*ಪಾರದರ್ಶಕತೆ ಕಾಪಾಡಿಲ್ಲವೆಂದು ನ್ಯಾಯಾಲಯ ಮೆಟ್ಟಿಲೇರಿದ್ದ ಆರು ಪಾಲಕರು*
ಹುಬ್ಬಳ್ಳಿ: 19 ಮತ್ತು 23 ವಯೋಮಿತಿಯ ಧಾರವಾಡ ವಲಯ ಮಟ್ಟದ ಕ್ರಿಕೆಟ್ ತಂಡದ ಆಯ್ಕೆಯಲ್ಲಿ KSCA ಧಾರವಾಡ ವಲಯ ಪಾರದರ್ಶಕತೆ ಕಾಪಾಡಿಕೊಂಡಿಲ್ಲ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ ಸಂತ್ರಸ್ತ ಕ್ರೀಡಾಪಟುಗಳ ಪಾಲಕರ ಮನವಿ ಪುರಸ್ಕರಿಸಿ, ನಗರದ ಪ್ರಧಾನ ದಿವಾಣಿ ನ್ಯಾಯಾಲಯ (ಕಿರಿಯ ವಿಭಾಗ) ಪ್ರತಿವಾದಿಗೆ ಇಂದು ತುರ್ತು ನೋಟಿಸ್ ಜಾರಿ ಮಾಡಿ ಆದೇಶಿಸಿದೆ.
ಲಕ್ಷ್ಮಿಬಾಯಿ ರಾಘವೇಂದ್ರ ಶೆಲ್ಲೇದ ಸಹಿತ ಒಟ್ಟು 6 ಜನ ಸಂತ್ರಸ್ತ ಪಾಲಕರು, ಕೆಎಸ್ ಸಿಎ ನಿಮಂತ್ರಕ ನಿಖಿಲ್ ಭೂಸದ, 19 ಮತ್ತು 23 ವಯೋಮಿತಿಯ ಧಾರವಾಡ ಝೋನ್ ಗಾಗಿ ನಡೆದಿರುವ ಆಯ್ಕೆಯಲ್ಲಿ ಕೆಎಸ್ ಸಿಎ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಿದ್ದಾರೆ.
ಆ ಮೂಲಕ ನಿಮಂತ್ರಕ ನಿಖಿಲ್ ಭೂಸದ, ನೂರಾರು ಪ್ರತಿಭಾವಂತ ಕ್ರಿಕೆಟ್ ಪಟುಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಸಂತ್ರಸ್ತರ ಪಾಲಕರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಬಿ.ಎಸ್. ಅಸುಂಡಿ, ಕೆಎಸ್ ಸಿಎ ಧಾರವಾಡ ಘಟಕದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಯಶಸ್ವಿಯಾದ ಹಿನ್ನೆಲೆಯಲ್ಲಿ ಅರ್ಜಿದಾರರ ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಪ್ರತಿವಾದಿ ನಿಖಿಲ್ ಭೂಸದ ಅವರಿಗೆ, ನ್ಯಾಯಾಲಯಕ್ಕೆ ತುರ್ತು ಹಾಜರಾಗುವಂತೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಇದೇ 23 ಕಾಯ್ದಿರಿಸಿ ಆದೇಶ ನೀಡಿದ್ದಾರೆ.
ಇತ್ತೀಚೆಗೆ ಕ್ರಿಕೆಟ್ ಪ್ರತಿಭೆಗಳ ಪಾಲಕರು ರಾಜಾಜಿನಗರ ಮೈದಾನ ಬಳಿ ಮಾಧ್ಯಮಗಳ ಮುಂದೆ ನಿಮಂತ್ರಕರಿಂದ ಆದ ಅನ್ಯಾಯ ಹೇಳಿ ತದನಂತರ ಕೋರ್ಟ್ ಮೆಟ್ಟಿಲೇರಿದ್ದರು.ಈಗಾಗಲೆ KSCA ಧಾರವಾಡ ವಲಯದ ಅನೇಕರು ಬೆಂಗಳೂರಿನಲ್ಲಿ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ.
“ಇಡೀ ಧಾರವಾಡ ವಲಯವನ್ನು ನಿಮಂತ್ರಕರು ತಮ್ಮ ಸ್ವಂತದ್ದು ಎಂಬಂತೆ ಮಾಡಿಕೊಂಡಿದ್ದಾರೆ. ಅನೇಕ ಪ್ರತಿಭಾವಂತ ಕ್ರಿಕೆಟ್ ಪಟುಗಳ ಭವಿಷ್ಯ ಹಾಳು ಮಾಡುತ್ತಿದ್ದಾರೆ”
*ವೀರೇಶ ಉಂಡಿ, ಉದ್ಯಮಿಗಳು, ಹುಬ್ಬಳ್ಳಿ*