ಹುಬ್ಬಳ್ಳಿ: ಕೊಲ್ಕತ್ತಾದಲ್ಲಿ ಆರ್ ಸಿ ಬಿ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ 2025ರ ಐಪಿಎಲ್ ಉದ್ಘಾಟನಾ ಪಂದ್ಯ, ಸಿಎಸ್ಕೆ ಹಾಗೂ ದಿಲ್ಲಿ ಕ್ಯಾಪಿಟಲ್ ನಡುವಣ ಹೈವೋಲ್ಟೇಜ್ ಹಣಾಹಣಿ ಸೇರಿದಂತೆ ಇದುವರೆಗೆ ಈ ಸಲ ಐದು ಬಾರಿ ಫೀಲ್ಡ್ ಅಂಪಾಯರ್ ಆಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದವರು ಹುಬ್ಬಳ್ಳಿಯ ಮೂಲದವರು ಎಂಬುದು ವಾಣಿಜ್ಯ ರಾಜಧಾನಿ ಅಷ್ಟೇ ಅಲ್ಲದೆ ಸಮಸ್ತ ಕನ್ನಡಿಗರೂ ಹೆಮ್ಮೆ ಪಡುವ ಸಂಗತಿ.
ಹುಬ್ಬಳ್ಳಿಯ ಮೈದಾನಗಳಲ್ಲೇ ಬಿದ್ದೆದ್ದು ಆಟವಾಡಿದ
ಭಾರತೀಯ ಸ್ಟೇಟ್ ಬ್ಯಾಂಕ್ ಉದ್ಯೋಗಿ ಉದಯ ಬೆಂಗೇರಿ ಅವರ ಪುತ್ರ ಅಭಿಜಿತ್ ಬೆಂಗೇರಿ ಅವರೇ ಬಿಸಿಸಿಐ ಅಧಿಕೃತ ಅಂಪಾಯರ್ ಆಗಿ 2011ರಲ್ಲಿ ಬಲಗಾಲಿಟ್ಟು ರಣಜಿ ಟ್ರೋಫಿ ಸಹಿತ ಎಲ್ಲ ಪಂದ್ಯಗಳಲ್ಲಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿ 2023ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಅಂಪಾಯರ್ ಆಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಪ್ರಸಕ್ತ ಪಂದ್ಯಾವಳಿಯಲ್ಲಿ ಇನ್ನೂ ಐದು ಪಂದ್ಯಗಳಲ್ಲಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಫೀಲ್ಡ್ ಅಂಪೈರ್ ಆಗಿ ರಾಜ್ಯ ಕಾರ್ಯನಿರ್ವಹಿಸಿದವರಲ್ಲಿ
ಎ.ವಿ ಜಯಪ್ರಕಾಶ್, ಶವೀರ್ ತಾರಪೂರ್, ಸಿ ಕೆ ನಂದನ್, ನಾಗೇಂದ್ರ ಮೊದಲಾದವರು ಇದ್ದಾರೆ . ಆ ಪರಂಪರೆಯಲ್ಲಿ ಅಭಿಜಿತ್ ಪಯಣ ಮುಂದುವರಿಸಿದ್ದಾರೆ.
ಜೂನಿಯರ್ ಹಂತದಲ್ಲಿ ಲೆಫ್ಟ್ ಆರ್ಮ್ ಸ್ಪಿನ್ ಬೌಲರ್ ಆಗಿ ರಾಜ್ಯ ಮಟ್ಟದಲ್ಲಿ ಮಿಂಚಿರುವ ಅಭಿಜಿತ್
14 ವರ್ಷದೊಳಗಿನ ಹಾಗೂ 16 ವರ್ಷದೊಳಗಿನ ಪಂದ್ಯಗಳಲ್ಲಿ ರಾಜ್ಯ ಪ್ರತಿನಿಧಿಸಿದ್ದು ಧಾರವಾಡ ವಲಯದ ಎಲ್ಲ ವಯೋಮಿತಿಯ ಪಂದ್ಯಗಳನ್ನೂ ಆಡಿರುತ್ತಾರೆ.ಆದರೆ
ಕ್ರಿಕೆಟ್ನಲ್ಲಿ ಮುಂದುವರಿಯಲು ಅಸಾಧ್ಯವಾದರೂ ಅಂಪೈರಿಂಗ್ ವೃತ್ತಿ ಅಪ್ಪಿಕೊಂಡು ಅದರಲ್ಲೇ ಸಂತಸ ಹಾಗೂ ಬದುಕು ಕಟ್ಟಿಕೊಂಡ ಅಪರೂಪದ ಸಾಧಕ.
