*ನಾಡಿದ್ದು ದಿಂಗಾಲೇಶ್ವರ ಸ್ವಾಮೀಜಿಗೆ ಭವ್ಯ ಸ್ವಾಗತ- 17ರಂದು ನಾಮಪತ್ರ / ಮುಂದುವರಿದ ಜೋಶಿ, ಮಠ, ಟೆಂಪಲ್ ರನ್ / ಲಾಡ್ರಿಂದಲೂ ಅಸೂಟಿ ಪರ ಮತಬೇಟೆ*
ಹುಬ್ಬಳ್ಳಿ : ಶಿರಹಟ್ಟಿ ಭಾವೈಕ್ಯತಾ ಸಂಸ್ಥಾನ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯ ಘೋಷಣೆಯೊಂದಿಗೆ ಧಾರವಾಡ ಲೋಕಸಭಾ ಕಣದ ಚಿತ್ರಣವೇ ಬದಲಾಗಿದ್ದು , ಐದನೇ ಬಾರಿ ಕಣದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಅಶ್ವಮೇಧದ ಕುದುರಗೆ ಸಣ್ಣ ಲಗಾಮು ಬಿದ್ದಿದ್ದು,ಪ್ರತಿ ಸಾರಿಯೂ ಕಮಲ – ನಡುವಣ ಪೈಪೋಟಿಯಾಗಿ ಉಳಿಯುತ್ತಿದ್ದ ಕ್ಷೇತ್ರದಲ್ಲಿ ಮಠಾಧಿಪತಿಗಳು ಅಖಾಡಕ್ಕೆ ಇಳಿದಿದ್ದರಿಂದ ಎಲ್ಲ ಲೆಕ್ಕಾಚಾರಗಳು ತಿರುವು ಮುರುವಾಗುವ ಸಾಧ್ಯತೆಗಳಿವೆ.
ಪ್ರತಿ ಬಾರಿಯೂ ಕ್ಷೇತ್ರದಾದ್ಯಂತ ಇರುವ ಪ್ರಭಲ ವೀರಶೈವ ಲಿಂಗಾಯತ ಸಮುದಾಯ ಬಹುತೇಕ ಬಿಜೆಪಿ ಅಭ್ಯರ್ಥಿ ಬೆಂಬಲಿಸುತ್ತಲೆ ಬಂದಿದ್ದು ಈ ಬಾರಿ ಸುಮಾರು ೬ ಲಕ್ಷ ಮತದಾರರಿರುವ ಬಹುಸಂಖ್ಯಾತರು ಯಾರ ಕಡೆಗೆ ವಾಲಲಿದ್ದಾರೆಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದೆ.
ಇನ್ನೊಂದೆಡೆ ಪ್ರಹ್ಲಾದ ಜೋಶೀಯವರು ದಿಂಗಾಲೇಶ್ವರ ಹೇಳಿಕೆ ತಮಗೆ ಆಶೀರ್ವಾದ ಎಂದೆನ್ನುತ್ತಲೆ ಕಳೆದೆರಡು ದಿನಗಳಿಂದ ಕ್ಷೇತ್ರದ ಸಮಸ್ತ ಲಿಂಗಾಯತ ಮಠಗಳಿಗೆ, ದೇವಸ್ಥಾನ, ಯುಗಾದಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ವಿವಿಧ ಸಮುದಾಯಗಳ ಜತೆ ಸಭೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಸ್ಪರ್ಧೆಯ ಘೋಷಣೆಯ ನಂತರ ದಿಂಗಾಲೇಶ್ವರ ಸ್ವಾಮೀಜಿ ನಾಡಿದ್ದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು ಭವ್ಯ ಸ್ವಾಗತ ನೀಡಲು ಭಕ್ತರು ಸಿದ್ಧತೆ ನಡೆಸಿದ್ದಾರೆ. ದಿ. 11ರಂದು ಸಂಜೆ ೪ ಗಂಟೆಗೆ ನೆಹರೂ ಮೈದಾನದಿಂದ ಮೂರು ಸಾವಿರ ಮಠದವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲು ಸಿದ್ಧತೆ ನಡೆಸಿದ್ದು ದಿ. 17ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆನ್ನಲಾಗುತ್ತಿದೆ.
