*ಸಿದ್ದರಾಮಯ್ಯಗೆ ಹೆಚ್ಚಾದ ಮುಡಾ ಸಂಕಷ್ಟ/ ಸಂಜೆ ವಿಶೇಷ ಸಂಪುಟ ಸಭೆ*
ಬೆಂಗಳೂರು : ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಮುಡಾ ಹಗರಣದ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರು ಇಂದು ಅನುಮತಿ ನೀಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರವಾನೆ ಮಾಡಿದ್ದಾರೆ.
ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, ಮಡಿಕೇರಿಯ ಟಿ.ಜೆ. ಅಬ್ರಾಹಂ ಹಾಗೂ ಪ್ರದೀಪ್ ಎನ್ನುವವರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು.
ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ. ಸಿದ್ದರಾಮಯ್ಯ ಅವರ ಪತ್ನಿ ಹೆಸರಿನಲ್ಲಿ ಅಕ್ರಮವಾಗಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.
ತದನಂತರ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟೀಸ್ ಜಾರಿ ಮಾಡಿದ್ದರು. ಇದೀಗ, ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ.ರಾಜ್ಯಪಾಲ ಗೆಹ್ಲೋಟ್ ಅವರು ‘ಮುಡಾ ಹಗರಣ’ದ ದೂರುದಾರ ಆರ್ಟಿಐ ಕಾರ್ಯಕರ್ತ ಟಿಜೆ ಅಬ್ರಹಾಂ ಅವರನ್ನು ಶನಿವಾರ ಮಧ್ಯಾಹ್ನ 3 ಗಂಟೆಗೆ ರಾಜಭವನದಲ್ಲಿ ಭೇಟಿಯಾಗುವಂತೆ ಸೂಚಿಸಿದ್ದಾರೆ ಎನ್ನದಾಗಿದೆ.
ಕರ್ನಾಟಕದಲ್ಲಿ ಪ್ರಮುಖ ರಾಜಕೀಯ ವಿವಾದವಾಗಿ ಮಾರ್ಪಟ್ಟಿರುವ ಮುಡಾ ಹಗರಣದ ಆರೋಪಗಳು ಮುಡಾದಿಂದ ಭೂ ಮಂಜೂರಾತಿಯಲ್ಲಿನ ಅಕ್ರಮಗಳ ಆರೋಪಗಳನ್ನು ಒಳಗೊಂಡಿವೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಲಾಭ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.