*ಕೊಡುಗೈ ದಾನಿ,ಸಮಾಜಮುಖಿ ಹುಬ್ಬಳ್ಳಿ ಉದ್ಯಮಿಗೆ ಅರಸಿ ಬಂದ ಗೌರವ/ನಿರುಪಾದೀಶ ಸ್ವಾಮೀಜಿ, ನರಸಿಂಹರಾಜು ಅವರಿಗೂ ಗೌಡಾ*
ಹುಬ್ಬಳ್ಳಿ : ಪೇಡೆನಗರಿಯ ಹಿರಿಮೆಯ ಕರ್ನಾಟಕ ವಿಶ್ವವಿದ್ಯಾಲಯದ 74ನೇ ಘಟಿಕೋತ್ಸವ ಸಮಾರಂಭ ದಿ. 24ರಂದು ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ನಡೆಯಲಿದ್ದು ರಾಜ್ಯಪಾಲ ಥಾವರ್ಚಂದ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಹುಬ್ಬಳ್ಳಿಯ ಕೊಡುಗೈ ದಾನಿ, ಸಮಾಜ ಸೇವೆಯಲ್ಲಿ ದೊಡ್ಡ ಹೆಸರಾದ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ ಅವರ ಸಹಿತ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ನಿರುಪಾದೀಶ ಸ್ವಾಮೀಜಿ, ಶಿಕ್ಷಣ ತಜ್ಞ ಎಸ್.ಎನ್.ವೆಂಕಟಲಕ್ಷ್ಮಿ ಗೌಡಾಕ್ಕೆ ಭಾಜನರಾದ ಇನ್ನಿಬ್ಬರು ಸಾಧಕರಾಗಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೋ.ಎಸ್.ಅಯ್ಯಪ್ಪನ್ ಘಟಿಕೋತ್ಸವ ಭಾಷಣ ಮಾಡಲಿದ್ದು, ಒಟ್ಟು25,425 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದು, 278ಚಿನ್ನದ ಪದಕ, 52ಪಾರಿತೋಷಕ, 73ಶಿಷ್ಯ ವೇತನ, ಹಾಗೂ 82 ರ್ಯಾಂಕ್ಗಳನ್ನು ಪ್ರದಾನ ಮಾಡಲಾಗುವುದೆಂದು ಕವಿವಿ ಕುಲಪತಿ ಡಾ.ಕೆ.ಬಿ.ಗುಡಸಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
*ಆಪತ್ಭಾಂದವ*
ದುಡಿದ ಹಣದಲ್ಲಿ ಒಂದಷ್ಟನ್ನು ಸಮಾಜದ ಕಡು ಬಡವರಿಗೆ ನೀಡುವ ಮೂಲಕ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ಸಂದೇಶವನ್ನು ಸ್ವರ್ಣ ಸಮೂಹ ಸಂಸ್ಥೆಯ ಚೇರ್ಮನ್ ಡಾ.ಚಿಗರುಪಾಟಿ ವೆಂಕಟ ಸತ್ಯ ವರಪ್ರಸಾದ ಚಾಚು ತಪ್ಪದೇ ಪಾಲಿಸುತ್ತಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರಸಾದ ಅವರು ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.
ಆಂಧ್ರಪ್ರದೇಶದ ಗೊಲ್ಲಪುಡಿಯವರಾದ ಚಿಗರುಪಾಟಿ ಮಲ್ಲಿಕಾರ್ಜುನರಾವ ಮತ್ತು ಸ್ವರ್ಣವಲ್ಲಿಯವರ ಪುತ್ರ ಪ್ರಸಾದ
ರೈಲ್ವೆ ಗುತ್ತಿಗೆದಾರರಾಗಿದ್ದು ಅವರಿಗೆ ಸಮಾಜಸೇವೆ ರಕ್ತಗತವಾಗಿ ಬಂದಿದೆ.
ಕರೊನಾ ಸಂಕಷ್ಟದ ಕಾಲದಲ್ಲಿ ಅವರು ಮಾಡಿದ ಕಾರ್ಯಗಳು ಅವರನ್ನು ಪ್ರಾಣವಾಯು ಒದಗಿಸಿ ಜೀವ ಉಳಿಸಿದ ಆಪದ್ಬಾಂಧವ ಎಂಬ ಕೀರ್ತಿಗೆ ಪಾತ್ರರನ್ನಾಗಿಸಿದೆ. ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಕ್ರೀಡಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನೊಂದವರಿಗೆ ಅಗತ್ಯ ನೆರವು ನೀಡುವ ಮೂಲಕ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ.
ಪ್ರಸಾದ ಅವರ ಸಾಧನೆ, ಸಮಾಜಮುಖಿ ಸೇವೆ ಗಮನಿಸಿ ವಿವಿಧ ಸಂಘ- ಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿ, ಸನ್ಮಾನ, ಬಿರುದುಗಳು ಹುಡುಕಿಕೊಂಡು ಬಂದಿವೆ. ನಿರ್ಮಾಣ ಕ್ಷೇತ್ರದ ಸಾಧನೆಗಾಗಿ ಶ್ರೀಲಂಕಾದ ಕೊಲೊಂಬೊದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆಯಲ್ಲದೇ ನೂರಾರು ಪ್ರಶಸ್ತಿಗಳು ಅವರ ಮುಡಿಗೇರಿದೆ. ಈಗ ರಾಜ್ಯದ ಹಿರಿಮೆಯ ಕರ್ನಾಟಕ ವಿವಿಯ ಗೌರವ ಡಾಕ್ಟರೇಟ ಅವರ ಕೀರ್ತಿ ಕಳಸಕ್ಕೆ ಮತ್ತೊಂದು ದೊಡ್ಡ ರತ್ನವಾಗಿದೆ.
“ಆರಂಭದಲ್ಲಿ ನಾನು ಕೇವಲ 12 ಸಾವಿರ ರೂ. ತಿಂಗಳ ಸಂಬಳದ ನೌಕರಿ ಆರಂಭಿಸಿದ್ದೆ. ಹುಬ್ಬಳ್ಳಿಗೆ ಬಂದ ಬಳಿಕ ಹುಬ್ಬಳ್ಳಿ ಜನರ ಮತ್ತು ಎಲ್ಲರ ಆಶೀರ್ವಾದದಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ಮಾತಿನಂತೆ ದುಡಿಮೆಯನ್ನೇ ನಂಬಿ ಬದುಕಿದ್ದೇನೆ. ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಬಡವರಿಗೆ ಹಾಗೂ ನೊಂದವರಿಗೆ ನೀಡುತ್ತಿದ್ದೇನೆ. ಇದು ಭಗವಂತನ ದೇಣಿಗೆ. ಇದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಭಾವಿಸಿ ಸೇವಾ ಕಾಯಕ ಮುಂದುವರಿಸಿದ್ದೇನೆ”
*ಡಾ. ವಿ.ಎಸ್.ವಿ. ಪ್ರಸಾದ, ಚೇರ್ಮನ್, ಸ್ವರ್ಣ ಸಮೂಹದ ಮುಖ್ಯಸ್ಥ*