*ನಾಳೆ ಬೀದರ್ ನಲ್ಲಿ ಅಕಾಡೆಮಿ ವತಿಯಿಂದ ಪ್ರಶಸ್ತಿ ಪ್ರದಾನ*
ಹುಬ್ಬಳ್ಳಿ : ಬಾಲ್ಯದಲ್ಲಿ ದನ ಮೇಯಿಸುತ್ತ, ಹಾಡುಗಳನ್ನು ಹಾಡುತ್ತ ಸ್ವಚ್ಛಂದ ಬಾಲ್ಯವನ್ನು ಮನಃಪೂರ್ವಕವಾಗಿ ಅನುಭವಿಸಿದ ವ್ಯಕ್ತಿಯೊಬ್ಬ ರಾಷ್ಟ್ರಮಟ್ಟದ ಕಲಾವಿದರಾಗಿ ಬೆಳೆದು ನಿಂತಿದ್ದು, 2023ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಗೌರವಕ್ಕೂ ಪಾತ್ರರಾಗಿರುವ ಅವರು ನಾಳೆ( ದಿ.15) ಬೀದರದಲ್ಲಿ ನಡೆಯುವ ರಾಜ್ಯಮಟ್ಟದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕೈಯಲ್ಲಿ ದಫಲಿ ಹಿಡಿದು ಅದನ್ನು ನಾದಮಯವಾಗಿ ಬಾರಿಸುತ್ತ ಆ ನಾದಕ್ಕೆತಕ್ಕಂತೆ ಹಾಡುಗಳನ್ನು ಕಟ್ಟಿ, ಹಾಡುವ ಮೂಲಕ ಜನಪದ ಕಲೆಯನ್ನು ಉಸಿರನ್ನಾಗಿಸಿಕೊಂಡೇ ಬೆಳೆದವರು ಡಾ. ರಾಮು ಮೂಲಗಿ . ಒಂದರ್ಥದಲ್ಲಿ ಜನಪದ ಖಣಿ ಎಂದರೆ ತಪ್ಪಾಗಲಾರದು.
ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಪ್ರಸಕ್ತ ವಿಶ್ರಾಂತಜೀವನ ನಡೆಸುತ್ತಿರುವ ರಾಮಣ್ಣ ಮಾಸ್ತರ ಎಂದೇ ಪರಿಚಿತರಾಗಿರುವ ಡಾ. ರಾಮು ಮೂಲಗಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಶಿಗ್ಗಾವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹುಬ್ಬಳ್ಳಿಯ ನೆಹರೂ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಡಾ. ಮೂಲಗಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಪ್ರಸಾರ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಕೇಂದ್ರ ಮತ್ತುರಾಜ್ಯ ಸರ್ಕಾರದ ವಿವಿಧ ಸರ್ಕಾರಿ ಕಾರ್ಯಕ್ರಮಗಳನ್ನು ಬಹು ಪ್ರಚಾರಾಂದೋಲನದ ಮೂಲಕ ಜನರಿಗೆ ತಲುಪಿಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ, ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದರ ಮಹತ್ವ, ಶುದ್ಧ ಕುಡಿಯುವ ನೀರಿನ ಬಳಕೆಗೆ ಒತ್ತು, ಶೌಚಾಲಯ ಬಳಕೆಯಿಂದಾಗುವ ಪ್ರಯೋಜನಗಳು, ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ನಿರ್ಮಾಣ, ಹೊಗೆರಹಿತ ಒಲೆಗಳ ಬಳಕೆ, ಪರಿಸರ ಸ್ನೇಹಿ ಇಂಧನಗಳ ಬಳಕೆ, ಕಾರ್ಮಿಕರ ಹಕ್ಕುಗಳು, ಸಾರ್ವಜನಿಕ ಸಾರಿಗೆ ಬಳಸುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ, ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಜನಪದ ಹಾಡುಗಳು, ಗೀಗಿ ಪದ, ಹಂತಿ ಪದ, ಚೌಡಕಿ ಪದಗಳು, ಸೋಬಾನೆ ಪದ, ಕುಟ್ಟುವ, ಬೀಸುವ ಪದಗಳು, ಲಾವಣಿ ಹಾಡುಗಳು, ಬೀದಿ ನಾಟಕಗಳು, ಏಕಾಂಕ ನಾಟಕಗಳು, ಸಂಗೀತರೂಪಕ ಹೀಗೆ ಹತ್ತು ಹಲವು ಮಾಧ್ಯಮಗಳನ್ನು ಬಳಸಿ ಸರ್ಕಾರಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ತಮ್ಮ ತಂಡದೊಂದಿಗೆ ಹಳ್ಳಿ ಹಳ್ಳಿಗೆ ತಿರುಗಿ ಜಾಗೃತಿ ಮೂಡಿಸಿದ್ದಾರೆ.
