*ಹಾವೇರಿ ಸ್ಪರ್ಧೆಗೆ ಅಂತಿಮ ಹಂತದಲ್ಲಿ ಶಾಕ್ / ಬೊಮ್ಮಾಯಿಗೆ ಮಣೆ*
ಹುಬ್ಬಳ್ಳಿ : ಬಿಜೆಪಿ ಮೊದಲ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹಾವೇರಿ ಟಿಕೆಟ್ ಘೋಷಣೆಯಾಗುವುದರೊಂದಿಗೆ ಸಾಮಾಜಿಕ ಕಳಕಳಿಯ ರಾಜಕಾರಣಿ, ಹುಬ್ಬಳ್ಳಿಯ ಪ್ರತಿಷ್ಠಿತ ವೈದ್ಯ ಡಾ. ಮಹೇಶ ನಾಲವಾಡರಿಗೆ ಮತ್ತೊಮ್ಮೆ ನಸೀಬು ಕೈ ಕೊಟ್ಟಿದೆ.
ತಾವು ನಂಬಿದ ಧುರೀಣರ ಹಸಿರು ನಿಶಾನೆಯೊಂದಿಗೆ ಕಳೆದ ಆರೆಂಟು ತಿಂಗಳಿಂದ ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರತಿಯೊಂದು ತಾಲೂಕುಗಳಲ್ಲೂ ಸಂಪರ್ಕ ಮಾಡಿದ್ದ ಅಲ್ಲದೇ ’ಮೀಟರ್’ ಚಾಲೂ ಸ್ಥಿತಿಯಲ್ಲೇ ಇಟ್ಟಿದ್ದ ನಾಲವಾಡ ಅವರ ಹೆಸರು ಪಟ್ಟಿಯಲ್ಲಿ ಕೊನೆಯ ಕ್ಷಣದವರೆಗೂ ಎರಡನೇ ಸ್ಥಾನದಲ್ಲಿತ್ತು. ರಾಜ್ಯದಲ್ಲಿನ್ನು ನಮಗೆ ಸಿಗುವ ಗೌರವ ಅಷ್ಟೆ ಎಂದು ದಿಲ್ಲಿಯತ್ತ ಮುಖ ಮಾಡುವುದಾಗಿ ಬೊಮ್ಮಾಯಿ ಒಪ್ಪಿಕೊಳ್ಳುವವರೆಗೂ ಇವರಿಗೆ ಟಿಕೆಟ್ ಗ್ಯಾರಂಟಿ ಎಂದೇ ಇತ್ತು. ಈ ಕ್ಷೇತ್ರ ಬಹುಸಂಖ್ಯಾತರಿಗೆ ನಿಕ್ಕಿ ಎಂಬುದನ್ನು ನಿರ್ಧರಿಸಿದ್ದ ಬಿಜೆಪಿ ಪಡೆ, ಇನ್ನೋರ್ವ ಆಕಾಂಕ್ಷಿ ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕಾಂತೇಶ ಸಹ ವ್ಯಾಪಕ ಯತ್ನ ನಡೆಸಿದ್ದರಾದರೂ ಆಂತರಿಕ ವಲಯದಲ್ಲಿ ಅವರಿಗೆ ಕೈ ಕೊಡುವುದು ಪಕ್ಕಾ ಆಗಿತ್ತು.
ಕಳೆದ ವಿಧಾನಸಭೆ ಚುನಾವಣೆ ವೇಳೆ ಸೆಂಟ್ರಲ್ ಕ್ಷೇತ್ರದಿಂದ ಶೆಟ್ಟರ್ ವಿರುದ್ಧ ಎರಡು ಬಾರಿ ಸೆಡ್ಡು ಹೊಡೆದು ನ್ಯಾಯಾಲಯ ಅಂಗಳದಲ್ಲಿ ಗೆಲ್ಲುವ ಅವಕಾಶವಿದ್ದರೂ ಕಮಲ ಮುಡಿದಿದ್ದ ಡಾ. ಮಹೇಶ ನಾಲವಾಡರಿಗೆ ಎಲ್ಲ ಸಿದ್ದತೆ ಮಾಡಿಕೊಳ್ಳಲು ಹೇಳಿದ್ದಾರೆನ್ನಲಾಗಿತ್ತಾದರೂ ಮಹೇಶ ಟೆಂಗಿನಕಾಯಿ ಅವರಿಗೆ ಅಖೈರುಗೊಳಿಸಿದ್ದು ಕೊನೆಯ ಕ್ಷಣದಲ್ಲಿ ವರಿಷ್ಠರು ಆಘಾತ ತಂದಿದ್ದರು. ತದ ನಂತರವೂ ಪಕ್ಷ ಮತ್ತು ಕೇಶವಕುಂಜದ ನಿಷ್ಠರಾಗಿದ್ದ ಇವರಿಗೆ ಹಾವೇರಿ ಕ್ಷೇತ್ರಕ್ಕೆ ತಯಾರಿ ಮಾಡಿಕೊಳ್ಳಲು 6-8ತಿಂಗಳ ಹಿಂದೆಯೇ ಸೂಚಿಸಿದ ಪರಿಣಾಮ ಅಲ್ಲಿ ಬೇರೂರುವ ಯತ್ನ ನಡೆಸಿರುವಾಗಲೇ ನಾನೇನೂ ಆಕಾಂಕ್ಷಿಯಲ್ಲ, ಆರೋಗ್ಯವೂ ಸರಿ ಇಲ್ಲ ಎನ್ನುತ್ತಲೆ ಕೇಂದ್ರ ಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟ ಬೊಮ್ಮಾಯಿ ನಾಲವಾಡರಿಗೆ ಮತ್ತೆ ಶಾಕ್ ನೀಡಿದ್ದಾರೆ.
