*ದಕ್ಷಿಣ ಭಾರತದಲ್ಲಿ ಕಡಿಮೆ ಮಾಡುವ ಪ್ರಯತ್ನ ಎಲ್ಲರೂ ಒಂದಾಗಿ ತಡೆಯಬೇಕು : ಖರ್ಗೆ*
ಗದಗ :ಉತ್ತರ ಭಾರತದಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಶೇ. 30ರಷ್ಟು ಎಂಪಿ, ಎಂಎಲ್ಎ ಹೆಚ್ಚಿಗೆ ಮಾಡಿ, ದಕ್ಷಿಣ ಭಾರತದಲ್ಲಿ ಕಡಿಮೆ ಮಾಡುವ ಪ್ರಯತ್ನ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನು ತಡೆಯಲೂ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ ಎಂದು ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಕೆ.ಎಚ್. ಪಾಟೀಲ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ನಾಡು ಮೆಚ್ಚಿದ ಜನನಾಯಕ ಕೆ.ಎಚ್. ಪಾಟೀಲ ಜನ್ಮ ಶತಮಾನೋತ್ಸವ ಆಚರಣೆ ಮತ್ತು ದಿ. ಗದಗ ಕೋ-ಆಪರೇಟಿವ್ ಕಾಟನ್ ಸೇಲ್ ಸೊಸೈಟಿ ನವೀನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ವಿಷಯ ಬಂದಾಗ, ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಒಂದಾಗಿ ಮಾತನಾಡಬೇಕು. ಸಂದರ್ಭ ಬಂದಾಗ ಕೇಂದ್ರದಲ್ಲಿ ವಿಷಯ ಪ್ರಸ್ತಾಪ ಮಾಡುತ್ತೇವೆ ಎಂದು ಹೇಳಿದರು.
ಕೇಂದ್ರೀಯ ವಿದ್ಯಾಲಯಗಳಲ್ಲಿ ಶೇ. 50ರಷ್ಟು ಹುದ್ದೆಗಳು ಖಾಲಿಯಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ಕೊಡಬೇಕಾಗಿ ಬಂದಿದೆ.
ಕೇಂದ್ರ ಸರಕಾರದ ನವೋದಯ ಶಾಲೆಗಳಲ್ಲಿ 47,000, ಕೇಂದ್ರೀಯ ವಿದ್ಯಾಲಯದಲ್ಲಿ 7,400 ಹಾಗೂ ವಿಶ್ವವಿದ್ಯಾಲಯಗಳಲ್ಲಿ 5,400 ಹುದ್ದೆಗಳು ಖಾಲಿಯಿವೆ. ದೇಶದಲ್ಲಿ 90 ಸಾವಿರ ಶಾಲೆಗಳು ಬಂದ್ ಆಗಿವೆ. 50 ಸಾವಿರ ಉತ್ತರ ಪ್ರದೇಶ, ಬಿಹಾರ ರಾಜ್ಯದಲ್ಲಿ ಶಾಲೆಗಳು ಬಂದ್ ಆಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಖಾಸಗಿ ಶಾಲೆಗಳು ಶೇ. 40ರಷ್ಟು ಹೆಚ್ಚಿವೆ. ಬಡಮಕ್ಕಳು ಓದುವುದು ಕಷ್ಟವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಟ್ಟು ಬೆಳೆಸಬೇಕಿದೆ. ಬಡವರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕಾದರೆ ಶಿಕ್ಷಣವೊಂದೇ ಮಾರ್ಗ. ಸರಕಾರಿ ಶಾಲೆಗಳಿಗೆ ಬೆಂಚ್ ಸೇರಿ ಪೀಠೋಪಕರಣಗಳನ್ನು ಕೊಡುಗೆ ನೀಡಿ ಎಂದು ಮನವಿ ಮಾಡಿ ,ಸಹಕಾರ ಕ್ಷೇತ್ರಕ್ಕೆ ಕೆ.ಎಚ್.ಪಾಟೀಲರ ಕೊಡುಗೆ ಅನನ್ಯ ಎಂದರು.
“ಕೆ.ಹೆಚ್ ಪಾಟೀಲ್ ಅವರು ಮಹಾ ಮಾನವತಾವಾದಿಯಾಗಿದ್ದರು. ಜಾತಿ, ಧರ್ಮದ ತಾರತಮ್ಯವಿಲ್ಲದೆ ಸಹಕಾರಿ ಕ್ಷೇತ್ರದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಮುನ್ನಡೆಸಿದವರು” ಎಂದು ಮುಖ್ಯ ಅತಿಥಿ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
“ಕೆ.ಹೆಚ್ ಪಾಟೀಲರ ಜತೆ ನಾಲ್ಕೈದು ವರ್ಷ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿತ್ತು. ನಾನು ಇಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದು, ಅಂದು ಕೆ.ಹೆಚ್ ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ 1985ರಲ್ಲಿ ನನಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿ ದೇವೇಗೌಡರ ವಿರುದ್ಧ ಸ್ಪರ್ಧಿಸುವಂತೆ ಹೇಳಿದರು. ಅಲ್ಲಿಂದ ಇಲ್ಲಿಯವರೆಗೂ ಸತತವಾಗಿ 9 ಬಾರಿ ಬಿ ಫಾರಂ ತೆಗೆದುಕೊಂಡು ಈ ಮಟ್ಟಕ್ಕೆ ಬೆಳೆದಿದ್ದೇನೆ” ಎಂದು ಸ್ಮರಿಸಿದರು.
“ಕೆ.ಹೆಚ್ ಪಾಟೀಲ್ ಅವರು ಸೋಲು, ಗೆಲುವು, ಯಶಸ್ಸು ಎಲ್ಲವನ್ನು ಕಂಡಿರುವ ಮಾನವತಾವಾದಿ. ಅವರ ಜೊತೆ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಮಣ್ಣಿಲ್ಲದೆ ಮಡಿಕೆ ಇಲ್ಲ, ಹಿರಿಯರ ಬಿಟ್ಟು ದೇವರಿಲ್ಲ. ತಂದೆ ತಾಯಿಗಳೇ ನಮ್ಮ ದೇವರು. ಅವರನ್ನು ಸ್ಮರಿಸುತ್ತಾ ಅವರು ತೋರಿದ ಮಾರ್ಗದರ್ಶನದಲ್ಲಿ ನಾವು ಸಾಗಬೇಕು. ಸಹಕಾರ ಕ್ಷೇತ್ರದಲ್ಲಿ ಕೆ.ಹೆಚ್ ಪಾಟೀಲ್ ಅವರು ಅನೇಕ ಸಂಸ್ಥೆಗಳನ್ನು ಕಟ್ಟಿದ್ದಾರೆ” ಎಂದರು.
ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಈಶ್ವರ ಖಂಡ್ರೆ, ಸಮಿತಿ ಅಧ್ಯಕ್ಷ ಡಿ.ಆರ್.ಪಾಟೀಲ ಸಹಿತ ಅನೇಕ ಗಣ್ಯರು ಇದ್ದರು.