*ಬಿಜೆಪಿ ಭದ್ರಕೋಟೆಯಲ್ಲಿ ಅಲ್ಲೊಲ ಕಲ್ಲೋಲ/ ಮಾ.31ರೊಳಗೆ ಬದಲಿಸದಿದ್ದರೆ ಎ.2ಕ್ಕೆ ಮುಂದಿನ ನಿರ್ಧಾರ : ದಿಂಗಾಲೇಶ್ವರ ಶ್ರೀ*
ಹುಬ್ಬಳ್ಳಿ: ಐದನೇ ಬಾರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೆಂದು ಘೋಷಿಸಲ್ಪಟ್ಟಿರುವ ಪ್ರಭಾವಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರನ್ನು ದಿ.31ರೊಳಗೆ ಬದಲಿಸುವಂತೆ ಇಂದು ಮೂರುಸಾವಿರಮಠದಲ್ಲಿ ನಡೆದ ಲಿಂಗಾಯತ ಮಠಾಧೀಶರ ಚಿಂತನ- ಮಂಥನ ಸಭೆ ಕೇಸರಿ ಹೈಕಮಾಂಡ್ಗೆ ಗಡುವು ನೀಡಿದೆ.
ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು ನೂರಾರು ವೀರಶೈವ ಲಿಂಗಾಯತ ಮಠಾಧೀಶರ ಸಭೆ 12 ನಿರ್ಣಯಗಳನ್ನು ಅಂಗೀಕರಿಸಿದ್ದು ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಗೆಲುವಿನ ಅಂತರದ ಲೆಕ್ಕಾಚಾರದಲ್ಲಿದ್ದ ಕಮಲ ಪಾಳೆಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಯಾಗಿದೆ.
ಚಿಂತನ -ಮಂಥನದ ನೇತೃತ್ವ ವಹಿಸಿದ್ದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾ.31ರೊಳಗೆ ಅಭ್ಯರ್ಥಿ ಬದಲಿಸದೇ ಹೋದಲ್ಲಿ ಏ.2ರಂದು ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರಲ್ಲದೇ ಜೋಶಿಯವರಿಗೆ ಚುನಾವಣೆ ವೇಳೆ ಮಾತ್ರ ಲಿಂಗಾಯತ ಸ್ವಾಮೀಜಿಗಳು ನೆನಪಾಗುತ್ತಾರೆ ಎಂದು ನೇರವಾಗಿ ಕಿಡಿ ಕಾರಿದ್ದಾರೆ.
ಈಗಾಗಲೇ ದಾವಣಗೆರೆ, ಚಿಕ್ಕಬಳ್ಳಾಪುರ ಮುಂತಾದೆಡೆ ಅಭ್ಯರ್ಥಿಗಳ ಬದಲಾವಣೆ ಕೂಗು ಸ್ವ ಪಕ್ಷೀಯರಿಂದ ಸದ್ದು ಮಾಡುತ್ತಿರುವಾಗಲೇ ಇಲ್ಲಿ ಕ್ಷೇತ್ರದ ಬಹುಸಂಖ್ಯಾತ ಮತದಾರರಾದ ಲಿಂಗಾಯತ, ವೀರಶೈವ ಸ್ವಾಮೀಜಿಗಳ ಆಕ್ರೋಶ ಹೊರ ಬಿದ್ದಿದೆ.
ನನ್ನ ಸ್ಪರ್ಧೆಗೆ ಮಠಾಧಿಪತಿಗಳು ಮಹತ್ವದ ಸಲಹೆ ಕೊಟ್ಟಿದ್ದಾರೆ. ಅಭ್ಯರ್ಥಿ ಬಗ್ಗೆ ನಾವಿನ್ನೂ ಯೋಚಿಸಿಲ್ಲ ನಮ್ಮ ಬೇಡಿಕೆ ಜೋಶಿಯವರ ಬದಲಾವಣೆ ಆಗಬೇಕು ,ಮಾಧ್ಯಮದ ಮೂಲಕ ಬಿಜೆಪಿ ಹೈಕಮಾಂಡ್ಗೆ ಮನವಿ ಮಾಡಿದ್ದು ಏಕಸ್ವಾಮ್ಯತೆ ಹೊಂದಿರೋ ಅಭ್ಯರ್ಥಿ ಬದಲಾಗಬೇಕೆಂಬ ವಾದ ನಮ್ಮದು.2ನೇ ತಾರೀಖಿನವರೆಗೆ ಅಭ್ಯರ್ಥಿ ಬಗ್ಗೆ ಮಾತಾಡಲ್ಲ ಎಂದರು.
