*ಡಾ.ನಾಲವಾಡ ಮತ್ತೆ ಘರ್ ವಾಪ್ಸಿ ಸಾಧ್ಯತೆ/ *ಶರೀಫರ ಜಾತ್ರಾ ಮಹೋತ್ಸವದಲ್ಲಿ ಡೋಲು ಬಾರಿಸಿದ ಜೋಶಿ*
ಹುಬ್ಬಳ್ಳಿ : ಧಾರವಾಡ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಪ್ರಹ್ಲಾದ ಜೋಶಿಯವರು ಐದನೇ ಗೆಲುವನ್ನು 4 ಲಕ್ಷಕ್ಕೂ ಹೆಚ್ಚು ಅಂತರದಿಂದ ಜಯಿಸಿ ಸ್ಮರಣೀಯವಾಗಿಸಲು ಈಗಾಗಲೇ ಟೆಂಪಲ್ ರನ್, ಪ್ರಮುಖರ ಸಭೆ , ಸಮುದಾಯಗಳ ಸಭೆ ನಡೆಸುವ ಮೂಲಕ ಆರಂಭಿಸಿದ್ದು ಅವರಿಗೆ ಸೆಡ್ಡು ಹೊಡೆಯುವ ಕಾಂಗ್ರೆಸ್ ಹುರಿಯಾಳು ಯಾರು ಎಂಬುದು ಬಹುಶಃ ನಾಳೆ ಅಂತಿಮಗೊಳ್ಳಲಿದೆ.
ಇಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿ ಅಂತಿಮಗೊಳ್ಳುವುದು ಪಕ್ಕಾ ಎನ್ನಲಾಗಿದ್ದು, ಹಿಂದುಳಿದ ವರ್ಗದ ಕೋಟಾದಡಿ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ವಿನೋದ ಅಸೂಟಿ ಅಥವಾ ಶಾಸಕ ವಿನಯ ಕುಲಕರ್ಣಿಯವರ ಪತ್ನಿ ಶಿವಲೀಲಾ ಕುಲಕರ್ಣಿ ಇಬ್ಬರಲ್ಲೊಬ್ಬರು ನಿಕ್ಕಿ ಎಂಬ ಮಾತು ಕೇಳಿ ಬಂದಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಹುಬ್ಬಳ್ಳಿ ಸೆಂಟ್ರಲ್ದಲ್ಲಿ ಮತ್ತು ಪ್ರಸಕ್ತ ಲೋಕ ಚುನಾವಣೆಯಲ್ಲಿ ಹಾವೇರಿಗೆ ಸರ್ವ ಸಿದ್ದತೆ ಮಾಡಿಕೊಂಡಿದ್ದ ಕಾಂಗ್ರೆಸ್ ಮೂಲದವರೇ ಆದ 2018ರಲ್ಲಿ ಶೆಟ್ಟರ್ ವಿರುದ್ದ 54ಸಾವಿರ ಮತ ಪಡೆದ ಡಾ.ಮಹೇಶ ನಾಲವಾಡ ಮತ್ತೆ ಕೈ ಪಾಳೆಯದ ಕದ ಬಡಿಯಲಾರಂಬಿಸಿದ್ದಾರೆ.
ಸಚಿವ ಎಂ.ಬಿ.ಪಾಟೀಲರ ಮೂಲಕ ಲಾಭಿ ಮಾಡಿದ್ದರೂ ಈ ಅಂತಿಮ ಕ್ಷಣದಲ್ಲಿ ಟಿಕೆಟ್ ಕಷ್ಟ ಎಂಬ ಮಾತು ಕೇಳಿ ಬಂದಿದೆ. ಮತ್ತೆ ನಾಲವಾಡ ಘರ ವಾಪ್ಸಿ ಆದರೂ ಆಶ್ಚರ್ಯವಿಲ್ಲ.
ನೆರೆಯ ಉತ್ತರ ಕನ್ನಡಕ್ಕೆ ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ, ಬೆಳಗಾವಿಗೆ ಮೃಣಾಲ ಹೆಬ್ಬಾಳ್ಕರ, ಚಿಕ್ಕೋಡಿಗೆ ಪ್ರಿಯಾಂಕಾ ಜಾರಕಿಹೊಳಿ ಅಂತಿಮಗೊಳ್ಳುವುದು ಖಚಿತವಾಗಿದ್ದು ನಾಳೆ ಸಂಜೆಯೊಳಗೆ ಬಿಡುಗಡೆಯಾಗಬೇಕಾದ 21ರ ಪೈಕಿ ಕನಿಷ್ಠ 18ಪ್ರಕಟವಾಗಬಹುದು ಎಂಬ ಸುಳಿವನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೀಡಿದ್ದಾರೆ.
ಹುಬ್ಬಳ್ಳಿಯ ಮಾಜಿ ಸಿಎಂ ಜಗದೀಶ ಶೆಟ್ಟರ್ಗೆ ಬೆಳಗಾವಿಯ ಬಿಜೆಪಿ ಟಿಕೆಟ್ ಪಕ್ಕಾ ಎನ್ನಲಾಗುತ್ತಿದ್ದರೂ ಸ್ಥಳೀಯರಿಗೆ ನೀಡಬೇಕೆಂಬ ಕೂಗು ಬಲವಾಗಿ ಎದ್ದಿದೆ.
ಶಿಗ್ಗಾವಿಯಲ್ಲಿ ಇಂದು ಜರುಗಿದ ಸಂತ ಶಿಶುನಾಳ ಶರೀಫ ಶಿವಯೋಗೀಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಪಾಲ್ಗೊಂಡು ಪೂಜೆ ಸಲ್ಲಿಸಿಜಾತ್ರಾ ಮಹೋತ್ಸವದಲ್ಲಿ ಡೋಲು ಬಾರಿಸಿ ಭಾಕ್ತರೊಡಗುಡಿ ಸಂಭ್ರಮಿಸಿದರು.