*ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿಗೆ ಉಭಯ ಜಿಲ್ಲೆಗಳ ಸಾರಥ್ಯ*
ಹುಬ್ಬಳ್ಳಿ : ಬಿಜೆಪಿಯ ನೂತನ ಸಾರಥಿ ಬಿ.ವೈ . ವಿಜಯೇಂದ್ರ 39ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿದ್ದು ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಸಂಘಟನಾ ಚತುರ ತಿಪ್ಪಣ್ಣ ಮಜ್ಜಗಿ ಹಾಗೂ ಧಾರವಾಡ ಗ್ರಾಮೀಣಕ್ಕೆ ಹಳೆಯ ಕಾರ್ಯಕರ್ತ ನಿಂಗಪ್ಪ ಸುತಗಟ್ಟಿ ನೇಮಕಗೊಂಡಿದ್ದು ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ’ಪ್ರಬಲ ಲಿಂಗಾಯತ ಅಸ್ತ್ರ’ ಪ್ರಯೋಗವಾಗಿದೆ.
ಎರಡೂ ಜಿಲ್ಲಾ ಘಟಕಗಳಿಗೂ ಬಹುಸಂಖ್ಯಾತರನ್ನೇ ನೇಮಕ ಮಾಡಲಾಗಿದ್ದು ಒಂದು ಅಧ್ಯಕ್ಷ ಸ್ಥಾನ ಇತರೇ ಹಿಂದುಳಿದವರಿಗೆ ಧಕ್ಕಬಹುದೆಂಬ ಲೆಕ್ಕಾಚಾರ ಹುಸಿಯಾಗಿದೆ. ಈ ಬಾರಿ ಕಾಂಗ್ರೆಸ್ ಕೂಡ ಧಾರವಾಡ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿ ’ಟಫ್ ಫೈಟ್’ ಮುಂದಾಗಿರುವ ಹಿನ್ನೆಲೆಯಲ್ಲಿ ಎರಡೂ ಸ್ಥಾನಗಳನ್ನು ಲಿಂಗಾಯತರಿಗೆ ನೀಡುವ ಮೂಲಕ ’ಸೇಫ್ ಗೇಮ ಪ್ಲಾನ್’ ಮುನ್ನೆಲೆಗೆ ತಂದಿದ್ದಾರೆ.
ಮಹಾನಗರ ಅಧ್ಯಕ್ಷರಾಗಿ ಕೇವಲ 17ತಿಂಗಳ ಅಧಿಕಾರ ನಿರ್ವಹಿಸಿರುವ ಸಂಜಯ ಕಪಟಕರ ಮುಂದುವರಿಯಲು ಸಾಕಷ್ಟು ಕಸರತ್ತು ನಡೆಸಿದರೂ ಪ್ರಯೋಜನವಾಗಲಿಲ್ಲ. ನಿರೀಕ್ಷೆಯಂತೆಯೇ ಎರಡನೇ ಪಾಲಿಕೆ ಸದಸ್ಯರಾಗಿರುವ ಮಜ್ಜಗಿ ಮಹಾನಗರ ಕಮಲಪಡೆ ಗದ್ದುಗೆ ಏರಿದ್ದಾರೆ. ಪ್ರಸಕ್ತ ಮಹಾನಗರ ಪ್ರಧಾನ ಕಾರ್ಯದರ್ಶಿಯಾಗಿರುವ ಇವರು ಪಾಲಿಕೆ ಸಭಾನಾಯಕರಾಗಿ ಅಲ್ಲದೇ ಸಂಘಟನೆಯ ಆಳ ಅಗಲ ಬಲ್ಲವರಾಗಿದ್ದಾರೆ. ಈ ಬಾರಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಇಲ್ಲದೇ ಮೊದಲ ಲೋಕ ಸಮರ ಎದುರಿಸುತ್ತಿರುವ ಜೋಶಿ ಸಹಿತ ಎಲ್ಲರೂ ಇವರ ಬಗ್ಗೆ ಒಲವು ಹೊಂದಿದ್ದರು. ಅಲ್ಲದೇ ಶಾಸಕ ಮಹೇಶ ಟೆಂಗಿನಕಾಯಿ ಸಹ ಮಜ್ಜಗಿ ಪರವೇ ಬ್ಯಾಟಿಂಗ್ ಮಾಡಿದ್ದರು.
