ಧಾರವಾಡ: ಪೇಡಾ ನಗರಿಯ ಭರವಸೆಯ ಯುವ ಗಾಯಕಿ ಐಶ್ವರ್ಯ ಉದಯ ದೇಸಾಯಿ ಅವರು ಶಿರಸಿಯ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ನೀಡುವ ‘ನಮ್ಮನೆ’ ಯುವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಚಿಕ್ಕಂದಿನಿಂದಲೇ ಸಂಗೀತ ಆಸಕ್ತಿ ಹೊಂದಿರುವ ಐಶ್ವರ್ಯ ದೇಸಾಯಿ ಧಾರವಾಡದ ಸುಪ್ರೀಂ ಕೋರ್ಟ್ ನ್ಯಾಯವಾದಿ ಹಾಗೂ ಕಲೆ, ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಉದಯ ದೇಸಾಯಿ ಅವರ ಮಗಳು. ಐಶ್ವರ್ಯ ತಮ್ಮ 9 ನೇ ವರ್ಷದಲ್ಲೇ ಪಂಡಿತ್ ಮೃತ್ಯುಂಜಯ ಅಂಗಡಿ ಹಾಗೂ 14 ವರ್ಷದಿಂದ ಪದ್ಮಶ್ರೀ ಪ್ರಸಿದ್ಧ ಗಾಯಕ ವೆಂಕಟೇಶ ಕುಮಾರ ಅವರಲ್ಲಿ ಕಲಿಯುತ್ತಿದ್ದಾರೆ. ಕರ್ನಾಟಕ ವಿವಿಯ ಸಂಗೀತ ಹಾಗೂ ಲಲಿತಕಲೆಗಳ ಮೇಲಿನ ಬಿಮ್ಯುಸಿಕ್ ಹಾಗೂ ಸ್ನಾತಕೋತ್ತರ ಪದವಿಗಳೆರಡಲ್ಲೂ ರ್ಯಾಂಕ್ ಜೊತೆ ಬಂಗಾರದ ಪದಕ ತಮ್ಮದಾಗಿಸಿಕೊಂಡವರು. ಇದೀಗ ಸಂಗೀತದಲ್ಲೇ ಪಿಎಚ್ ಡಿ ಅಧ್ಯಯನ ಕೂಡ ಮಾಡುತ್ತಿದ್ದಾರೆ.
ಈಗಾಗಲೇ ರಾಜ್ಯದ ಹಲವಡೆ ಸಂಗೀತ ಕಚೇರಿ ನೀಡಿ ಸೈ ಎನಿಸಿಕೊಂಡಿದ್ದಾರೆಲ್ಲದೆ ಅನೇಕ ಪ್ರತಿಷ್ಠಿತ ವೇದಿಕೆಯಲ್ಲಿ ಕೂಡ ಗಾಯನದ ಮೂಲಕ ಗಮನ ಸೆಳೆದಿದ್ದಾರೆ.
ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ರಾಷ್ಟ್ರ ಮಟ್ಟದ ಗೌರವ, ಮೈಸೂರು ಮಹಾರಾಜ ಶ್ರೀಜಯಚಾಮರಾಜೇಂದ್ರ ಒಡೆಯರ್ ಪ್ರಶಸ್ತಿ, ಶಾರದಾ ಪುರಸ್ಕಾರ ಸೇರಿದಂತೆ ಅನೇಕ ಪುರಸ್ಕಾರಗಳು, ಸಮ್ಮಾನಗಳೂ ಬಂದಿವೆ. ಮಧುರ ಕಂಠ, ಹಾಡಿನ ಪ್ರಸ್ತುತಿಯ ಮೂಲಕ ಪ್ಷೇಕ್ಷಕರ ಮನ ಗೆದ್ದ ಐಶ್ವರ್ಯರಿಗೆ ಡಿ.08 ರಂದು ಶಿರಸಿ ಸಮೀಪದ ಹಳ್ಳಿ ಬೆಟ್ಟಕೊಪ್ಪದಲ್ಲಿ ನಡೆಯುವ ನಮ್ಮನೆ ಹಬ್ಬದಲ್ಲಿ ಯುವ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ.
ಧಾರವಾಡದ ಸಂಗೀತ ಪರಂಪರೆಯಲ್ಲಿ ಅನೇಕರು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದು,
ಐಶ್ವರ್ಯ ಸಹ ಆ ಹಾದಿಯಲ್ಲಿ ಮುನ್ನಡೆದು ಮಿಂಚು ಹರಿಸಲಿ.