*ಹಳೆಯ ಹುಲಿಗೆ ಹೊಸ ಟಗರಿನ ಸವಾಲು / ದಿಂಗಾಲೇಶ್ವರರ ತಂತ್ರ ಫಲಕಾರಿಯಾದೀತೆ ?*
ಹುಬ್ಬಳ್ಳಿ : 1990ರ ದಶಕದವರೆಗೂ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದ ಧಾರವಾಡ ಕ್ಷೇತ್ರ ತದನಂತರ ಬಿಜೆಪಿ ಭದ್ರಕೋಟೆಯಾಗಿ ಮಾರ್ಪಟ್ಟಿದ್ದು ಪ್ರಸಕ್ತ ಚುನಾವಣೆಯಲ್ಲಿ ಹಾಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಸತತ ಐದನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸುವರೋ ಅಥವಾ ಅಹಿಂದ ಸಮೀಕರಣದೊಂದಿಗೆ ಕಣಕ್ಕಿಳಿಸಲ್ಪಟ್ಟಿರುವ ಕಾಂಗ್ರೆಸ್ನ ವಿನೋದ ಅಸೂಟಿ ಕಮಾಲ್ ಮಾಡುವುರೋ ಎಂಬುದು ತೀವ್ರ ಕುತೂಹಲ ಕೆರಳಿಸಿದೆ .
ಧಾರವಾಡ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರವನ್ನೊಳಗೊಂಡು ಸುಮಾರು ಹದಿನೆಂಟು ಲಕ್ಷಕ್ಕೂ ಹೆಚ್ಚು ಮತದಾರರಿರುವ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಹಾಗೂ ಮೋದಿ ಗ್ಯಾರಂಟಿ ನಡುವಣ ಕದನದಲ್ಲಿ ಹಳೆಯ ಹುಲಿ ಜೋಶಿ ಮತ್ತು ಹೊಸಬ ವಿನೋದ ಅಸೂಟಿ ಕದನ ಜಿದ್ದಾಜಿದ್ದಿಯಾಗಿ ಮಾರ್ಪಟ್ಟಿದೆ.
ಕಣದಿಂದ ಹಿಂದೆ ಸರಿದರೂ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿಯ ಧರ್ಮಯುದ್ದದ ಬಾಂಬ್ ಎಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಪರಿಣಾಮ ಬೀರಿ ಅದು ಬಿಜೆಪಿಯ ಓಟಕ್ಕೆ ಎಷ್ಟರ ಮಟ್ಟಿಗೆ ಬ್ರೇಕ್ ಹಾಕುತ್ತದೆ ಎಂಬುದು ಮತ ಯಂತ್ರದ ಸೀಲ್ ಒಡೆದಾಗಲೇ ಬಹಿರಂಗಗೊಳ್ಳಲಿದೆ.
ಸತತ ನಾಲ್ಕು ಬಾರಿ ಕ್ಷೇತ್ರವನ್ನು ಗೆದ್ದಿರುವ ಜೋಶಿಯವರಿಗೆ ಐದನೆ ಬಾರಿ ಗೆಲುವಿನ ದಾರಿ ಸುಲಭದ ತುತ್ತು ಎಂದೇ ಭಾವಿಸಲಾಗಿತ್ತು. ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಎಂದೂ ತಾತ್ಸಾರ ಮಾಡದ ಅಲ್ಲದೇ ಪ್ರತಿ ಹಳ್ಳಿಯ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹೊಂದಿರುವ ಅವರ ಎದುರು ಅಭ್ಯರ್ಥಿ ಅಂತಿಮಗೊಳಿಸುವುದೇ ಕಾಂಗ್ರೆಸ್ಗೆ ನಿಜಕ್ಕೂ ಸವಾಲಾಗಿತ್ತು. ಆದರೆ ಹಿಂದುಳಿದ ಸಮುದಾಯದ ವಿನೋದ ಅಸೂಟಿಗೆ ಟಿಕೆಟ್ ನೀಡುವ ಮೂಲಕ ಇತಿಹಾಸ ಪುನರಾವರ್ತಿಸುವ ಸಾಹಸಕ್ಕೆ ಕೈ ಹಾಕಿತು.