ತಮಗೆ ಅಂಪಾಯರ್ ಕೆಲಸ ನಿರ್ವಹಿಸುವದು ಅತ್ಯಂತ ಖುಷಿ ಕೊಟ್ಟಿದೆ. ರಣಜಿ ಇರಲಿ, ಐಪಿಎಲ್ ಇರಲಿ ತೀರ್ಪುಗಳನ್ನು ನೀಡುವಾಗ ಸ್ಪಷ್ಟತೆಯೆ ಮಾನದಂಡ . ಬೌಲರ್ ಹಾಗೂ ಬ್ಯಾಟ್ಸ್ ಮನ್ ಇಬ್ಬರಿಗೂ ನ್ಯಾಯ ಒದಗಿಸಬೇಕು . ನಮಗೆ ಯಾವುದೇ ಒತ್ತಡ ಇರುವುದಿಲ್ಲ. ಐಪಿಎಲ್ ಪಂದ್ಯಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿರುತ್ತದೆ ಅಷ್ಟೇ ಎಂದು ‘ಕನ್ನಡ ಧ್ವನಿ’ ಜೊತೆ ಮಾತನಾಡುತ್ತಾ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಡಿ ಆರ್ ಎಸ್ (DRS) ಬಗ್ಗೆ ಕೇಳಿದಾಗ ತಂತ್ರಜ್ಞಾನದ ನೆರವು ನಮಗೆ ನಿಜಕ್ಕೂ ವರದಾನ. ನಿರ್ಣಯಗಳನ್ನು ಏಕಾಗ್ರತೆಯಿಂದ
ವಿಚಲಿತರಾಗದೆ ನೀಡಬೇಕು. ಹೊಸ ತಂತ್ರಜ್ಞಾನದಿಂದ ಅನೂಕೂಲವೇ ಆಗಿದೆ.ಸೋಲು ಅಥವಾ ಗೆಲುವು ಯಾವುದೇ ಇರಲಿ . ಪರಿಸ್ಥಿತಿ ಅರಿತು ಏಕಾಗ್ರತೆಯಿಂದ ಕೆಲಸ ನಿರ್ವಹಿಸುವುದು ಸವಾಲು ಎಂದರು.
ಬೆಂಗಳೂರು ನಿವಾಸಿಯಾದರೂ ಹುಬ್ಬಳ್ಳ ನವನಗರದಲ್ಲಿ ತಾಯಿ ವಾಸಿಸುತ್ತಿದ್ದು ಆಗಾಗ ಬರುತ್ತಾರಲ್ಲದೆ ಹಳೆಯ ನಂಟನ್ನು ಇಂದಿಗೂ ಹೊಂದಿದ್ದಾರೆ.
ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್, ಶಿವಾನಂದ ಗುಂಜಾಳ್, ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್, ರಾಜು ಪಾಟೀಲ್,ವಿಜಯ ಲಕ್ಷ್ಮೇಶ್ವರ , ಸಂಜಯ ಸೂರ್ಯಭಟ್ಟ, ಗುರುರಾಜ್ ಕುಲಕರ್ಣಿ ಮುಂತಾದವರ ಸಹಾಯ ಸಹಕಾರ ಅಭಿಜಿತ್ ನೆನಪಿಸಿಕೊಳ್ಳುತ್ತಾರೆ.
