*ಎಲ್ಲ ಊಹಾಪೋಹ ವದಂತಿಗಳಿಗೆ ತೆರೆ / ಬೊಮ್ಮಾಯಿಗೆ ಹಾವೇರಿ/ ಪ್ರತಾಪಸಿಂಹ,ಕಟೀಲು,ಡಿವಿಎಸ್ಗೆ ಕೊಕ್ / ಶೆಟ್ಟರ್ಗಿರುವುದು ಇನ್ನು ಬೆಳಗಾವಿಯೊಂದೆ*
ಹುಬ್ಬಳ್ಳಿ : ಲೋಕ ಸಮರಕ್ಕೆ ಬಿಜೆಪಿ ಕರುನಾಡಿನ 20 ಕ್ಷೇತ್ರಗಳಿಗೆ ತನ್ನ ಹುರಿಯಾಳುಗಳನ್ನು ಇಂದು ಪ್ರಕಟಿಸಿದ್ದು ನಿರೀಕ್ಷೆಯಂತೆಯೆ ಪ್ರಧಾನಿ ಮೋದಿ ಸಂಪುಟದ ಕ್ರೀಯಾಶೀಲ ಸಚಿವ ಪ್ರಹ್ಲಾದ ಜೋಶಿ ಐದನೇ ಬಾರಿಗೆ ಧಾರವಾಡದಿಂದ ಕಣಕ್ಕಿಳಿಯಲಿದ್ದು , ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹಾವೇರಿಯಿಂದ ಸ್ಪರ್ಧಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೆಸರು ಧಾರವಾಡ, ಹಾವೇರಿಯಿಂದ ಇತ್ತಾದರೂ ಎರಡೂ ಕ್ಷೇತ್ರಗಳಿಗೆ ಪ್ರಕಟಿಸಿದ್ದು ಬೆಳಗಾವಿಯಿಂದ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ.
ಹಾಲಿ ಸಂಸದರಾದ ಪ್ರತಾಪ ಸಿಂಹ( ಮೈಸೂರು). ಮಾಜಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ( ಮಂಗಳೂರು), ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ( ಬೆಂಗಳೂರು ಉತ್ತರ) , ಸಂಗಣ್ಣ ಕರಡಿ( ಕೊಪ್ಪಳ) ಇವರಿಗೆ ಟಿಕೆಟ್ ನಿರಾಕರಿಸಲಾಗಿದ್ದು ಉಡುಪಿ – ಚಿಕ್ಕಮಗಳೂರು ಬದಲಿಗೆ ಶೋಭಾ ಕರಂದ್ಲಾಜೆಯನ್ನು ಬೆಂಗಳೂರು ಉತ್ತರಕ್ಕೆ ವರ್ಗಾಯಿಸಿದ್ದು, ಉಡುಪಿಯಿಂದ ಕೋಟಾ ಶ್ರೀನಿವಾಸ ಪೂಜಾರಿ ಅಭ್ಯರ್ಥಿಯಾಗಿದ್ದಾರೆ. ಪ್ರತಾಪ ಸಿಂಹ ಬದಲು ರಾಜ ಮನೆತನದ ಕುಡಿಗೆ ಯದುವೀರಗೆ ಮಣೆ ಹಾಕಿದ್ದು, ದಾವಣಗೆರೆಯಲ್ಲಿ ಸಿದ್ದೇಶ್ವರ ಪತ್ನಿಗೆ ಟಿಕೆಟ್ ಭಾಗ್ಯವಾಗಿದೆ.
ಉಳಿದಂತೆ ಟಿಕೆಟ್ ನಿರಾಕರಣೆ ಎನ್ನಲಾಗುತ್ತಿದ್ದ ಅಣ್ಣಾಸಾಹೇಬ ಜೊಲ್ಲೆ, ಭಗವಂತ ಖೂಬಾ,ಗದ್ದಿಗೌಡರ, ಜಿಗಜಿಣಗಿ, ತೇಜಸ್ವಿ ಸೂರ್ಯ ಮುಂತಾದವರಿಗೆ ಮತ್ತೆ ಬಿಜೆಪಿ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.
