*ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಗೆ ಬಡಿದು ದುರಂತ – 242 ಪ್ರಯಾಣಿಕರಿದ್ದ ಲಂಡನ್ ಗೆ ಹೊರಟಿದ್ದ ವಿಮಾನ*
ಅಹ್ಮದಾಬಾದ್ : ಅಹಮದಾಬಾದ್ ಏರ್ ಪೋರ್ಟ್ ಬಳಿ ಅಹಮದಾಬಾದನಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾದ ಪ್ರಯಾಣಿಕರ ವಿಮಾನ ಪತನವಾಗಿದೆ.
ಈ ನತದೃಷ್ಟ ವಿಮಾನದಲ್ಲಿ ಹತ್ತು ಕ್ಯಾಬಿನ್ ಸಿಬ್ಬಂದಿ, ಇಬ್ಬರು ಪೈಲಟ್ ಸೇರಿ 242 ಪ್ರಯಾಣಿಕರಿದ್ದರು. ಈ ಘಟನೆಯಲ್ಲಿ
110 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ವಿಮಾನದಲ್ಲಿ 230 ವಯಸ್ಕರು ಹಾಗು 2 ಮಕ್ಕಳನ್ನು ಒಳಗೊಂಡಂತೆ ಒಟ್ಟು 232 ಪ್ರಯಾಣಿಕರು ಇದ್ದರು. ಈ ಪೈಕಿ 169 ಮಂದಿ ಭಾರತೀಯರು ಇದ್ದರು. ಟೇಕಾಫ್ ಆದ ಒಂದೇ ನಿಮಿಷದಲ್ಲಿ ಸಂಪರ್ಕ ಕಡಿದುಕೊಂಡ ವಿಮಾನ ಎಂಜಿನ್ನಲ್ಲಿ ತಾಂತ್ರಿಕ ದೋಷದಿಂದಾಗಿ ಮೇಘಾನಿ ಪ್ರದೇಶದಲ್ಲಿ ಪತನಗೊಂಡಿದೆ.ಹತ್ತಾರು ಅಂಬುಲೆನ್ಸ್ಗಳಲ್ಲಿ ಸುಟ್ಟು ಕರಕಲಾದ ದೇಹಗಳನ್ನು ಅಹಮದಾಬಾದ್ನ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗುತ್ತಿದೆ.
ಮೇಘಾನಿ ಪ್ರದೇಶದ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ಗೆ ವಿಮಾನ ಬಡಿದ್ದಿದ್ದು, ಹಾಸ್ಟೆಲ್ನಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳು ಕೂಡ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. 600 ಅಡಿ ಎತ್ತರದಿಂದ ವಿಮಾನ ನೆಲಕ್ಕಪ್ಪಳಿಸಿದೆ.
ಇದೇ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಪ್ರಯಾಣಿಸುತ್ತಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿಮಾನಯಾನ ಸಚಿವ ರಾಮ್ಮೋಹನ್ ನಾಯ್ಡು ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಘಟನಾ ಸ್ಥಳಕ್ಕೆ ಆಗಮಿಸಲಿದ್ದಾರೆ.
ಘಟನೆ ಸಂಬಂಧ ಸಹಾಯವಾಣಿ ತೆರೆಯಲಾಗಿದ್ದು, 1800 5691 444 ಗೆ ಸಂಪರ್ಕಿಸಬಹುದಾಗಿದೆ. ಮಾಧ್ಯಮ ಸಂಬಂಧಿತ ಯಾವುದೇ ಪ್ರಶ್ನೆಗಳಿಗೆ ಏರ್ ಇಂಡಿಯಾದ ಮಾಧ್ಯಮ ಸಂಪರ್ಕ ಸಂಖ್ಯೆ +91 9821414954 ಅನ್ನು ಸಂಪರ್ಕಿಸಬಹುದು. ಏರ್ ಇಂಡಿಯಾ ಬೋಯಿಂಗ್ ಡ್ರೀಮ್ಲೈನರ್ 787 ವಿಮಾನವಾಗಿತ್ತು.