ಹೊಸದಿಲ್ಲಿ: ಕರ್ನಾಟಕ ಸರ್ಕಾರ ಹಾಲು, ವಿದ್ಯುತ್ ದರ ಏರಿಕೆ ಮಾಡಿ ಶಾಕ್ ನೀಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 50 ರೂ. ಹೆಚ್ಚಿಸಿದೆ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಇಂದು ಈ ವಿಷಯ ಪ್ರಕಟಿಸಿದ್ದು,
ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಗ್ರಾಹಕರಿಗೆ ಅಲ್ಲದೇ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳು ಮತ್ತು ಫಲಾನುಭವಿಗಳಲ್ಲದವರಿಗೆ ಅನ್ವಯಿಸುತ್ತದೆ.
ಪರಿಷ್ಕೃತ ಬೆಲೆಗಳು ಏಪ್ರಿಲ್ 8 ರಿಂದ ಜಾರಿಗೆ ಬರಲಿವೆ. “ಪಿಎಂಯುವೈ ಫಲಾನುಭವಿಗಳಿಗೆ, ಬೆಲೆ ಪ್ರತಿ ಸಿಲಿಂಡರ್ಗೆ 500 ರೂ.ಗಳಿಂದ 550 ರೂ.ಗಳಿಗೆ ಏರಿಕೆಯಾಗಲಿದೆ. ಇತರ ಗ್ರಾಹಕರಿಗೆ, ಇದು 803 ರೂ.ಗಳಿಂದ 853 ರೂ.ಗಳಿಗೆ ಏರಿಕೆಯಾಗಲಿದೆ” ಎಂದು ಪುರಿ ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸಲ್ ಮೇಲೆ ಕೇಂದ್ರ ಅಬಕಾರಿ ಸುಂಕದಲ್ಲಿ ಎರಡು ರೂ ಏರಿಕೆ ಮಾಡಲಾಗಿರುವ ಸುದ್ದಿ ಬಂದ ಬೆನ್ನಲ್ಲೇ ಜನಸಾಮಾನ್ಯರಿಗೆ ಎಲ್ಪಿಜಿ ಶಾಕ್ ನೀಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವು ಸಬ್ಸಿಡಿ ಅನಿಲ ಬೆಲೆಗಳಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು ಅನುಭವಿಸಿದ 43,000 ಕೋಟಿ ರೂ.ಗಳ ನಷ್ಟವನ್ನು ಸರಿದೂಗಿಸಲು ಸಹಾಯ ಮಾಡುವ ಉದ್ದೇಶವನ್ನು ಇದು ಹೊಂದಿದೆ ಎಂದು ತಿಳಿಸಿದ್ದಾರೆ.