*ಬೊಮ್ಮಾಯಿ ಶಕ್ತಿ ಪ್ರದರ್ಶನ* / *ಯಾಸೀರ್ ಕಾರಿನ ಮೇಲೆ ಕಲ್ಲು ತೂರಾಟ* /*ಚನ್ನಪಟ್ಟಣದಲ್ಲಿ ನಿಖಿಲ್ ಅಬ್ಬರದ ರೋಡ ಶೋ, ಸಂಡೂರಲ್ಲಿ ಲಾಡ್ – ರೆಡ್ಡಿ ಮುಖಾಮುಖಿ*
ಹುಬ್ಬಳ್ಳಿ : ರಾಜ್ಯದ ಶಿಗ್ಗಾಂವಿ,ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಈ ತಿಂಗಳ ೧೩ ರಂದು ಮತದಾನ ನಡೆಯಲಿದ್ದು, ಮಿನಿಸಮರದ ನಾಮಪತ್ರ ಸಲ್ಲಿಕೆ ಇಂದು ಕೊನೆಗೊಂಡಿದ್ದು ಇನ್ನಿಲ್ಲದ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ಲಕ್ಷಣಗಳು ಇವೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾದ ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕುಟುಂಬದ ಮೂರನೇ ಕುಡಿ ಭರತ್ ಕಣಕ್ಕಿಳಿದಿದ್ದು ಇಂದು ಭರ್ಜರಿ ರೋಡ ಶೋ ಮೂಲಕ ಬಂದು ಉಮೇದುವಾರಿಕೆ ಸಲ್ಲಿಸಿದ್ದಾರೆ. ಇನ್ನೊಂದೆಡೆ ಕಳೆದ ಬಾರಿ ಬಸವರಾಜ ಬೊಮ್ಮಾಯಿ ವಿರುದ್ಧ ಸೋಲು ಕಂಡಿದ್ದ ಯಾಸಿರ ಖಾನ ಪಠಾಣಗೆ ಕಾಂಗ್ರೆಸ್ ಮತ್ತೆ ಮಣೆ ಹಾಕಿದ್ದು ಅವರು ಇಂದು ನಾಮಪತ್ರ ಸಲ್ಲಿಸಿದ್ದು ಬೃಹತ್ ಮೆರವಣಿಗೆ ನಡೆಸಿದ್ದಾರೆ. ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಬಂಡಾಯ ಕೈ ಪಾಳೆಯಕ್ಕೆ ತುಟ್ಟಿಯಾಗುವ ಸಾಧ್ಯತೆಗಳಿವೆ.
ಸಚಿವ ಜಮೀರ ಅಹ್ಮದ ಖಾನ ಶಿಗ್ಗಾಂವಿಗೆ ಆಗಮಿಸಿ ಸಂಧಾನದ ಯತ್ನ ಮಾಡಿದರೂ ವಿಫಲವಾಗಿದ್ದು, ಬೆಂಬಲಿಗರ ಒತ್ತಾಯಕ್ಕೆ ಮಣಿದು ಅಂತಿಮ ಕ್ಷಣದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರಲ್ಲದೇ ಇನ್ನೊಂದೆಡೆ ಖಾದ್ರಿ ಬೆಂಬಲಿಗರು ಪಠಾಣ ವಾಹನದ ಮೇಲೆ ಕಲ್ಲು ತೂರಾಟ ಸಹ ನಡೆಸಿದ್ದಾರೆನ್ನಲಾಗಿದೆ.
ಬೆಳಿಗ್ಗೆಯಿಂದ ಹುಲಗೂರಿನ ಖಾದ್ರಿ ನಿವಾಸದಲ್ಲಿ ಸಾವಿರಾರು ಕಾರ್ಯಕರ್ತರು ಜಮಾಯಿಸಿ ಪಕ್ಷೇತರರಾಗುವಂತೆ ಒತ್ತಡ ಹೇರಿದ್ದರ ಪರಿಣಾಮ ನಾಮಪತ್ರ ಸಲ್ಲಿಸಿದ್ದು ಅವರು ಕಣದಲ್ಲೇ ಉಳಿದಲ್ಲಿ ಅಲ್ಪಸಂಖ್ಯಾತರ ಮತ ವಿಭಜನೆ ಖಂಡಿತ. ಬಿಜೆಪಿ ಅದನ್ನೇ ಎದುರು ನೋಡುತ್ತಿದೆ. ಮತ್ತೊಂದೆಡೆ ಕೊನೆಯ ಕ್ಷಣದವರೆಗೂ ರೇಸ್ನಲ್ಲಿದ್ದ ರಾಜು ಕುನ್ನೂರಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ ಅಂತಿಮ ಕ್ಷಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದ್ದು ಮತ್ತಷ್ಟು ರಂಗೇರುವಂತೆ ಮಾಡಿದ್ದಾರೆ.
ದಿ.ಎಸ್.ಆರ್.ಬೊಮ್ಮಾಯಿ ಪುತ್ರ ಮಾಜಿ ಮುಖ್ಯಮಂತ್ರಿ ಬಸವರಾಜಗೆ ಚೊಚ್ಚಲ ಚುನಾವಣೆ ಸೋಲಿನ ಕಹಿಯನ್ನೇ 1994ರಲ್ಲಿ ಜಗದೀಶ ಶೆಟ್ಟರ್ ವಿರುದ್ಧ ನೀಡಿತ್ತು. ಅಂತಹ ಘಟನೆ ಮರುಕಳಿಸಬಾರದೆಂದು ತಂತ್ರ ಹೆಣೆಯುತ್ತಿದ್ದರೂ ಕಳೆದೆರಡು ಚುನಾವಣೆಗಳಲ್ಲಿ ಬೊಮ್ಮಾಯಿ ಹಿಂದಿನ ಶಕ್ತಿಯಾಗಿದ್ದ ಶ್ರೀಕಾಂತ ದುಂಡಿಗೌಡ್ರ ತಟಸ್ಥ ನಿಲುವು ಘೋಷಿಸಿ ಇಂದು ನಾಮಪತ್ರದಿಂದ ದೂರವುಳಿದಿದ್ದು ಒಳ ಹೊಡೆತ ಗ್ಯಾರಂಟಿ ಎನ್ನಲಾಗುತ್ತಿದೆ.
ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ. ಸಿ.ಸಿ.ಪಾಟೀಲ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಿವಕುಮಾರ ಉದಾಸಿ, ಭೈರತಿ ಬಸವರಾಜ ಸೇರಿದಂತೆ ಘಟಾನುಘಟಿಗಳು ಭಾಗಿಯಾಗಿದ್ದಾರೆ. ಬೆಳಿಗ್ಗೆ ಕೆಲ ಕಾಲ ಬಿಜೆಪಿ ಮತ್ತು ಕೆಆರ್ಎಸ್ ಪಕ್ಷದ ನಡುವೆ ಬ್ಯಾನರ್ ಹರಿದ ಬಗೆಗೆ ಕೆಲ ಕಾಲ ಶಿಗ್ಗಾಂವಿಯಲ್ಲಿ ಗಲಾಟೆಯಾಗಿತ್ತು.
ಇನ್ನೊಂದಡೆ ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಕುಡಿಯಾದ ನಿಖಿಲ್ಕುಮಾರಸ್ವಾಮಿ ಮತ್ತು ಯೋಗೇಶ್ವರ ಫೈಟ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇಂದು ಅಬ್ಬರದ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದು ಎರಡು ಸೋಲಿನಿಂದ ಕಂಗೆಟ್ಟಿರುವ ನಿಖಿಲ ಗೆಲುವಿಗೆ ಕುಮಾರ ಸ್ವಾಮಿ ವ್ಯಾಪಕ ತಂತ್ರ ಹೆಣೆದಿದ್ದಾರೆ.
ಸಂಡೂರಿನಲ್ಲೂ ಸಂಸದ ತುಕರಾಮ್ ರವರ ಪತ್ನಿ ಅನ್ನಪೂರ್ಣ ಕೈ ಅಭ್ಯರ್ಥಿಯಾಗಿದ್ದು, ಬಂಗಾರು ಹನುಮಂತು ಸೆಡ್ಡು ಹೊಡೆದಿದ್ದಾರೆ. ಇಲ್ಲಿ ಸಂತೋಷ ಲಾಡ್ ಮತ್ತು ಜನಾರ್ಧನ ರೆಡ್ಡಿ ನಡುವಣ ಗುದ್ದಾಟದಲ್ಲಿ ಯಾರು ಗೆಲ್ಲುತ್ತಾರೆ ಕಾದು ನೋಡಬೇಕಾಗಿದೆ.
ಬಿಜೆಪಿ ಏಜೆಂಟ್ : ತಮಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಮಾಧ್ಯಮದವರೊಂದಿಗೆ ಮಾತನಾಡಿ ಯಾಸೀರ್ ಬಿಜೆಪಿ ಏಜೆಂಟ್ ಎಂದು ಆರೋಪಿಸಿದ್ದಾರೆ.
*ದಿನದ ಮಹತ್ವದ ಸುದ್ದಿ*
1) *ಹುಬ್ಬಳ್ಳಿ ಬೆಂಡಿಗೇರಿ ಪೊಲೀಸರು ಫಯಾಜ್ ಅಲಿಯಾಸ್ ಶ್ಯಾಂಪೂ ತೊರೆವಾಲೆ ಎಂಬ ನೇಕಾರನಗರದ ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿ 6 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ*.
2) *ಪುಣೆ ಟೆಸ್ಟನಲ್ಲೂ ಭಾರತದ ಬ್ಯಾಟ್ಸಮನ್ಗಳಿಗೆ ನ್ಯೂಜಿಲೆಂಡ್ ಬೌಲರ್ಗಳು ಕಿವಿ ಹಿಂಡಿದ್ದು ಕೇವಲ 156 ಓಟಗಳಿಗೆ ಸರ್ವಪತನ ಕಂಡು 103 ರನ್ನುಗಳ ಹಿನ್ನೆಡೆ ಅನುಭವಿಸಿದೆ. ದ್ವಿತಿಯ ಇನ್ನಿಂಗ್ಸ್ನಲ್ಲಿ ಪ್ರವಾಸಿ ತಂಡ ಐದು ವಿಕೆಟ್ ನಷ್ಟಕ್ಕೆ 198 ರನ್ನು ಗಳಿಸಿದ್ದು ಒಟ್ಟಾರೆ 301ರನ್ನುಗಳ ಮುನ್ನಡೆಯಲ್ಲಿದೆ*.
3) *ಕುಟುಂಬ ರಾಜಕಾರಣ ಎಂದು ಹೇಳುತ್ತಿದ್ದ ಬಿಜೆಪಿಯವರು ಏನು ಮಾಡುತ್ತಿದ್ದಾರೆ.ಇನ್ನು ಮುಂದೆ ಇಂತಹ ಹೇಳಿಕೆ ಕೊಡುವ ಮೊದಲು ಯೋಚಸಲಿ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ*.
4) *ಒಡಿಸ್ಸಾ ಮತ್ತು ಪ.ಬಂಗಾಲಕ್ಕೆ ಡಾನಾ ಚಂಡಮಾರುತ ಅಪ್ಪಳಿಸಿದ್ದು ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ*.