ವಿಶ್ವದ ಪ್ರಮುಖ ಪ್ರಭಾವಿ ನಾಯಕರಲ್ಲೊಬ್ಬರಾಗಿ ಹೊರಹೊಮ್ಮಿದ ಹುಬ್ಬಳ್ಳಿ ಮೂಲದ ಕೇಂದ್ರ ಸಚಿವ
TIME 100 ಹವಾಮಾನ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯರೆಂಬ ಹೆಗ್ಗಳಿಕೆ
ಹೊಸದಿಲ್ಲಿ : ಆರ್ಥಿಕತೆ-ಅಭಿವೃದ್ಧಿ, ಪರಂಪರೆ ಮತ್ತು ದೂರದೃಷ್ಟಿ ನಾಯಕತ್ವದಲ್ಲಿ ಭಾರತ ವಿಶ್ವಪ್ರಸಿದ್ಧಿ ಪಡೆದಿದೆ. ಅದರಂತೆ ಇದೀಗ ಈ ಪ್ರಗತಿಶೀಲ ರಾಷ್ಟ್ರದ ಸಚಿವರೂ ಪ್ರಭಾವಿ ನಾಯಕರಾಗಿ ಜಗತ್ಪ್ರಸಿದ್ಧರಾಗುತ್ತಿದ್ದಾರೆ.

ಹೌದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅವರ ಸಚಿವ ಸಂಪುಟದ ಸದಸ್ಯರೂ ವಿಶ್ವಪ್ರಸಿದ್ಧರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರೀಗ ವಿಶ್ವದ ಪ್ರಮುಖ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಜಗತ್ತಿನಲ್ಲಿ ಹವಾಮಾನ ಬದಲಾವಣೆ ತಡೆದು ಸುಸ್ಥಿರತೆ ಕಾಪಾಡುತ್ತಿರುವವರ ಕುರಿತು ಸಿದ್ಧಪಡಿಸಿದ “TIME 100 climate most powerfull leader” ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ ಪ್ರಧಾನಿ ಮೋದಿ ಸಂಪುಟದ ಪ್ರಭಾವಿ ಸಚಿವರಾಗಿರುವ ಪ್ರಲ್ಹಾದ ಜೋಶಿ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ 5ನೇ ಬಾರಿ ಸಂಸದರಾಗಿ ದಾಖಲೆ ನಿರ್ಮಿಸಿದ ಪ್ರಲ್ಹಾದ ಜೋಶಿ ಇದೀಗ ಈ ವರ್ಷದ “TIME 100 CLIMATE” ಪಟ್ಟಿಯಲ್ಲಿ ಪ್ರಭಾವಿ ನಾಯಕನ ಸ್ಥಾನ ಪಡೆದ “ಮೊದಲ ಭಾರತೀಯ ರಾಜಕಾರಣಿ” ಎಂಬ ಹೊಸ ದಾಖಲೆ ಸಹ ಬರೆದು ವಿಶ್ವದಾದ್ಯಂತ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತದ ಕೋಟ್ಯಂತರ ಮನೆಗಳಲ್ಲಿ ಸೌರ ಬೆಳಕು ಚೆಲ್ಲಿದ ʼಸೂರ್ಯಘರ್ʼ ಮತ್ತು ರೈತ ಸಮುದಾಯವನ್ನು ಸಬಲೀಕರಣಗೊಳಿಸುತ್ತಿರುವ ʼಪಿಎಂ ಕುಸುಮ್ʼ ಯೋಜನೆ ಯಶಸ್ಸು ಕಂಡು ಜಗತ್ತಿನ 50ಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮಲ್ಲೂ ಈ ಯೋಜನೆಗಳ ಅನುಷ್ಠಾನಕ್ಕೆ ಸಾಥ್ ನೀಡುವಂತೆ ಬೇಡಿಕೆ ಮುಂದಿಡುವಷ್ಟರ ಮಟ್ಟಿಗೆ ಕಾರ್ಯ ಸಾಧನೆ ತೋರಿದ್ದಾರೆ ಸಚಿವ ಜೋಶಿ.
2024ರಲ್ಲಿ ಈ ಸಚಿವಾಲಯದ ಹೊಣೆ ಹೊತ್ತ ಜೋಶಿ ಅವರು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ಪಿಎಂ ಕುಸುಮ್, ಸೂರ್ಯಘರ್ ಸೇರಿದಂತೆ ಭಾರತದ ಹಸಿರು ಇಂಧನ ಪರಿವರ್ತನೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದಾರೆ.