ನೂರಾರು ಸ್ವಾಮೀಜಿಗಳು ಧಾರವಾಡ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಗೆ ತೆರಳಿ ಮತ ಜೋಳಿಗೆ ಹಾಕಲು ಸಿದ್ದರಿದ್ದರೂ ತಪ್ಪು ಸಂದೇಶ ಹೋಗಬಾರದೆನ್ನುವ ಹಿನ್ನೆಲೆಯಲ್ಲಿ ಯಾರೂ ಬೇಡ ನಿಮ್ಮ ಹಾರೈಕೆ ಇರಲಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟ ವಿನಂತಿ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಕೈ ಅಭ್ಯರ್ಥಿ ವಿನೋದ ಅಸೂಟಿ ಪರ ಎನ್ ಎಸ್ ಯುಐ, ವಕೀಲರ ಸಂಘದ ಪದಾಧಿಕಾರಿಗಳು, ಅಲ್ಲದೇ ವಿವಿಧ ಸಂಘಟನೆಗಳ ಮುಖಂಡರ ಜತೆ ಸಭೆ ನಡೆಸಿ ಮತ ಬೇಟೆ ಮುಂದುವರಿಸಿದ್ದಾರೆ.
ಇನ್ನೊಂದೆಡೆ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿರುವ ಕೇಂದ್ರ ಸಚಿವ ಜೋಶಿ ಸೋಷಿಯಲ್ ಮೀಡಿಯಾ ಓಪನ್ ಫೀಲ್ಡ್. ಅದರಲ್ಲಿ ಪರ-ವಿರೋಧ ಸಾಮಾನ್ಯ. ಅದರ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲಾರೆ ಎಂದು ಹೇಳಿದರು.
ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ, ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದು ಖಡಾ ಖಂಡಿತವಾಗಿಯೇ ಹೇಳಿದರು.
ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಅಭ್ಯರ್ಥಿ, ಪಕ್ಷದ ಪರ-ವಿರೋಧ ಚರ್ಚೆ ಆಗುತ್ತಲೇ ಇರುತ್ತದೆ. ಅನೇಕರು ನಮ್ಮ ಪರ ಹೊಳೋರು ಇರ್ತಾರೆ, ವಿರೋಧ ಪಕ್ಷ ಪರ ಹೇಳೋರು ಇರುತ್ತಾರೆ. ಹಾಗಾಗಿ ಅದರ ಬಗ್ಗೆ ಏನೂ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಸೇರಿದಂತೆ ರಾಜ್ಯದ ಅನೇಕ ಕಡೆ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರಾದ
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರೆಲ್ಲ ಬರುತ್ತಾರೆ ಎಂದು ತಿಳಿಸಿದರು.
ಯಾರ್ಯಾರು ಯಾವಾಗ ಲಭ್ಯ ವಾಗುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಬೇರೆ ಬೇರೆ ರಾಜ್ಯಗಳಿಗೂ ತೆರಳುವುದರಿಂದ ಕರ್ನಾಟಕದ ಕೆಲ ಕ್ಷೇತ್ರಗಳಿಗೆ ಪ್ರಚಾರಕ್ಕೆ ಯಾವತ್ತು? ಎಂಬ ದಿನ ನಿಗದಿಯಾಗಿಲ್ಲ ಎಂದು ಸಚಿವ ಜೋಶಿ ಸ್ಪಷ್ಟ ಪಡಿಸಿದರು.
*ಸಕಾರಾತ್ಮಕ ಸುದ್ದಿಗಳ ‘ಕನ್ನಡ ಧ್ವನಿ’ ವತಿಯಿಂದ ನಮ್ಮೆಲ್ಲಾ ವೀಕ್ಷಕರಿಗೆ, ಹಿತೈಷಿಗಳಿಗೆ ಹೃತ್ಪೂರ್ವಕ ಶುಭಾಶಯಗಳು*