿ ಗದ್ಗಿಮಠ ಮತ್ತು ಗೀತಾ ದಂಪತಿ. ಅದಕ್ಕೆ ಅಕ್ಷರಶಃ ಸಾಥ್ ನೀಡಿದವರು ಮಹೇಂದ್ರ ಸಿಂಘಿ ಸಹಿತ ಅವರ ಗೆಳೆಯರ ಬಳಗ. ಲಯನ್ಸ್ ಕ್ಲಬ್ ಹುಬ್ಬಳ್ಳಿ ಪರಿವಾರದ ಸಹಯೋಗದಲ್ಲಿ ಈ ಆಧ್ಯಾತ್ಮಿಕ ಪ್ರವಾಸ ನ.17ರಿಂದ 21ರವರೆಗೆ ನಡೆಯಿತು.
ಶಿವಯೋಗಿ ಗದ್ಗಿಮಠರಿಗೆ ಯಾತ್ರೆಗೆ ಕರೆದೊಯ್ಯುವದು ಹೊಸತಲ್ಲ. ಈ ಹಿಂದೆ 2013ರಲ್ಲಿ ಶಿರಡಿಗೆ ಸುಮಾರು 100 ಜನರ ತಂಡದೊಂದಿಗೆ, 2014ರಲ್ಲಿ ತಿರುಪತಿ ವೆಂಕಪ್ಪನ ಸನ್ನಿದಿಗೆ ಸುಮಾರು 240 ಜನರ ತಂಡದೊಂದಿಗೆ, ತದನಂತರ 2022ರಲ್ಲಿ ಶಿರಡಿಗೆ ಸುಮಾರು 100 ಜನರೊಂದಿಗೆ ಯಾತ್ರೆಯನ್ನು ಮಾಡಿಸಿದ್ದಾರೆ. ತಮ್ಮ ಪರಿವಾರದೊಂದಿಗೆ ಸಂಬಂಧಿಗಳು, ಗೆಳೆಯರು, ಲಯನ್ಸ್ ಸಂಘಟನೆಯ ಸದಸ್ಯರು, ಹಲವು ವರ್ಷಗಳ ಕಾಲ ಜತೆಯಲ್ಲೇ ಕೆಲಸ ಮಾಡಿದವರನ್ನು ಕರೆದೊಯ್ಯುವದನ್ನು ಹವ್ಯಾಸವಾಗಿಸಿಕೊಂಡವರು. ಮನೆಯಲ್ಲಿನ ಸಂಭ್ರಮದ ವೇಳೆ ಪಕ್ಕದ ಮನೆಯವರನ್ನೇ ಮರೆಯುವ ಇಂದಿನ ಕಾಲದಲ್ಲಿ ಶಿವಯೋಗಿ ಹಾಗೂ ಮಹೇಂದ್ರ ಸಿಂಘಿಯಂತಹ ಅಪರೂಪದ ಗೆಳೆಯರು ಯಾವುದೇ ಫಲಾಪೇಕ್ಷೆ ಇಲ್ಲದೇ ವಿಷ್ಣುವಿನ ಅವತಾರವೆಂದೆ ಕರೆಯುವ ಪುರಿಗೆ ಧಾರ್ಮಿಕ ಯಾತ್ರೆ ಮಾಡಿಸಿದ್ದಾರೆ.
ಏಳು ವರ್ಷದ ಬಾಲಕಿಯಿಂದ ಹಿಡಿದು 78ರ ವರೆಗಿನ ಎಲ್ಲ ವಯೋಮಾನದವರು ಇದ್ದ 123ಜನರ ತಂಡದಲ್ಲಿ ಪ್ರತಿಷ್ಠಿತ ವೈದ್ಯರು, ವಕೀಲರು, ಹಿರಿಯ ಪತ್ರಕರ್ತರು, ಕಲಾವಿದರು, ಉದ್ಯಮಿಗಳು,ಪ್ರಾಧ್ಯಾಪಕರು ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿದ್ದು ಮುಖವನ್ನೇ ನೋಡದ ಅನೇಕರು ಐದೇ ದಿನಗಳಲ್ಲಿ ಒಂದೇ ಮನೆಯವರಂತಾಗುವಂತಹ ಬಾಂಧವ್ಯದ ಬೆಸುಗೆ ಬೆಸೆಯುವಂತಾದದ್ದು ವಿಶೇಷ.