ಬೆಳಗಾವಿ ಮತ್ತು ಉತ್ತರ ಕನ್ನಡ ಸಸ್ಪೆನ್ಸ್ ಮುಂದುವರಿದಿದ್ದು ಪ್ರಸಕ್ತ ಪಟ್ಟಿ ನೋಡಿದಲ್ಲಿ ಅನಂತಕುಮಾರ ಹೆಗಡೆ ಸ್ಥಾನ ವಂಚಿತರಾಗುವುದು ನಿಶ್ಚಿತ.
ಹಲವು ವದಂತಿ ಊಹಪೋಹಗಳ ಮಧ್ಯೆಯೂ ಜೋಶಿ ಧಾರವಾಡಕ್ಕೆ ನಿಕ್ಕಿ ಎಂಬಂತಿತ್ತಲ್ಲದೇ ಈಗಾಗಲೇ ಕ್ಷೇತ್ರದಾದ್ಯಂತ ಅವರ ಅರ್ಧ ಪ್ರಚಾರವೂ ಮುಗಿದಿದೆ ಎಂದರೆ ತಪ್ಪಾಗಲಾರದು. ಅವರ ಹೆಸರು ಅಂತಿಮಗೊಳ್ಳುತ್ತಿದ್ದಂತೆಯೇ ಪಟಾಕಿ ಸದ್ದು ಹುಬ್ಬಳ್ಳಿಯಲ್ಲಿ ಮುಗಿಲು ಮುಟ್ಟಿದೆ.
ಕಾಂಗ್ರೆಸ್ನಿಂದ ಯಾರು ಅಭ್ಯರ್ಥಿ ಎಂಬುದು ಅಂತಿಮಗೊಂಡಿಲ್ಲವಾಗಿದ್ದು ಒಬಿಸಿಗೆ ನೀಡಿದಲ್ಲಿ ವಿನೋದ ಅಸೂಟಿ, ಬಹು ಸಂಖ್ಯಾತರಿಗೆ ನೀಡಿದಲ್ಲಿ ಶಿವಲೀಲಾ ಕುಲಕರ್ಣಿ ಅಥವಾ ಮೋಹನ ಲಿಂಬಿಕಾಯಿ ಅಂತಿಮವಾಗಬಹುದು.
*ಪಕ್ಷದ ನಾಯಕರ-ಜನರ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ*
ಟಿಕೆಟ್ ನಿರೀಕ್ಷೆಯಂತೆ ಸತತ 5ನೇ ಬಾರಿ ತಮಗೆ ಸಿಕ್ಕಿದ್ದು, ಸರ್ವರ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿರುವೆ ಎಂದು ಸಚಿವ ಪ್ರಹ್ಲಾದ ಜೋಶಿ ಟ್ವಿಟ್ ಮಾಡಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳಿಂದ ಧಾರವಾಡ ಲೋಕಸಭಾ ಕ್ಷೇತ್ರದ ಜನರ ಪ್ರೀತಿ, ಆಶೀರ್ವಾದ ಮತ್ತು ಪಕ್ಷ ನಿಷ್ಠೆಗೆ ಪೂರಕವಾಗಿ ಸರ್ವ ರೀತಿಯ ಕೆಲಸ ಮಾಡುತ್ತಾ ಬಂದ ನನಗೆ ಪಕ್ಷದ ಹೈಕಮಾಂಡ್ ಮತ್ತೆ ಟಿಕೆಟ್ ನೀಡುವ ಮೂಲಕ ಅಭಿವೃದ್ಧಿ ಹೊಣೆಗಾರಿಕೆ ನೀಡಿದೆ ಎಂದು ಹೇಳಿದ್ದಾರೆ.
ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಸಚಿವನಾಗಿ ಪ್ರಮುಖ ಖಾತೆಗಳನ್ನು ನಿರ್ವಹಿಸುವ ಅವಕಾಶ ದೊರೆತಿದ್ದು, ಕಿಂಚಿತ್ತೂ ಸಮಸ್ಯೆಯಾಗದಂತೆ ಸೇವೆ ಸಲ್ಲಿಸಿದ್ದೇನೆ ಎಂದು ಪ್ರಹ್ಲಾದ ಜೋಶಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.