ಕಾಂಗ್ರೆಸ್ ಟಿಕೆಟ್ ಘೋಷಣೆ ಮೊದಲೇ ಒಂದು ಸುತ್ತಿನ ಪ್ರಚಾರ ಮುಗಿಸಿದ್ದ ಬಿಜೆಪಿ ಪಾಳೆಯದಲ್ಲಿ ದಿಗಿಲು ಹುಟ್ಟಿಸಿದ್ದು ದಿಂಗಾಲೇಶ್ವರರ ನಡೆ. ಏಕಾಏಕಿ ಜೋಶಿಯವರಿಂದ ಲಿಂಗಾಯತ ಮತ್ತು ಇತರ ಸಮುದಾಯಗಳು ವ್ಯಾಪಕ ಅನ್ಯಾಯವಾಗಿದ್ದು ಈ ಹಿನ್ನೆಲೆಯಲ್ಲಿ ಸೆಡ್ಡು ಹೊಡೆವ ನಿರ್ಧಾರ ಪ್ರಕಟಿಸಿದಾಗ ಇಡೀ ರಾಜ್ಯದಲ್ಲೇ ಹೊಸ ಸಂಚಲನ ಸೃಷ್ಟಿಯಾಗಿತ್ತು. ಅಂತಿಮ ಹಂತದಲ್ಲಿ ದಿಢೀರ್ ಆಗಿ ನಾಮಪತ್ರ ಹಿಂತೆಗೆದುಕೊಂಡರೂ ತಮ್ಮ ಸಮರ ಯಾವುದೇ ಪಕ್ಷದ ವಿರುದ್ಧ ಅಲ್ಲ.ಸಮಾಜ ಒಡೆದಾಳುವ ನಾಯಕರ ವಿರುದ್ಧ ಎಂದು ಹೇಳುತ್ತಾ ಪ್ರಚಾರ ನಡೆಸಿದ್ದಾರೆ.
ಪ್ರತಿ ಬಾರಿ ಬಿಜೆಪಿ ಗೆಲುವಿನ ಹಿಂದೆ ಕಾಂಗ್ರೆಸ್ ನಾಯಕರ ನೆರಳಿನ ಬಿಂಬ ಕಾಣುತ್ತಿತ್ತು. ಆದರೆ ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಂತಹ ಯಾವುದೇ ಸಂಶಯಕ್ಕೂ ಆಸ್ಪದ ಬರದಂತೆ ವಿನೂತನ ಪ್ರಚಾರ ತಂತ್ರದ ಮೂಲಕ ವಿನೋದ ಅಸೂಟಿ ಗೆಲುವಿಗಾಗಿ ಪರಿಶ್ರಮ ಪಡುತ್ತಿದ್ದಾರೆ. ಅಲ್ಲದೇ ಸ್ವತಃ ಸಿಎಂ ಸಿದ್ದರಾಮಯ್ಯ ಕೂಡ ಎಲ್ಲ ಶಾಸಕರ ಕಿವಿ ಹಿಂಡಿ ಪ್ರತಿ ಕ್ಷೇತ್ರದಲ್ಲೂ ಮುನ್ನಡೆ ತಂದುಕೊಡಲೇ ಬೇಕೆಂಬ ಟಾರ್ಗೆಟ್ ನೀಡಿದ್ದಾರೆ. ಬಿಜೆಪಿಗೆ ದೊಡ್ಡ ಮಟ್ಟದ ಲೀಡ್ ತಂದುಕೊಡುವ ಕ್ಷೇತ್ರಗಳಲ್ಲಿ ಅಂತರ ತಗ್ಗಿಸಲು ಕಾಂಗ್ರೆಸ್ ಯತ್ನ ನಡೆಸಿದ್ದರೆ, ಅಲ್ಪಸಂಖ್ಯಾತರ ಮತದಾನ ಕಡಿಮೆ ಮಾಡಿಸಲು ಬಿಜೆಪಿ ಕೆಲ ಮುಖಂಡರ ಮೂಲಕ ಸ್ಕೆಚ್ ಹಾಕಿದೆ.
ಜೋಶಿಯವರನ್ನು ದಾಖಲೆ ಅಂತರದಲ್ಲಿ ಗೆಲ್ಲಿಸಿ ಅವರು ಕೇಂದ್ರದಲ್ಲಿ ಮತ್ತಷ್ಟು ಪ್ರಭಾವಿ ಸಚಿವರಾಗುವರೆಂಬ ಸಂದೇಶವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದು ಬೂಸ್ಟರ್ ಆಗಿದೆ. ಯಡಿಯೂರಪ್ಪ ಜೆ.ಪಿ.ನಡ್ಡಾ, ಸಹಿತ ಹಲವು ಹಿರಿ,ಕಿರಿಯ ನಾಯಕರು, ಚಿತ್ರ ತಾರೆಯರು ಕ್ಷೇತ್ರದಲ್ಲಿ ಕಮಲ ಅರಳಿಸಲು ಹರಸಾಹಸ ಪಟ್ಟಿದ್ದಾರೆ.
ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಶಾಸಕರಿದ್ದರೆ ಇನ್ನು ನಾಲ್ಕರಲ್ಲಿ ಕಾಂಗ್ರೆಸ್ಸಿಗರಿದ್ದಾರೆ. ಕಳೆದ 2019ರ ಚುನಾವಣೆಯಲ್ಲಿ ಒಂದೆರಡು ಕ್ಷೇತ್ರಗಳನ್ನು ಬಿಟ್ಟರೆ ಉಳಿದೆಲ್ಲ ಕಡೆ ಬಿಜೆಪಿ ಮುನ್ನಡೆ ಪಡೆದಿತ್ತು.ಆದರೆ ಈ ಬಾರಿ ಅಂತಹ ಸಾಧ್ಯತೆ ಕ್ಷೀಣಿಸಿದೆ. ಕುಂದಗೋಳದಲ್ಲಿ ಚಿಕ್ಕನಗೌಡ್ರ ಬೆಂಬಲಿಗರೆಲ್ಲಾ ಕೈ ಸೇರ್ಪಡೆಯಾಗಿದ್ದು ಕಳೆದೊಂದು ವಾರದಿಂದ ಚಿತ್ರಣ ಬದಲಾಗಿದೆ. ಅಲ್ಲದೇ ಮೊದಲ ಬಾರಿ ಮಾಜಿ ಸಿಎಂ ಜಗದೀಶ ಶೆಟ್ಟರ್ ನಾಮಪತ್ರ ಸಲ್ಲಿಕೆಗೆ ಬಿಟ್ಟರೆ ಧಾರವಾಡದತ್ತ ಕಾಲಿಟ್ಟಿಲ್ಲ. ಬಿಜೆಪಿಯ ಜೋಶಿ ಗೆಲುವು ದಾಖಲಿಸಿದಲ್ಲಿ ಧಾರವಾಡ ಕ್ಷೇತ್ರದಿಂದ ಸತತ ಐದನೇ ಬಾರಿ ಸಂಸತ್ಗೆ ಬಲಗಾಲಿಡುವ ಮೂಲಕ ಹೊಸ ಇತಿಹಾಸ ನಿರ್ಮಿಸಲಿದ್ದು, ಅಸೂಟಿ ವಿಜಯಶಾಲಿ ಆದಲ್ಲಿ ಕಮಲ ಕೋಟೆ ಬೇಧಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ.
ಉಭಯ ಪಕ್ಷಗಳು ವ್ಯಾಪಕ ಪ್ರಚಾರ ನಡೆಸಿದ್ದು ಕಾಂಗ್ರೆಸ್ಗೆ ಗ್ಯಾರಂಟಿಗಳು ಗ್ರಾಮೀಣ ಪ್ರದೇಶದಲ್ಲಿ ಕೈ ಹಿಡಿವ ಸಾಧ್ಯತೆಗಳಿದ್ದರೆ ಬಿಜೆಪಿಗೆ ಇತ್ತೀಚಿನ ನೇಹಾ ಹತ್ಯೆ ವರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇಂದು ಮತ್ತು ನಾಳೆ ನಡೆವ ನಿರ್ಣಾಯಕ ಕತ್ತಲ ರಾತ್ರಿಯ ’ಹಂಚಿಕೆ’ ಕೂಡ ಅಂತರ ನಿರ್ಧರಿಸಲಿದೆ. ಕಣದಲ್ಲಿ ಒಟ್ಟೂ 17 ಅಭ್ಯರ್ಥಿಗಳಾಗಿದ್ದಾರೆ.
ವಿಧಾನ ಸಭಾ ಕ್ಷೇತ್ರವಾರು ವಾಸ್ತವ ಸ್ಥಿತಿ :*
ಬಿಜೆಪಿ ಮುನ್ನಡೆ ಗಳಿಸಬಹುದಾದ ಕ್ಷೇತ್ರಗಳು : ಹುಬ್ಬಳ್ಳಿ ಧಾರವಾಡ ಸೆಂಟ್ರಲ್ (30ರಿಂದ 35ಸಾವಿರ ) , ಹುಬ್ಬಳ್ಳಿ ಧಾರವಾಡ ಪಶ್ಚಿಮ ( 20ರಿಂದ 25ಸಾವಿರ)
ಶಿಗ್ಗಾಂವಿ ( 10 ಸಾವಿರ )
ಕಾಂಗ್ರೆಸ್ ಮುನ್ನಡೆ ಸಾಧಿಸಬಹುದಾದ ಕ್ಷೇತ್ರಗಳು :
ಹುಬ್ಬಳ್ಳೀ ಧಾರವಾಡ ಪೂರ್ವ ( 10ರಿಂದ 15 ಸಾವಿರ ) , ನವಲಗುಂದ ( 20ರಿಂದ 25 ಸಾವಿರ), ಕಲಘಟಗಿ ( 5ರಿಂದ 10 ಸಾವಿರ)
ಸಮಾನ ಪೈಪೋಟಿ : ಕುಂದಗೋಳ, ಧಾರವಾಡ ಗ್ರಾಮೀಣ
ಜಾತಿವಾರು ವಿವರ*
ಲಿಂಗಾಯತರು :5.60 ಲಕ್ಷ ,ಎಸ್ ಸಿ ಎಸ್ ಟಿ:2.35 ಲಕ್ಷ ಮುಸ್ಲಿಂ : 3.10 ಲಕ್ಷ, ಕುರುಬ1.60ಲಕ್ಷ , ಇತರೆ ಹಿಂದುಳಿದ 3.20 ಲಕ್ಷ ( ಮರಾಠಾ,ಎಸ್ ಎಸ್ಕೆ ಹಾಗೂ ಇತರರು) , ಬ್ರಾಹ್ಮಣ,ರೆಡ್ಡಿ 1ಲಕ್ಷ
ಸಾಕ್ಷಾತ್ ಸಮೀಕ್ಷೆ : ಸುಪ್ರಭಾತ ಹುಬ್ಬಳ್ಳಿ*