ಹುಬ್ಬಳ್ಳಿಯ ನಡೆದಾಡಿದ ದೇವರು ಶ್ರೀ ಸಿದ್ಧಾರೂಢರ ಹಾಗೂ ಶಿರಡಿ ಸಾಯಿಬಾಬಾ ಪರಮ ಭಕ್ತರಾದ ಶಿವಯೋಗಿ ಗದ್ಗಿಮಠ ಅವರು ಕೆಲ ವರ್ಷಗಳ ಹಿಂದೆ ಅಕ್ಕಲಕೋಟೆ ಸಮರ್ಥ ರಾಮದಾಸರ ಜೀವನ ಚರಿತ್ರೆ ಓದುವಾಗ ಪುರಿ ಜಗನ್ನಾಥನ ದರ್ಶನಕ್ಕೆ ಘಟನಾವಳಿಗಳು, ಪವಾಡಗಳನ್ನು ನೋಡಿ ಅಂದೇ ಸಂಕಲ್ಪ ಮಾಡಿದ್ದರು. ಆ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಜಗನ್ನಾಥನ ದರ್ಶನ ಮಾಡಬೇಕೆಂದು. ಆದರೆ ಅದು ನನಸಾಗಿದ್ದು ಸುಮಾರು ಒಂದೂವರೆ ದಶಕದ ನಂತರ.
ತಮ್ಮ ಮನದಿಂಗಿತವನ್ನು ಗೆಳೆಯ ಸಿಂಘಿಯವರ ಮುಂದೆ ಹೇಳಿದಾಗ ಅದರ ಕಾರ್ಯಾಚರಣೆಗಿಳಿದವರು ಮಹೇಂದ್ರ ಸಿಂಘಿ ಹಾಗೂ ಅವರ ಮಿತ್ರರ ಬಳಗ. ಒಮ್ಮೆ ಭುವನೇಶ್ವರ, ಪುರಿಗೆ ತೆರಳಿ ರೈಲಿನ ಪ್ರಯಾಣದ ಟಿಕೆಟ್, ವಸತಿ, ವಿಶೇಷ ದರ್ಶನ ಊಟೋಪಚಾರ ಸಹಿತ ವಿವಿಧ ವ್ಯವಸ್ಥೆಗಳ ಅಧ್ಯಯನದ ನಂತರ ಸುಮಾರು 3 ತಿಂಗಳ ಕಾಲ ಸಿದ್ದತೆ ನಡೆಸಿದ್ದು ಇದರಲ್ಲಿ ಲಯನ್ಸ್ ಕೊಂಡಿ, ಹಿರಿಯ ಅಧಿಕಾರಿಗಳು, ಸಚಿವರು, ಸಂಸದರು ಮುಂತಾದವರ ಸ್ನೇಹ ದೊಡ್ಡ ಮಟ್ಟದಲ್ಲಿ ಸಹಕಾರಿಯಾಯಿತು. ಸಿಂಘಿಯವರ ಸೂಚನೆಯಂತೆ ಜಯಂತಿಲಾಲ ಚವ್ಹಾಣ, ಕಾಂತಿಲಾಲ ಬೊಹರಾ, ಸುಭಾಸ ಡಂಕ, ಲಯನ್ಸ್ ಪರಿವಾರದ ವೆಂಕಟೇಶ ಡೋಂಗರೆಕರ, ಆನಂದ ಭೂಮರೆಡ್ಡಿ, ಅಭಯಕುಮಾರ ಸೂಜಿ ಮುಂತಾದವವರು ಒಂದೊಂದು ಜವಾಬ್ದಾರಿ ನಿರ್ವಹಿಸುವ ಮೂಲಕ ಸುಮಾರು 56 ಗಂಟೆಗಳ ಪ್ರಯಾಣದ ಯಾತ್ರೆಗೆ ವೇದಿಕೆ ಸಿದ್ಧಗೊಂಡಿತು.
