*ಶುಭಾಶಯ ಕೋರಿದ ಸಿಎಂ/ ಜಗದೀಶ ಶೆಟ್ಟರ ಗೆ ಅಭಿನಂದನೆಗಳ ಮಹಾಪೂರ*
ಹುಬ್ಬಳ್ಳಿ : ಸರಳ, ಸಜ್ಜನಿಕೆ ಮತ್ತೊಂದು ಹೆಸರು ಎಂದು ರಾಜ್ಯದಲ್ಲೇ ಮನೆ ಮಾತಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇಂದು 68ನೇ ವಸಂತಕ್ಕೆ ಕಾಲಿಟ್ಟಿದ್ದು ಮಧುರಾ ಕಾಲನಿಯ ಅವರ ನಿವಾಸಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನೂರಾರು ಗಣ್ಯರು , ಸಾವಿರಾರು ಅಭಿಮಾನಿಗಳು, ಹಿತೈಷಿಗಳು ಶುಭಾಶಯ ಕೋರಿದರು.
ಕಳೆದ ಮೂರುವರೆ ದಶಕದಿಂದ ರಾಜಕೀಯದಲ್ಲಿದ್ದು, ರಾಜ್ಯದ ಮುಖ್ಯಮಂತ್ರಿಯ ಹುದ್ದೆಯವರೆಗೆ ಏರಿದ್ದರೂ ಅವರು ವಕೀಲರಾಗಿದ್ದಾಗ ಹೇಗಿದ್ದರೋ ಇಂದು ಹಾಗೆಯೇ ಸರಳತೆಯೆ ಮೈವೆತ್ತವರಂತೆ ಅವರು ಇದ್ದಾರೆ. ಶೆಟ್ಟರ್ ಜನ್ಮದಿನದ ನಿಮಿತ್ತ ವಿವಿಧ ವಾರ್ಡಗಳಲ್ಲಿ ಕಳೆದ ಒಂದು ವಾರದಿಂದ ಆರೋಗ್ಯ ತಪಾಸಣೆ,ನೇತ್ರ ತಪಾಸಣೆ, ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಸಹಿತ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಮುಖಂಡರು ಅವರ ಅಭಿಮಾನಿಗಳು ಕಳೆದ ಒಂದು ವಾರದಿಂದ ಆಯೋಜಿಸುತ್ತಾ ಬಂದಿದ್ದಾರೆ.
ಇಂದು ಎಸ್ ಎಸ್ ಶೆಟ್ಟರ ಫೌಂಡೇಶನ್ ವತಿಯಿಂದ ಸವಾಯಿ ಗಂದರ್ವ ಸಭಾಭವನದಲ್ಲಿ ವಿವಿಧ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಜನ್ಮದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕ ಜೀವನದಲ್ಲಿದ್ದರೂ ಅವರದ್ದು ನಿಷ್ಕಳಂಕ ವ್ಯಕ್ತಿತ್ವ.ಇಲ್ಲಿಯವರೆಗೆ ಅವರ ಎದುರಾಳಿಗಳಿಗೂ ಅವರ ವಿರುದ್ಧ ಯಾವುದೇ ಗಂಭೀರ ಆರೋಪ ಮಾಡಲು ಸಾಧ್ಯವಾಗಿಲ್ಲ. ಸಾಮಾನ್ಯರಿಗೆ ಹೇಗೆ ಸ್ಪಂದಿಸಬೇಕು ಎಂಬುದಕ್ಕೆ ಶೆಟ್ಟರ್ ಮಾದರಿಯಾಗಿದ್ದು ಅವರ ಈ ಗುಣವೇ ಅವರನ್ನು ಮೇಲ್ನೋಟಕ್ಕೆ ವಿರೋಧಿಸುವವರು ಸಹ ಪ್ರೀತಿಸುವಂತೆ ಮಾಡುತ್ತದೆ. ಅದೇ ಕಾರಣಕ್ಕೆ ಅವರಿಗೆ ಸಚಿವ, ಸ್ಪೀಕರ್, ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ ಹುದ್ದೆ ಎಲ್ಲವೂ ಒಲಿದು ಬಂದಿದೆ.
1994ರಲ್ಲಿ ಮೊದಲ ಬಾರಿಗೆ ಕಮಲ ಪಡೆಯಿಂದ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲಿಂದ ಹಿಂತಿರುಗಿ ನೋಡದ ಅವರನ್ನು 2023ರ ಚುನಾವಣೆಯಲ್ಲಿ ಹಿರಿತನ ಕಡೆಗಣಿಸಿದಾಗ ಸ್ವಾಭಿಮಾನಿಯಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಸೋಲು ಎದುರಾದರೂ ಶೆಟ್ಟರ ಪರಿಣಾಮ ಉ.ಕ.ದ ಸುಮಾರು 15-20 ಕ್ಷೇತ್ರಗಳಲ್ಲಿ ಆಗಿ ಕೈ ಪಡೆ ಗೆಲುವು ಸಾಧಿಸಿತು. ಪಕ್ಷ ಅವರನ್ನು ಮೇಲ್ಮನೆ ಸದಸ್ಯರಾಗಿಸಿ ಗೌರವ ನೀಡಿದೆ.