2013ರಲ್ಲಿ ಸೆಂಟ್ರಲ್ ಕ್ಷೇತ್ರದಿಂದ ಕೈ ಪಾಳೆಯದಿಂದ ಸ್ಪರ್ಧಿಸಿ 40,447 ಮತ ಪಡೆದು ಪರಾಭವಗೊಂಡಿದ್ದ ಡಾ.ನಾಲವಾಡ ೨೦೧೮ರಲ್ಲಿ ಮತ್ತೆ ಕಾಂಗ್ರೆಸ್ನಿಂದ ಸ್ಪರ್ಧಿಸಿ ಶೆಟ್ಟರ್ ವಿರುದ್ದ ಗೆದ್ದೇ ಬಿಟ್ಟರೂ ಎಂಬಂತಹ ವಾತಾವರಣದಲ್ಲಿ 54,488ಮತ ಪಡೆದು ಪರಾಭವಗೊಂಡಿದ್ದರು. ತದನಂತರ ಕೆಲ ಆಂತರಿಕ ಕಾರಣದಿಂದ ಕೈ ಬಿಟ್ಟು ಕಮಲ ಪಡೆಗೆ ಸೇರಿ ಮೂಲ ಕಾರ್ಯಕರ್ತರಿಗಿಂತ ಹೆಚ್ಚು ನಿಷ್ಠಯೊಂದಿಗೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಆದರೆ ಪರಿಸ್ಥಿತಿ ಬದಲಾಗಿ ಶೆಟ್ಟರ್ ಅವರೇ ಪಕ್ಷ ತೊರೆದು ಕೈ ಅಭ್ಯರ್ಥಿಯಾದಾಗ ಕೊನೆ ಕ್ಷಣದವರೆಗೂ ಸೆಡ್ಡು ಹೊಡೆಯುವ ಅವಕಾಶ ಹೊಂದಿದ್ದರು.
ದೂರದೃಷ್ಠಿಯ ಅಲ್ಲದೇ ನಿಜ ಅಭಿವೃದ್ದಿ ಪರ ಚಿಂತನೆ ಹೊಂದಿರುವ ನಾಲವಾಡ ಅವರು ವೈದ್ಯಕೀಯ ವೃತ್ತಿಯಲ್ಲಿ ಸಹ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯಾದ್ಯಂತ ಹೆಸರು ಮಾಡಿದ್ದು ಇವರು ಮೂಲತ: ಕುಮಾರವ್ಯಾಸನ ತವರು ಕೋಳಿವಾಡದವರು ಎಂಬುದು ವಿಶೇಷ.
ಕಾಂಗ್ರೆಸ್ನಲ್ಲಿ ಎರಡು ಬಾರಿ ಟಿಕೆಟ್ ಸಿಕ್ಕಿದರೂ ಗೆಲುವಿನ ಹೊಸ್ತಿಲಲ್ಲಿ ಎಡವಿದರೆ ಬಿಜೆಪಿಯಲ್ಲಿ ಎರಡೂ ಸಲ ಗೆಲುವು ಖಚಿತ ಎಂಬ ವಾತಾವರಣದಲ್ಲಿ ಕೊನೆಯ ಕ್ಷಣದಲ್ಲಿ ಟಿಕೆಟ್ ವಂಚಿತರಾಗುವ ಮೂಲಕ ಅವರಿಗೆ ಅದೃಷ್ಟ ಕೈ ಕೊಟ್ಟಿದೆ ಎನ್ನುವುದಕ್ಕಿಂತ ನಂಬಿದ ನಾಯಕರೇ ಕೈ ಬಿಟ್ಟರೆನ್ನಲಾಗುತ್ತಿದೆ.