*14ನೇ ವರ್ಷದ ಕಾರ್ಯಕ್ರಮದಲ್ಲಿ 12ಸಾಧಕರಿಗೆ ’ಅವ್ವ’ ಪ್ರಶಸ್ತಿಯ ಗೌರವ*
*ಅಮ್ಮಾ ಅಮ್ಮಾ ನಿನ್ನ ಪ್ರೇಮಕೆ*,
*ಅಮ್ಮಾ ಅಮ್ಮಾ ನಿನ್ನ ತ್ಯಾಗಕೆ*,
*ಸರಿಸಾಟಿ ಯಾರೂ ಇಲ್ಲ ,ನಿನಗಿಂತ ದೇವರಿಲ್ಲ*//
ಹೌದು, ತಾಯಿಯ ಅಂತಃಕರಣ, ಪ್ರೀತಿ, ಮಮತೆ, ತ್ಯಾಗ, ಕರುಣೆಗೆ ಪರ್ಯಾಯ ಮತ್ತೊಂದಿಲ್ಲ. ಪ್ರತ್ಯಕ್ಷ ದೈವ ಸ್ವರೂಪಿ ‘ಅವ್ವ’ ಎಂದರೆ ಹುಣ್ಣಿಮೆಯ ಚಂದಿರನ ಬೆಳಕಂತೆ, ಮುಂಜಾನೆಯ ತಂಪು ನೆರಳಿನಂತೆ ಸದಾ ಪ್ರಪುಲ್ಲ. ಇಂತಹ ‘ಅವ್ವ’ ನೊಂದಿಗಿನ ಅವಿನಾಭಾವ ಸಂಬಂಧದ ಕ್ಷಣಗಳನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಸೋಲಿಲ್ಲದ ಸರದಾರ, ಉತ್ತರ ಕರ್ನಾಟಕದ ಗಟ್ಟಿ ಧ್ವನಿ,ಶಿಕ್ಷಕರ ಆಪತ್ಬಾಂಧವ, ವಿಧಾನ ಪರಿಷತ್ ಸದಸ್ಯರಾಗಿ ದಾಖಲೆ ಬರೆದಿರುವ ಪ್ರಸಕ್ತ ಸಭಾಪತಿ ಬಸವರಾಜ ಹೊರಟ್ಟಿಯವರು ತಮ್ಮ ಮಾತೋಶ್ರೀಯವರ ಪುಣ್ಯಸ್ಮರಣೆಯ ನೆಪದಲ್ಲಿ ಅವ್ವನ ನೆನಪಿನ ದಿವ್ಯ ದೀಪವನ್ನು ಬೆಳಗಿಸುವ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ನಾಳೆ ಹಮ್ಮಿಕೊಂಡಿದ್ದಾರೆ.
ಹೆತ್ತವರ ಮತ್ತು ಮಕ್ಕಳ ಬಾಂಧವ್ಯಕ್ಕೆ ಏನು ಬೆಲೆ ಎಂಬ ನೋವನ್ನು ಅರಿತ ಬಸವರಾಜ ಹೊರಟ್ಟಿಯವರು ಸಮಾಜದಲ್ಲಿ ಜಾಗೃತಿ ಮೂಡಿಸಲು ತಮ್ಮದೇ ಆದ ಅಳಿಲು ಸೇವೆಯನ್ನು ಕಳೆದ ಅನೇಕ ವರ್ಷಗಳಿಂದ ತಮ್ಮ ಅವ್ವ ಟ್ರಸ್ಟ್ ಮೂಲಕ ಮಾಡುತ್ತಲೆ ಬಂದಿದ್ದು, ಸದ್ದಿಲ್ಲದೇ ನೊಂದವರಿಗೆ ಸಂಕಷ್ಟದಲ್ಲಿದ್ದವರಿಗೆ, ಪ್ರತಿಭಾವಂತರಿಗೆ, ಸಾಧಕರಿಗೆ, ನೆರವಿನ ಹಸ್ತ ಚಾಚುತ್ತಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆತ್ತವರನ್ನು ನಿರ್ಲಕ್ಷಿಸುವ ಮನೋಭಾವ ಹೆಚ್ಚಾಗುತ್ತಿರುವುದು ವಿಷಾದದ ಸಂಗತಿ. ಇಂತಹ ಕಹಿ ಘಟನೆಗಳು ಮುಂದೆ ಸಮಾಜದಲ್ಲಿ ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ಟ್ರಸ್ಟ್ ನಾಳೆ ಬೆಳಿಗ್ಗೆ 10-30ಕ್ಕೆ ಗುಜರಾತ್ ಭವನದಲ್ಲಿ ಇಂತಹ ಭಾವನಾತ್ಮಕ ಅರ್ಥಪೂರ್ಣ ಕಾರ್ಯಕ್ರಮ ನಡೆಯಲಿದೆ.