ನಾವು ಬ್ರಾಹ್ಮಣ ವಿರೋಧಿ ಅಲ್ಲ. ಕೇಂದ್ರ ಸಚಿವರ ವ್ಯಕ್ತಿತ್ವಕ್ಕೆ ವಿರೋಧವಿದೆ ಎಂದ ಅವರು ಈ ಹಿಂದೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದೇ ಪ್ರಹ್ಲಾದ ಜೋಶಿ ಎಂದರಲ್ಲದೇ ಅವರನ್ನು ಇಳಿಸಿ ಇವರೇ ಮುಖ್ಯಮಂತ್ರಿಯಾಗಲು ಹೊರಟಿದ್ದರೆಂದರು.
ಕರೆ ಮಾಡಿದಾಗ ಯಾರೂ ಲಿಂಗಾಯತ ನಾಯಕರಿಲ್ವಾ ಎಂದು ಹೇಳುವ ಜೋಶಿಯವರೇ ಚುನಾವಣೆ ಬಂದಾಗ ಮಾತ್ರ ನಮ್ಮ ಸಮಾಜದ ಮೇಲೆ ಪ್ರೀತಿಯೇಕೆ ಎಂದರಲ್ಲದೇ ಕೇವಲ ಒಂದು ಸಮಾಜ ಅಲ್ಲ. ಬಹಳ ಸಮುದಾಯದವರಿಗೆ ಅನ್ಯಾಯವಾಗಿದ್ದು ಈಗ ಧ್ವನಿ ಎತ್ತಿರುವುದಾಗಿ ಹೇಳಿದರು.
ಕಲಘಟಗಿ ಪಕ್ಷದ ಪ್ರಚಾರದ ಕಾರ್ಯಾಲಯ ಉದ್ಘಾಟನೆಗೆ ಸುಳ್ಳು ಹೇಳಿ ನಮ್ಮ ಸ್ವಾಮಿಗಳನ್ನು ಕರೆದು ತೇಜೋವಧೆ ಮಾಡಿದ್ದನ್ನು ಅಲ್ಲದೇ ಮಗಳ ಮದುವೆಗೆ ಕರೆದು ಕನಿಷ್ಠ ರೀತಿ ನಡೆಸಿಕೊಂಡು ಭಿಕ್ಷುಕರಿಗೆ ಕೊಟ್ಟ ಹಾಗೆ ಕಾಣಿಕೆ ಕೊಟ್ಟಿದ್ದಾರೆಂದು ಆರೋಪಿಸಿದರಲ್ಲದೇ ನಾವು ಪಕ್ಷ ವಿರೋಧಿಗಳಲ್ಲ ವ್ಯಕ್ತಿಯ ವ್ಯಕ್ತಿತ್ವದ ವಿರೋಧಿಗಳು ಎಂದು ದಿಂಗಾಲೇಶ್ವರರು ಪುನರುಚ್ಛರಿಸಿದರು.
ಸಭೆಯಲ್ಲಿ ನೂರಾರು ಸ್ವಾಮೀಜಿಗಳು ಪಾಲ್ಗೊಂಡಿದ್ದು ದಿಂಗಾಲೇಶ್ವರರಿಗೆ ಸ್ಪರ್ಧೆಗಿಳಿಯುವಂತೆ ತೀವ್ರ ಒತ್ತಡ ತಂದಿದ್ದಾರೆನ್ನಲಾಗಿದೆ.ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ವಿಷಯ ಯಾವ ತಿರುವು ಪಡೆಯುತ್ತದೋ ಕಾದು ನೋಡಬೇಕಾಗಿದೆ.
*ಜೋಶಿ ಬದಲಿಸಲ್ಲ:ಬಿಎಸ್ ವೈ*
ಹುಬ್ಬಳ್ಳಿಯಲ್ಲಿ ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ ವೈ, ಸಚಿವ ಪ್ರಹ್ಲಾದ ಜೋಶಿ ಬಗ್ಗೆ ದಿಂಗಾಲೇಶ್ವರ ಸ್ವಾಮೀಜಿ ತಪ್ಪು ಗ್ರಹಿಸಿದ್ದಾರೆ. ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಯಾವುದೇ ಕಾರಣಕ್ಕೂ ಜೋಶಿ ಅವರನ್ನು ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದರ ಹಿಂದೆ ಪ್ರಹ್ಲಾದ ಜೋಶಿ ಅವರ ಪಾತ್ರವಿಲ್ಲ. ದಿಂಗಾಲೇಶ್ವರ ಸ್ವಾಮೀಜಿ ಅವರಲ್ಲಿ ತಪ್ಪು ಗ್ರಹಿಕೆಯಾಗಿದೆ. ಅವರೊಂದಿಗೆ ಖುದ್ದು ನಾನೇ ಮಾತನಾಡಿ ಮನವೊಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬಿಎಸ್ ವೈ ಹೇಳಿದರು.
ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ 150ಕ್ಕೂ ಹೆಚ್ಚು ಶ್ರೀಗಳು ಜೋಶಿ ಅವರನ್ನು ಬದಲಿಸುವಂತೆ ಗಡುವು ನೀಡಿದ್ದಾರಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಎಲ್ಲಾ ಸ್ವಾಮೀಜಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ತಿಳಿಸಿದರು.