*ಸಿದ್ಧವೀರ ಸತ್ಸಂಗದ ಮೂಲಕ ಬಾಪೂಜಿ ಚಿಂತನೆ ಪಸರಿಸುತ್ತಿರುವ ಡಾ.ಹತ್ತಿಕಾಳಗೆ ‘ಬಸವ ಭೂಷಣ’ ಗರಿ
ಹುಬ್ಬಳ್ಳಿ : ಮಹಾತ್ಮಾ ಗಾಂಧೀಜಿಯವರ ತತ್ವಗಳನ್ನು ಭಾಷಣದಲ್ಲಿ ಹೇಳುವ ವ್ಯಕ್ತಿಗಳು ಹಲವರು ಸಿಗುತ್ತಾರೆ. ಆದರೆ ಅವರ ಚಿಂತನೆಗಳನ್ನು ,ಆದರ್ಶಗಳನ್ನು ಅಕ್ಷರಶಃ ಅಳವಡಿಸಿಕೊಂಡವರು ವಿರಳ. ಅಂತವರ ಸಾಲಿನಲ್ಲಿ ಧಾರವಾಡದ ವೈದ್ಯರೊಬ್ಬರು ನಿಲ್ಲುತ್ತಾರೆ. ಅವರೇ ಸ್ವಚ್ಚ ಬದುಕಿನ ಚಿಂತನ ಶೀಲ ವೈದ್ಯ ಡಾ.ನಿತಿನಚಂದ್ರ ಹತ್ತಿಕಾಳ.
ಉತ್ತರ ಕರ್ನಾಟಕದಲ್ಲೇ ಮನೆ ಮಾತಾಗಿರುವ ಕಾಮಣಿ ತಜ್ಞ ಡಾ.ನಿತಿನಚಂದ್ರ ಹತ್ತಿಕಾಳ ವೈದ್ಯಕೀಯ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇವರದು ವೈದ್ಯಕೀಯ ವೃತ್ತಿಯಾದರೂ, ಆಧ್ಯಾತ್ಮಿಕ ಪ್ರವೃತ್ತಿ. ಬಾಲ್ಯದಿಂದಲೂ ಶರಣ ಸಂಸ್ಕೃತಿ,ಗಾಂಧಿ ತತ್ವಗಳನ್ನು ಮೈಗೂಡಿಸಿಕೊಂಡು ಬೆಳೆದ ಇವರು,ಜಾತಿ, ಮತ, ಪಂಥ ಯಾವುದೇ ಭೇದವಿಲ್ಲದೇ ಸಿದ್ದವೀರ ಸತ್ಸಂಗ ಕಟ್ಟಿಕೊಂಡು ಗಾಂಧಿ ತತ್ವಗಳನ್ನು ಪಸರಿಸುತ್ತಿರುವ ಇವರು ತಾವೇ ಬರೆದ ಗಾಂಧಿ ಸ್ಮೃತಿ,ಬಾಪೂಜಿ ಎಂಬ ಹತ್ತಾರು ಸಾವಿರ ಪುಸ್ತಕಗಳನ್ನು ಕಳೆದ ಮೂರು ದಶಕಗಳಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿದ್ದಾರೆ.
ಡಾ.ಪಾಟೀಲ ಪುಟ್ಟಪ್ಪ ಅವರ ನೇತೃತ್ವದಲ್ಲಿ ಪ್ರತಿಷ್ಠಿತ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಹತ್ತಿಕಾಳರಿಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ತಪೋವನದ ಕುಮಾರಸ್ವಾಮಿಗಳು, ಹೂಲಿ ಮಠದ ಸಂಗಮೇಶ್ವರ ಸ್ವಾಮೀಜಿ, ಚಿತ್ರನಟ ಸುಧೀರ ಸೇರಿದಂತೆ ನಾಡಿನ ಅನೇಕ ಗಣ್ಯರಿಗೆ ವಿವಿಧ ಚಿಕಿತ್ಸೆಗಳನ್ನು ನೀಡಿದ ಖ್ಯಾತಿಯೂ ಇದೆ.
1991ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿದ್ದು ಇತ್ತೀಚೆಗೆ ಕೊಪ್ಪಳದ ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆಯು ಅವರಿಗೆ ಪ್ರತಿಷ್ಠಿತ ಬಸವ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಗಾಂಧಿ ತತ್ವಗಳು ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ’ ನಿನ್ನೆಯದು ಹಳೆಯದು, ನಾಳೆಯದು ಸಂಬಂಧವಿಲ್ಲ, ಇಂದು ಬದುಕಬೇಕಷ್ಟೆ, ಎಂಬ ಮಾತಿಗೆ ಅಪವಾದವಾಗಿ ಡಾ.ಹತ್ತಿಕಾಳ ತಮ್ಮ ಬಾಪೂಜಿ ಆರಾಧನೆ ಮತ್ತು ಅವರ ತತ್ವ ಪ್ರಚಾರ ಸದ್ದಿಲ್ಲದೇ ಮುಂದುವರಿಸಿದ್ದಾರೆ. ಅವರಿಗೆ ಇನ್ನಷ್ಟು ಪ್ರಶಸ್ತಿ, ಗೌರವಗಳು ಅರಸಿ ಬರಲಿ ಎಂಬುದು ’ಕನ್ನಡ ಧ್ವನಿ’ಯ ಹಾರೈಕೆಯಾಗಿದೆ.