ಅಲ್ಲದೇ ಟ್ರಸ್ಟ್ ನೀಡುವ ಪ್ರಸ್ತುತ ವರ್ಷದ ’ಅವ್ವ ಪ್ರಶಸ್ತಿ’ಗೆ ರಾಜಕಾರಣಿಯಾಗಿದ್ದರೂ ಯಾವುದೇ ಕಳಂಕ ಮೈಗಂಟಿಸಿಕೊಳ್ಳದ ಎಸ್. ಆರ್. ಪಾಟೀಲ, ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು, ನಾಡು ಕಂಡ ಖ್ಯಾತ ಸಿತಾರ್ ವಾದಕ ಛೋಟೆ ರಹಮತ್ಖಾನ್, ವಿಕಲ ಚೇತನರ ಸೇವೆಯಲ್ಲಿ ಸಾರ್ಥಕತೆ ಕಂಡಿರುವ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ಮಹಾವೀರ ಲಿಂಬ್ ಸೆಂಟರ್ ಸಂಸ್ಥಾಪಕ, ಅಪರೂಪದ ಸಮಾಜ ಸೇವಕ ಮಹೇಂದ್ರ ಸಿಂಘಿ, ಸಾಹಿತಿ ಡಾ. ಸಂಗಮನಾಥ ಲೋಕಾಪುರ, ಭವಿಷ್ಯದ ಭರವಸೆಯ ಗಾಯಕಿ ರೇಖಾ ಹೆಗಡೆ, ಯಕ್ಷಗಾನದ ಭಾಗವತರಾಗಿ ತಮ್ಮ ಸ್ವರ ಮಾಧುರ್ಯದಿಂದಲೇ ಖ್ಯಾತರಾಗಿ ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾದ ಕೇಶವ ಹೆಗಡೆ ಕೊಳಗಿ, ಬಸವ ತತ್ವ ಪ್ರಚಾರಕ ಎಸ್. ಮಹದೇವಯ್ಯ, ಸಮಾಜ ಸೇವಕಿ ರಾಜೇಶ್ವರಿ ಪಾಟೀಲ, ಜಾನಪದ ಕಲಾವಿದ ಬಸವರಾಜ ಶಿಗ್ಗಾಂವಿ, ಸ್ಕೇಟಿಂಗ್ ಕ್ರೀಡಾಪಟು ತ್ರಿಶಾ ಜಡಲಾ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸಿದ ಬಾಗಲಕೋಟೆಯ ಅಂಕಿತಾ ಕೊಣ್ಣೂರ ಸಹಿತ 12 ಸಾಧಕರಿಗೆ ಸ್ಮರಣಿಕೆ ಜೊತೆಗೆ 25 ಸಾವಿರ ನಗದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಚಿತ್ತರಗಿಯ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಪನ್ಯಾಸಕಿ ಅಕ್ಷಯಾ ಗೋಖಲೆ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೊರಟ್ಟಿ ತಮ್ಮ ಟ್ರಸ್ಟ್ನ ಆಶಯ ಹಾಗೂ ವಿವರ ವಿವರಿಸಿದರು.
’ಪತ್ರಿಕೆಯ ವರದಿ, ಮಾಹಿತಿ ಹಾಗೂ ಸಮಾಜದಲ್ಲಿ ಅತ್ಯುತ್ತಮ ಸೇವೆ ಮಾಡಿದವರನ್ನು ಗುರುತಿಸಿ ಟ್ರಸ್ಟ್ ಪ್ರತ್ಯೇಕ ಸಮಿತಿ ರಚಿಸಿ ಆ ಮೂಲಕ ಸಾಧಕರನ್ನು ಆಯ್ಕೆ ಮಾಡುತ್ತಿದ್ದು ಇದುವರೆಗೆ 68 ಮಂದಿಗೆ ’ಅವ್ವ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ’ ಕಳೆದ 14 ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತದೆ ಎಂದು ಕಾರ್ಯದರ್ಶಿ ಶಶಿ ಸಾಲಿ ಹೇಳುತ್ತಾರೆ.
ಈಗಾಗಲೇ ಅವಳಿನಗರದ ತುಂಬ ಅವ್ವನ ಅರ್ಥಪೂರ್ಣ ಕಾರ್ಯಕ್ರಮದ ಸ್ವಾಗತ ಪೋಸ್ಟರ್ಗಳು ಎಲ್ಲೆಡೆ ಕಂಡು ಬರುತ್ತಿದೆ.