ಮುಂಬರುವ ದಿನಗಳಲ್ಲಿ ಅವರಿಗೆ ಮತ್ತಷ್ಟು ಉನ್ನತ ಅಧಿಕಾರ ದೊರೆಯಲಿ ಎಂಬುದು ಅವರ ಅಸಂಖ್ಯಾತ ಅಭಿಮಾನಿಗಳ ಹಾರೈಕೆಯಾಗಿದೆ.
ಇಂದು ಬೆಳಗ್ಗೆ ಶೆಟ್ಟರ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಗದೀಶ್ ಅವರನ್ನು ಅಭಿನಂದಿಸಿದರು. ಶಿಲ್ಪಾ ಶೆಟ್ಟರ್, ಸಂಕಲ್ಪ ಶೆಟ್ಟರ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಕೋನರೆಡ್ಡಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ನಾಗೇಶ್ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ಸತೀಶ್ ಮೆಹರವಾಡೆ ಇತರರು ಇದ್ದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಶೆಟ್ಟರ್ ಮನೆಗೆ ಅವರು ಬಿಜೆಪಿಯಲ್ಲಿದ್ದಾಗಲೂ ಬಂದಿದ್ದೆ. ನಿನ್ನೆ ಧಾರವಾಡದಲ್ಲಿನ ಕಾರ್ಯಕ್ರಮಕ್ಕೆ ಬಂದಿದ್ದೆ ಇಂದು ಉಪಹಾರಕ್ಕೆ ಬನ್ನಿ ಅಂತ ಶೆಟ್ಟರ್ ಕರೆದಿದ್ದರು.ಆದರೆ ಇವರ ಹುಟ್ಟುಹಬ್ಬ ಅಂತ ಇಲ್ಲಿಗೆ ಬಂದ ಮೇಲೆ ಗೊತ್ತಾಯ್ತು . ಶೆಟ್ಟರ್ ಗೆ ಹುಟ್ಟುಹಬ್ಬ
ಶುಭಾಶಯ ಕೋರಿ ತಿಂಡಿ ತಿಂದಿದ್ದೇವೆ ಎಂದರು.
ಲೋಕಸಭಾ ಟಿಕೆಟ್ ವಿಚಾರದಲ್ಲಿ ಶೆಟ್ಟರ್ ಅವರ ಅಭಿಪ್ರಾಯ ಕೇಳ್ತಾ ಇದ್ದೀವಿ ಅವರನ್ನು ಕೂಡ ಆಕಾಂಕ್ಷಿ ಅಂತ ಅಂದುಕೊಂಡಿದ್ದೀವಿ.ಆದರೆ ಶೆಟ್ಟರ್ ಒಲ್ಲೆ ಎಂದಿದ್ದಾರೆ. ನಮ್ಮ ಶಾಸಕರು, ಕಾರ್ಯಕರ್ತರು ಯಾರಿಗೆ ಹೇಳ್ತಾರೆ ಅವರಿಗೆ ಟಿಕೆಟ್ ಕೊಡುತ್ತೇವೆ.
ಪ್ರತಿ ಜಿಲ್ಲೆಗೂ ಕೂಡ ಒಬ್ಬೊಬ್ಬ ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದೇವೆ.ಅವರು ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಅಭಿಪ್ರಾಯ ಸಂಗ್ರಹಿಸಿದ ಪಟ್ಟಿ ನೀಡಲಿದ್ದು ಅದರ ಆಧಾರದ ಮೇಲೆ ಅವರಲ್ಲಿ ಯಾರೋ ಸೂಕ್ತ ಎಂದು ನಿರ್ಧರಿಸಲಾಗುತ್ತದೆ ಎಂದರು.
ಅಲ್ಪಸಂಖ್ಯಾತ ಮೂರು ಟಿಕೆಟ್ ಬೇಡಿಕೆ ಬಗೆಗೆ ಕೇಳಿದಾಗ
ನಾವು ಹಿಂದೆಯೂ ಕೂಡ ಎರಡು ಕಡೆ ಕೊಟ್ಟಿದ್ದೇವೆ ಈಗಲೂ ಕೂಡ ಕೊಡುತ್ತೇವೆ ಎಂದರು.