ಧಾರವಾಡ ಜಿಲ್ಲೆಯ ಜನಪದ ಸಂಪ್ರದಾಯಗಳು ಎಂಬ ಸಂಶೋಧನಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದು, ಈ ಕೃತಿಯಲ್ಲದೇ ಮೂಗುತಿ ಮುಂಭಾರ, ಹಾನಗಲ್ ಕುಮಾರ ಸ್ವಾಮಿಗಳು, ಭಕ್ತಿಗೀತೆಗಳು, ಮುಕ್ತಿಮಂದಿರ ಮಹರ್ಷಿ ಜೀವನ- ಕವನ, ಜನಪದ ಹೆಬ್ಬುಲಿ ಮೊದಲಾದ 10ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇದಲ್ಲದೆ ಅದರಗುಂಚಿ ಶಂಕರಗೌಡರು, ಹಳ್ಳಿಯ ಆಟಗಳು ಎಂಬ ಎರಡು ಕೃತಿಗಳು ಮುದ್ರಣಕ್ಕೆ ಸಿದ್ಧಗೊಂಡಿವೆ.
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಸುಮಾರು 150ಕ್ಕೂ ಹೆಚ್ಚು ಆಡಿಯೋ, ವಿಡಿಯೋಗಳನ್ನು ಯುಟ್ಯೂಬ್ ಚಾನೆಲ್ಗಳ ಮೂಲಕ ಪ್ರಸಾರ ಮಾಡಿ ಮಹಾಮಾರಿಯ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಡಾ. ರಾಮು ಮೂಲಗಿ ಶ್ರಮಿಸಿದ್ದಾರೆ.
ಮನೆ ಮನೆಯಲ್ಲಿ ಶ್ರಾವಣ ಜಾನಪದ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ಜನಪದ ಹಾಡುಗಳು ಮತ್ತು ಆಚರಣೆಯ ಮಹತ್ವವನ್ನು ಮನಮುಟ್ಟುವಂತೆ ಜನರಿಗೆ ಪರಿಚಯಿಸಿದ ಕೀರ್ತಿ ಡಾ. ಮೂಲಗಿ ಅವರದು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ ಹುಬ್ಬಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಮತ್ತು ಹುಬ್ಬಳ್ಳಿಯಲ್ಲಿ ಜಾನಪದ ಜಗತ್ತು ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಕಳೆದ ನಾಲ್ಕೈದು ದಶಕಗಳಿಂದ ಜನಪದ ಹಾಡುಗಳ ಮೂಲಕ ಜನಪದ ಸಂಸ್ಕೃತಿಯನ್ನುಎತ್ತಿ ಹಿಡಿಯುತ್ತಿರುವ ಡಾ. ರಾಮು ಅವರಿಗೆ ಕನ್ನಡ ಪ್ರಭ ವರ್ಷದ ವ್ಯಕ್ತಿ ಪುರಸ್ಕಾರ (2008), ಹು-ಧಾ ಮಹಾನಗರ ಪಾಲಿಕೆ ನೀಡುವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ.
ಇವೆಲ್ಲವುಗಳಿಗೆ ಕಿರೀಟಪ್ರಾಯ ಎಂಬಂತೆ 2011ರಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ. ಮೂಲಗಿಯವರು ಕಳೆದ 10 ವರ್ಷಗಳಿಂದ 55ಅನಾಥ ಮಕ್ಕಳಿಗೆ ಉಚಿತ ಪ್ರಸಾದ ನಿಲಯವನ್ನು ನಡೆಸುತ್ತಿದ್ದಾರೆ. ಇದಕ್ಕಾಗಿ ಸರ್ಕಾರದ ನೆರವು ಅಪೇಕ್ಷೆ ಪಡದೇತಾವು ವಿವಿಧೆಡೆ ಕಾರ್ಯಕ್ರಮಗಳನ್ನು ನೀಡಿದ ಸಂದರ್ಭದಲ್ಲಿ ಬಂದ ಸಂಭಾವನೆ ಹಣವನ್ನೇ ಅನಾಥ ಮಕ್ಕಳ ಪ್ರಸಾದ ನಿಲಯ ಹಾಗೂ ಅವರ ಶಿಕ್ಷಣಕ್ಕಾಗಿ ಬಳಸುತ್ತಿದ್ದಾರೆ.
ಹೀಗೆ ಜನಪದ ಜಗತ್ತನ್ನೇ ತಮ್ಮ ಜಗತ್ತನ್ನಾಗಿ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಡಾ. ಮೂಲಗಿ ಅಪರೂಪದ ಸಾಧಕ.