ಗ್ರಾಮೀಣದಲ್ಲಿ ಈ ಹಿಂದೆ ಕಲಘಟಗಿ ತಾಲೂಕು ಬಿಜೆಪಿ ಮತ್ತು ಕೆಜೆಪಿ ಎರಡರ ಅಧ್ಯಕ್ಷರೂ ಆಗಿದ್ದ ನಿಂಗಪ್ಪ ಸುತಗಟ್ಟಿ ಮತ್ತು ಹಾಲಿ ಪ್ರಧಾನ ಕಾರ್ಯದರ್ಶಿ ಕುಂದಗೋಳದ ಮಾಲತೇಶ ಶ್ಯಾಗೋಟಿ ಮಧ್ಯೆ ಪೈಪೋಟಿ ಇತ್ತಾದರೂ ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಮಣೆ ಹಾಕಿದೆ. ಜೋಶಿಯವರ ಚುನಾವಣೆ ಕಾರಣ ಕುಂದಗೋಳ ಶಾಸಕ ಎಂ.ಆರ್.ಪಾಟೀಲ, ಮಾಜಿ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಸಹಿತ ಎಲ್ಲರೂ ನಿಂಗಪ್ಪ ಅವರ ಹೆಸರನ್ನೇ ಸೂಚಿಸಿದ್ದರೆನ್ನಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಮಲದ ಶಾಲು ಹೊದ್ದ ನಾಗರಾಜ ಛಬ್ಬಿ ತಮ್ಮ ಬೆಂಬಲಿಗರಿಗಾಗಿ ಪಟ್ಟು ಹಿಡಿಯದೇ ಜಾಣ್ಮೆ ಮೆರೆದು ತಮ್ಮ ಬುಡ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ.
ಆಲದಕಟ್ಟಿ ಮೂಲದ ನಿಂಗಪ್ಪ ಈ ಹಿಂದೆ ತಾವರಗೇರಿ ಗ್ರಾ.ಪಂ.ಅಧ್ಯಕ್ಷರೂ ಆದವರಾಗಿದ್ದಾರೆ. ದಿ.ಸಿ.ಎಂ.ನಿಂಬಣ್ಣವರ ನಂತರ ಅಧ್ಯಕ್ಷ ಪಟ್ಟ ಸುತಗಟ್ಟಿಯವರಿಗೆ ಬಂದಿದೆ. ಧಾರವಾಡ ಗ್ರಾಮೀಣಕ್ಕೆ ಅಧ್ಯಕ್ಷ ಪಟ್ಟ ಧಕ್ಕಬೇಕೆಂಬ ಕೂಗಿಗೆ ಮಹೂರ್ತ ಕೂಡಿ ಬರಲಿಲ್ಲ.
*ಮತ್ತಷ್ಟು ಸಂಘಟನೆಗೆ ಆದ್ಯತೆ*
ಸುಮಾರು ಎರಡು ದಶಕಗಳ ಕಾಲ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ.ಪಕ್ಷ ನೀಡಿದ ಎಲ್ಲ ಜವಾಬ್ದಾರಿಯನ್ನೂ ಸಮರ್ಪಕವಾಗಿ ನಿಭಾಯಿಸಿದ್ದು, ಈಗ ಮಹಾನಗರ ಅಧ್ಯಕ್ಷಗಿರಿಯಂತಹ ದೊದ್ದ ಜವಾಬ್ದಾರಿ ನೀಡಿದ್ದು ಅದನ್ನು ಪ್ರಾಮಾಣಿಕವಾಗಿ ಕಾರ್ಯಕರ್ತರ ಧ್ವನಿಯಾಗಿ ಕಾರ್ಯ ನಿರ್ವಹಿಸುವೆ. ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಮತ್ತಷ್ಟು ತಳಮಟ್ಟಕ್ಕೆ ಒಯ್ಯಲು ಪ್ರಯತ್ನಿಸಲಾಗುವುದುಮತ್ತು ಎಲ್ಲರ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುವೆ.ತಮ್ಮ ಆಯ್ಕೆಗೆ ಕಾರಣರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಟೆಂಗಿನಕಾಯಿ, ಬೆಲ್ಲದ, ಪ್ರದೀಪ ಶೆಟ್ಟರ್, ಸಂಕನೂರ ಎಲ್ಲರಿಗೂ ಧನ್ಯವಾದ ಅರ್ಪಿಸುವೆ.
*ತಿಪ್ಪಣ್ಣ ಮಜ್ಜಗಿ*, ನೂತನ ಮಹಾನಗರ ಅಧ್ಯಕ್ಷರು,
*ನಿರೀಕ್ಷೆ ಹುಸಿಯಾಗದಂತೆ ಕಾರ್ಯ*
ಪಕ್ಷದ ಎಲ್ಲ ನಾಯಕರು ಈ ಬಾರಿ ವಿಶ್ವಾಸವಿಟ್ಟು ಕಲಘಟಗಿ ತಾಲೂಕಿಗೆ ಗ್ರಾಮೀಣ ಅಧ್ಯಕ್ಷ ಪಟ್ಟ ನೀಡಿದ್ದು ಅವರೆಲ್ಲರ ನಿರೀಕ್ಷೆ ಹುಸಿಯಾಗದಂತೆ ಎಲ್ಲ ತಾಲೂಕುಗಳಲ್ಲೂ ಪಕ್ಷ ಸಂಘಟನೆ ಮಾಡಿ ತೋರಿಸುವೆ.
*ನಿಂಗಪ್ಪ ಸುತಗಟ್ಟಿ*, ನೂತನ ಗ್ರಾಮೀಣ ಅಧ್ಯಕ್ಷರು.