*ಶೀಲಾ ಕಾಟ್ಕರ್, ವಂಟಮೂರಿ, ಜ್ಯೋತಿ ಪಾಟೀಲ್, ಚಳಗೇರಿ ರೇಸ್ನಲ್ಲಿ/ ಪ್ರಥಮ ಪ್ರಜೆ ಕೈ ತಪ್ಪಿದ ಕ್ಷೇತ್ರಕ್ಕೆ ಉಪಮೇಯರ್ ಸ್ಥಾನ*
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಉಪಮೇಯರ್ ಚುನಾವಣೆ ಮುಹೂರ್ತಕ್ಕೆ ದಿನಗಣನೆ ಆರಂಭವಾಗಿದ್ದು
ಬಹುಮತ ಹೊಂದಿರುವ ಕಮಲ ಪಾಳೆಯದಲ್ಲಿ ಈ ಬಾರಿ ಯಾರಿಗೆ ಪಟ್ಟ ಎಂಬುದು ತೀವ್ರ ಕುತೂಹಲ ಕೆರಳಿಸಿದ್ದು ಎರಡೂ ಸ್ಥಾನಗಳಿಗೂ ತೀವ್ರ ಪೈಪೋಟಿ ನಿಶ್ಚಿತವಾಗಿದೆ .
ಮಹಾನಗರ ಪಾಲಿಕೆಯಿಂದ ಚುನಾವಣೆ ದಿನಾಂಕ ನಿಗದಿ ಮಾಡುವಂತೆ ಪತ್ರ ರವಾನೆಯಾಗಿದ್ದು ಬೆಳಗಾವಿಯ ಪ್ರಾದೇಶಿಕ ಆಯುಕ್ತರು 21 ದಿನಗಳ ಕಾಲಾವಕಾಶ ನೀಡಿ ದಿನಾಂಕ ನಿರ್ಧರಿಸಲಿದ್ದಾರೆ.ಹಾಗಾಗಿ ಜೂನ್ ಕೊನೆಯ ವಾರದಲ್ಲಿ ಚುನಾವಣೆ ನಡೆಯುವುದು ನಿಶ್ಚಿತ.
ನಿಗದಿಯಾದ ಮೀಸಲಾತಿ ಅನ್ವಯ ಮುಂದಿನ ಅವಧಿಗೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಉಪಮೇಯರ್ ಸಾಮಾನ್ಯರಿಗೆ ನಿಗದಿಯಾಗಿದೆ.
ಪ್ರಸ್ತುತ ಬಿಜೆಪಿ ಆಡಳಿತ ಅವಧಿಯಲ್ಲಿ ಧಾರವಾಡದ ಈರೇಶ ಅಂಚಟಗೇರಿ, ಸೆಂಟ್ರಲ್ ವ್ಯಾಪ್ತಿಯ ವೀಣಾ ಬರದ್ವಾಡ ಹಾಗೂ ಪ್ರಸಕ್ತ ಪಶ್ಚಿಮ ಕ್ಷೇತ್ರದ ರಾಮಣ್ಣ ಬಡಿಗೇರ ಅವರುಗಳಿಗ ‘ಗೌನ್ ಭಾಗ್ಯ’ ದೊರೆತಿದ್ದು ಈ ಹಿನ್ನೆಲೆಯಲ್ಲಿ ಇಪ್ಪತ್ನಾಲ್ಕನೇ ಮೇಯರ್ ಪಟ್ಟ ಪೂರ್ವ ಕ್ಷೇತ್ರದ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.
ಪೂರ್ವ ಕ್ಷೇತ್ರದ ವ್ಯಾಪ್ತಿಗೆ ಬರುವ 73ನೇ ವಾರ್ಡಿನ ಸದಸ್ಯೆ ಹಾಲಿ ಪೂರ್ವ ಅಧ್ಯಕ್ಷ ಮಂಜುನಾಥ ಕಾಟ್ಕರ್ ಪತ್ನಿ ಶೀಲಾ ಕಾಟ್ಕರ್, ಬರದ್ವಾಡ ಮೇಯರ್ ಆಗುವ ವೇಳೆ ಕೂಡ ರೇಸ್ ನಲ್ಲಿ ಇದ್ದ
ಮೀನಾಕ್ಷಿ ವಂಟಮೂರಿ (ವಾರ್ಡ್57), ಜ್ಯೋತಿ ಪಾಟೀಲ್(19ನೇ ವಾರ್ಡ್ ) ಹಾಗೂ ಅನಿತಾ ಚಳಗೇರಿ (ವಾರ್ಡ್ 1) ಹೆಸರುಗಳೂ ಮುಂಚೂಣಿಗೆ ಬರುವ ಸಾಧ್ಯತೆಯಿದೆ. ಈಗಾಗಲೇ ಮೇಯರ್ ಪಟ್ಟ ಅಲಂಕರಿಸಿರುವ ಅರವತ್ತನೇ ವಾರ್ಡ್ ನ ಹಿರಿಯ ಸದಸ್ಯೆ ರಾಧಾಬಾಯಿ ಸಫಾರೆ ಇದ್ದರೂ ಅವರಿಗೆ ಮತ್ತೊಮ್ಮೆ ಪಟ್ಟ ಕಟ್ಟುವರೇ ಎಂಬುದನ್ನು ಕಾದುನೋಡಬೇಕು.