ರಾಜೇಶ್ ಕಾಮತ್, ಸುರೇಶ್ ಶಾನ್ಬಾಳ್, ಮಾರುತಿ ಶಾನ್ಬಾಳ್, ಸುನಿಲ್ ಜೋಶಿ, ಸೋಮಶೇಖರ್ ಶಿರಗುಪ್ಪಿ, ಆನಂದ ಕಟ್ಟಿ, ಅವಿನಾಶ್ ವೈದ್ಯ ಮುಂತಾದ ಪ್ರತಿಭೆಗಳನ್ನು ರಾಜ್ಯ ತಂಡಕ್ಕೆ ನೀಡಿರುವುದು ಹುಬ್ಬಳ್ಳಿ ಧಾರವಾಡದ ಹಿರಿಮೆಯಾಗಿದ್ದು, ಐಪಿಎಲ್ ನಲ್ಲಿ ನಿರ್ಣಾಯಕರಾಗಿರುವ ಬೆಂಗೇರಿ ಕ್ರಿಕೆಟ್ಟಿನ ಮೂಲ ಸತ್ವ ಇರುವ ಟೆಸ್ಟ್ ಕ್ರಿಕೆಟ್ ಅಂಪಾಯರ್ ಆಗಿ ಕಾರ್ಯನಿರ್ವಹಿಸಲಿ ಎಂಬುದು ಸಮಸ್ತ ಕನ್ನಡಿಗರ ಅಲ್ಲದೆ ಹಿತೈಷಿಗಳೆಲ್ಲರ ಹಾರೈಕೆಯಾಗಿದೆ.
ಹುಬ್ಬಳ್ಳಿ ಧಾರವಾಡ ವಲಯದಲ್ಲಿ 40ಕ್ಕೂ ಹೆಚ್ಚು ಅಂಪಾಯರ್ ಗಳಿಗೆ ತರಬೇತಿ ನೀಡಿದ ಅಂಪೈರಿಂಗ್ ಗುರು ವಿಜಯ ಕಾಮತ್ ಅವರ ಸಹಕಾರ , ಕೊಡುಗೆ ಅಭಿಜಿತ್ ಸ್ಮರಿಸುತ್ತಾರೆ . ಅಲ್ಲದೆ ಶಿಷ್ಯನ ಯಶಸ್ಸು ಕಾಮತ್ ಅವರ ಪಾಲಿಗೆ ಸಹ ಖುಷಿಯ ಸಂಗತಿಯಾಗಿದ್ದು ಆತನ ತಾಳ್ಮೆ, ಪ್ರಯತ್ನಗಳೇ ಯಶಸ್ಸಿನ ಗುಟ್ಟು ಎನ್ನುತ್ತಾರೆ.
ಹುಬ್ಬಳ್ಳಿಯ ಪ್ರತಿಭೆ ಬೆಂಗೇರಿ ಯಾವುದೇ ಗಾಡ್ ಫಾದರ್ ಇಲ್ಲದೆ ಈ ಮಟ್ಟಕ್ಕೆ ಬೆಳೆದಿದ್ದಾರೆ. ಇಡೀ ಹುಬ್ಬಳ್ಳಿಯರೆ ಸಂತಸ ಪಡುವ ಸಂಗತಿ.
ವೀರಣ್ಣ ಸವಡಿ, ಚೇರಮನ್
ಕೆಎಸ್ ಸಿಎ ಧಾರವಾಡ ವಲಯ.
ಬೆಂಗೇರಿ ಅವರ ಯಶಸ್ಸು ನೋಡಿ ಖುಷಿಯಾಗಿದೆ. ತನ್ನ ಸ್ವ ಪ್ರಯತ್ನದಿಂದ ಮೇಲೆ ಬಂದಿದ್ದು ಐಪಿಎಲ್ನಲ್ಲಿ ಆತನ ಅಂಪೈರಿಂಗ್ ನೋಡಿ ಹೆಮ್ಮೆಯಾಗುತ್ತದೆ.
ಗುರುರಾಜ್ ಕುಲಕರ್ಣಿ.
ಹುಬ್ಬಳ್ಳಿಯ ಮಾಜಿ ಕ್ರಿಕೆಟಿಗ.
ನಮ್ಮ ಬಿಡಿಕೆ ಕ್ಲಬ್ ನಲ್ಲಿ ಆಡಿದ್ದ ಅಭಿಜಿತ್ ಬೆಂಗೇರಿಯ ತಾಳ್ಮೆ , ನಿಷ್ಠೆಯೆ ಇಂದು ಈ ಹಂತಕ್ಕೆ ತಂದಿದೆ.
ಶಿವಾನಂದ ಗುಂಜಾಳ
ಕ್ರಿಕೆಟ್ ತರಬೇತಿದಾರರು