18ರಂದು ಸೂರ್ಯಾಸ್ತದ ವೇಳೆಗೆ ಭುವನೇಶ್ವರ ಹೆಸರಿಗೆ ಕಾರಣವಾಗಿರುವ ಕೇಸರಿ ರಾಜ ವಂಶಸ್ಥರಿಂದ 11ನೇ ಶತಮಾನದ ಶಿವ ಮತ್ತು ವಿಷ್ಣು ಇಬ್ಬರನ್ನೂ ಹೊಂದಿರುವ ಲಿಂಗರಾಜ ಮಂದಿರದ ದರ್ಶನ , 19ರಂದು ಪುರಿಯ ಒಡೆಯ ಶ್ರೀಕೃಷ್ಣ ಪರಮಾತ್ಮ, ಸುಭದ್ರಾ ದೇವಿ, ಬಲರಾಮ ದೇವರನ್ನು ಕಣ್ತುಂಬಿಕೊಂಡ ಕ್ಷಣಗಳು, ಅಲ್ಲದೇ ಕೊನಾರ್ಕನ ಅದ್ಬುತ ವಾಸ್ತು ಶೈಲಿಯ ಸೂರ್ಯ ದೇವಾಲಯದ ವೀಕ್ಷಣೆ ಶಾಶ್ವತವಾಗಿ ನೆನಪಿನ ಪಟದಲ್ಲಿ ಉಳಿಯುವಂತೆ ಮಾಡಿದವು.
ರೈಲು ಹಾಗೂ ಪುಣ್ಯಕ್ಷೇತ್ರಗಳ ಬಸ್ ಪ್ರವಾಸದ ವೇಳೆ ಕರೋಕೆ ಹಾಡು, ಹರಟೆ, ನಗೆ ಬುಗ್ಗೆ,ಅಂತ್ಯಾಕ್ಷರಿಗಳು, ನೃತ್ಯ ಪ್ರಯಾಣದ ಹಾದಿ ಸಾಗಿದ್ದೇ ಗೊತ್ತಾಗದಂತೆ ಮಾಡಿತು. ಹುಬ್ಬಳ್ಳಿ ರೈಲು ನಿಲ್ದಾಣದ ಶ್ರೀ ಸಿದ್ಧಾರೂಢರ ಪುತ್ಥಳಿಯಿಂದ ಆರಂಭಗೊಂಡ ಯಾತ್ರಾರ್ಥಿಗಳೆಲ್ಲರ ಜೈ ಜಗನ್ನಾಥ ಜೈಕಾರ ಮತ್ತೆ ತವರಿನಲ್ಲಿ ರೈಲು ಇಳಿದಾಗಲೇ ಮುಕ್ತಾಯಗೊಂಡಿದ್ದು. ಪಯಣದುದ್ದಕ್ಕೂ ಗದ್ಗಿಮಠರ ಗೆಳೆಯರ ಬಳಗ, ಮಕ್ಕಳಾದ ಬಸವರಾಜ, ಮಣಿಕಂಠ ಹಾಗೂ ಅವರ ಸ್ನೇಹಿತರ ತಂಡ ಊಟೋಪಚಾರ ನೀಡಿ ಆದರಿಸಿದ ಪರಿ ಮರೆಯಲಾಗದ್ದು.
‘ಮನೆತನದ ಮರ್ಯಾದೆ, ಘನತೆ ಗೌರವಗಳನು, ಅನವರತ ರಕ್ಷಿಸುವ ಹೊಣೆಹೊತ್ತು ನಡೆವ ಗುಣಪತಿಯ ಸತಿಯು ಪೂರ್ಣಜ್ಞ\\’ ಎಂಬ ಡಾ.ಮೂಜಗಂ ಅವರ ತ್ರಿಪದಿಯೊಂದೆ ಸಾಕು ಶಿವಯೋಗಿಯವರ ಯಶಸ್ಸಿನ ಹಿಂದಿನ ಶಕ್ತಿ ಗೀತಕ್ಕನ ಬಗೆಗೆ ಹೇಳಲು.