ಪೂರ್ವ ಕ್ಷೇತ್ರಕ್ಕೆ ಒತ್ತು ನೀಡುವ ದೃಷ್ಟಿಯಿಂದ ಆ ಕ್ಷೇತ್ರಕ್ಕೆ ಈ ಬಾರಿ ನಿಕ್ಕಿ ಎನ್ನಲಾಗುತ್ತಿದೆಯಾದರೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಅವರುಗಳ ಗ್ರೀನ್ ಸಿಗ್ನಲ್ ಅಂತಿಮ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಹಾಗಾಗಿ ಅಂತಿಮ ಹಂತದಲ್ಲಿ ಏರುಪೇರಾದರೂ ಅಚ್ಚರಿಯಿಲ್ಲ. ಈಗಾಗಲೇ ಆಕಾಂಕ್ಷಿ ಕಾರ್ಪೋರೇಟರ್ಗಳು ತಮ್ಮ ನಾಯಕರ ಮೂಲಕ ಒತ್ತಡ ಆರಂಭಿಸಿದ್ದಾರೆ .
ಸಾಮಾನ್ಯರಿಗೆ ಉಪಮೇಯರ್ ಸ್ಥಾನ ಮೀಸಲಿದ್ದು ಮೇಯರ್ ಪಟ್ಟ ಯಾವ ಕ್ಷೇತ್ರದ ಪಾಲಾಗುವದೆಂಬುದನ್ನು ಅವಲಂಬಿಸಿ ಮುಂದಿನ ನಿರ್ಧಾರ ಪ್ರಕಟಗೊಳ್ಳಲಿದೆ .ಮೇಲ್ನೋಟಕ್ಕೆ ಸದಸ್ಯರಾದ ಸಂತೋಷ ಚವ್ಹಾಣ, ಸುರೇಶ್ ಬೇದರೆ, ನಿತಿನ್ ಇಂಡಿ ಮತ್ತಿತರ ಹೆಸರುಗಳು ಪ್ರಸ್ತಾಪಕ್ಕೆ ಬರಬಹುದಾಗಿದೆ.
82 ಸದಸ್ಯ ಬಲ ಹೊಂದಿರುವ ಪಾಲಿಕೆಯಲ್ಲಿ ಬಿಜೆಪಿ 39 ಸದಸ್ಯ ಬಲ ಹೊಂದಿದ್ದು ಮೂರು ಪಕ್ಷೇತರ, ಓರ್ವ ಜೆಡಿಎಸ್ ಬೆಂಬಲದೊಂದಿಗೆ 43 ಸದಸ್ಯರ ಸಂಖ್ಯೆಯಾಗಲಿದೆ.ಅಲ್ಲದೇ ಐವರು ಜನ ಪ್ರತಿನಿಧಿಗಳ ಮತಾಧಿಕಾರವೂ ಇದೆ. ಇಬ್ಬರು ಪಕ್ಷೇತರರು ಸೇರಿದಂತೆ ಕಾಂಗ್ರೆಸ್ 35, ಎಐಎಂಐಎಂನ ಮೂರು ಸದಸ್ಯರಿದ್ದಾರೆ.
ಜೂನ್ 28ರವರೆಗೆ ಪ್ರಸಕ್ತ ಮೇಯರ್ ಅಧಿಕಾರವಿದೆ. ಅಷ್ಟರೊಳಗೆ ಪ್ರಾದೇಶಿಕ ಆಯುಕ್ತರು ಚುನಾವಣೆ ದಿನಾಂಕ ನಿಗದಿ ಮಾಡಲಿದ್ದಾರೆ. ಚುನಾವಣೆಗೆ ಒಂದೆರಡು ದಿನ ಮೊದಲು
ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು, ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಶಾಸಕರೆಲ್ಲರ ಸಮಕ್ಷಮ ಬಿಜೆಪಿ ಪಾಲಿಕೆ ಸದಸ್ಯರ ಸಭೆ ಕರೆದು ಚರ್ಚಿಸಿ ಎರಡೂ ಸ್ಥಾನಗಳಿಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
*ವೀರಣ್ಣ ಸವಡಿ*
ಮಾಜಿ ಮೇಯರ್ ಹಾಗೂ ಸಭಾನಾಯಕ