ಒಟ್ಟಿನಲ್ಲಿ ಐದು ದಿನಗಳ ಹರಕೆಯ ಯಾತ್ರೆ ಸದಾ ನೆನಪಿನಲ್ಲಿ ಹಸಿರಾಗಿ ಉಳಿಯುವಂತೆ ಮಾಡಿತು.
ಆತ್ಮೀಯ ಮಿತ್ರ ಶಿವಯೋಗಿ ಗದ್ಗಿಮಠ ತಮ್ಮ ಸಂಪಾದನೆಯ ಒಂದಷ್ಟನ್ನು ಧಾರ್ಮಿಕ ಕಾರ್ಯ, ಅನ್ನ ಸಂತರ್ಪಣೆಗಳಿಗೆ ನೀಡುತ್ತಲೇ ಬಂದಿದ್ದಾರೆ. ಈಗಾಗಲೇ ಶಿರಡಿ, ತಿರುಪತಿ, ವಾರಣಾಸಿಗೆ ಕುಟುಂಬದವರೊಂದಿಗೆ ಮಿತ್ರರನ್ನೂ, ಆತ್ಮೀಯರನ್ನೂ ಕರೆದುಕೊಂಡು ಹೋಗಿ ಬಂದಿದ್ದಾರೆ.ಈಗ 123 ಜನರನ್ನು ಪುರಿ ಜಗನ್ನಾಥನ ಸನ್ನಿಧಿಗೆ ಕರೆದೊಯ್ದು ದರ್ಶನ ಮಾಡಿಸಿದ್ದಾರೆ.ಒಮ್ಮೆ ಅವನ ಮನಸ್ಸಿನಲ್ಲಿ ದೇವತಾ ಕ್ಷೇತ್ರಕ್ಕೆ ಹೋಗಬೇಕೆಂಬುದು ಇಚ್ಛೆ ಬಂದರೆ ಅದು ಈಡೇರುವವರೆಗೆ ಬಿಡುವುದಿಲ್ಲ.
*ಮಹೇಂದ್ರ ಸಿಂಘಿ*,
ಮಾಜಿ ಚೇರಮನ್ , ಶ್ರೀಸಿದ್ಧಾರೂಢಸ್ವಾಮಿ ಟ್ರಸ್ಟ್ ಕಮೀಟಿ
ಪುರಿ ಜಗನ್ನಾಥನ ಸನ್ನಿಧಿಗೆ ಎಲ್ಲರನ್ನೂ ಕರೆದೊಯ್ದು ದರ್ಶನ ಮಾಡಿಸಬೇಕೆಂಬ ಹಲವು ವರ್ಷಗಳ ಕನಸು ನನಸಾಗಿದೆ. ಹಿರಿಯ ವೈದ್ಯರು, ಚಾರ್ಟರ್ಡ ಅಕೌಂಟೆಂಟ್, ವಕೀಲರು, ಹಿರಿಯ ಪತ್ರಕರ್ತರು, ಉದ್ಯಮಿಗಳು ನಮ್ಮ ಬಂಧು ಬಾಂಧವರು, ಗೆಳೆಯರು, ಎಲ್ಲರೂ ಸೇರಿ ಲಿಂಗರಾಜ ಮಂದಿರ, ಜಗನ್ನಾಥನ ಸನ್ನಿಧಿ, ಅಲ್ಲದೇ ಕೋನಾರ್ಕ ದೇಗುಲಗಳನ್ನು ನೋಡಿ ಬಂದಿದ್ದೇವೆ.ಈ ಎಲ್ಲ ಯಶಸ್ಸು ನನ್ನ ಸ್ನೇಹಿತರ ಬಳಗ ಮತ್ತು ಲಯನ್ಸ್ ಪರಿವಾರದವರಿಗೆ ಸಲ್ಲಬೇಕು.
*ಶಿವಯೋಗಿ ಗದ್ಗಿಮಠ,ಧಾರ್ಮಿಕ ಪ್ರವಾಸದ ಆಯೋಜಕರು